Omicron BF.7: ವಿದೇಶದಿಂದ ಬಂದಿದ್ದ ನಾಲ್ವರಿಗೆ ಕೊವಿಡ್ ದೃಢ, ಬೆಂಗಳೂರು ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್
Coronavirus: ನಿನ್ನೆ ವಿದೇಶದಿಂದ ಬಂದಿದ್ದ 119 ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗಿತ್ತು. 119 ಪ್ರಯಾಣಿಕರ ಪೈಕಿ ನಾಲ್ವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಬೆಂಗಳೂರು: ವಿದೇಶದಿಂದ ಬಂದಿದ್ದ ನಾಲ್ವರಿಗೆ ಕೊವಿಡ್ ಸೋಂಕು(Covid 19) ತಗುಲಿರುವುದು ದೃಢ ಪಟ್ಟಿದೆ. ನಿನ್ನೆ ವಿದೇಶದಿಂದ ಬಂದಿದ್ದ 119 ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗಿತ್ತು. 119 ಪ್ರಯಾಣಿಕರ ಪೈಕಿ ನಾಲ್ವರಿಗೆ ಕೊರೊನಾ ಪಾಸಿಟಿವ್(Corona Positive) ವರದಿ ಬಂದಿದೆ. ಸದ್ಯ ನಾಲ್ವರು ಸೋಂಕಿತರಿಗೆ ವೈದ್ಯರು ಐಸೋಲೇಷನ್ ಮಾಡಿದ್ದು ಈ ಮೂಲಕ ವಿದೇಶದಿಂದ ಮರಳಿದ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಮತ್ತೆ ಮಾಹಾಮಾರಿ ಕೊರೊನಾ ಅಲೆ ಬೀಸುತ್ತಿದೆ. ಕಳೆದು ಹೋದ ದಿನಗಳು ಮರುಕಳಿಸುವ ಭೀತಿ ಎದುರಾಗಿದೆ. ಡಿಸೆಂಬರ್22 ರಂದು 16 ಸೋಂಕಿತರು ಪತ್ತೆಯಾಗಿದ್ದರು. ಡಿಸೆಂಬರ್23 ರಂದು 10 ಸೋಂಕಿತರು ಪತ್ತೆ, ಡಿಸೆಂಬರ್ 24 ರಂದು 19 ಸೋಂಕಿತರು ಪತ್ತೆ, ಡಿಸೆಂಬರ್ 25 ರಂದು 22 ಸೋಂಕಿತರು ಪತ್ತೆ ಹೀಗೆ ಸೋಂಕಿತರ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಇದನ್ನೂ ಓದಿ: ಕೋಟಿಗಟ್ಟಲೆ ಜನರಿಗೆ ಕೊರೊನಾವೈರಸ್ ಸೋಂಕು; ಕೋವಿಡ್ನೊಂದಿಗೆ ಬದುಕಲು ಕಲಿಯುತ್ತಿದ್ದಾರೆ ಚೀನಾ ಜನ
ಸದ್ಯ ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ತಳಿ BF.7 ಭೀತಿ ಹಿನ್ನೆಲೆ ರೂಪಾಂತರಿ ತಳಿ BF.7 ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಇಂದು ಮಾಕ್ ಡ್ರಿಲ್ ನಡೆಸುತ್ತಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ.ರಾಮನ್ನಗರ ಆಸ್ಪತ್ರೆ, ESI ಆಸ್ಪತ್ರೆ ಸೇರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ.
ಆಕ್ಸಿಜನ್ ಪೂರೈಕೆ, ಬೆಡ್‌ಗಳ ಸಿದ್ಧತೆ, ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. ಆಕ್ಸಿಜನ್ ಪ್ಲಾಂಟ್‌ಗಳಲ್ಲಿ ಡ್ರೈರನ್ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಕ್ಸಿಜನ್ ಪ್ಲಾಂಟ್‌ಗಳು ಸರಿಯಾಗಿವೆಯೇ ಎಂದು ಪರೀಶಿಲನೆ ನಡೆಸಲಾಗುತ್ತಿದೆ. ಈ ಹಿಂದೆ ಸರಿಯಾದ ಮಾಹಿತಿ ಹಾಗೂ ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿರಲಿಲ್ಲ. ಆದ್ರೀಗ ರೂಪಾಂತರಿ ಆತಂಕ ಇರೋದ್ರಿಂದ ಮಾಕ್ ಡ್ರಿಲ್ ಮಾಡಲು ಇಲಾಖೆ ಮುಂದಾಗಿದೆ. ಈ ಮಾಕ್ ಡ್ರಿಲ್‌ನಲ್ಲಿ ಆಯಾ ಆಸ್ಪತ್ರೆಗಳಿಗೆ ಬೇಕಿರೋ ಸೌಲಭ್ಯಗಳ ಬಗ್ಗೆ ಮನವಿ ಮಾಡಲಾಗುವುದು. ಮುಖ್ಯವಾಗಿ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗದಂತೆ ನೋಡಿಕೊಳ್ಳಲು ತಯಾರಿ ನಡೆಸಲಾಗುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:16 am, Tue, 27 December 22