ಬೆಂಗಳೂರು: ವಾರಾಂತ್ಯಗಳಲ್ಲಿ, ಸಂಜೆ ವೇಳೆ ಪರಿಸರದ ಆನಂದ ಸವಿಯಲು ಕಬ್ಬನ್ ಪಾರ್ಕ್ಗೆ ಹೋಗುತ್ತಿದ್ದ ಮಂದಿಗೆ ಕೆಲವು ನಿಯಮಗಳನ್ನು ಹೇರಲಾಗಿದೆ(Cubbon Park New Rules) . ಕಬ್ಬನ್ ಪಾರ್ಕ್ಗೆ ಭೇಟಿ ನೀಡುವವರು ಪಾರ್ಕ್‌ನಲ್ಲಿ ತಿಂಡಿ ತಿನ್ನುವಂತಿಲ್ಲ. ಪ್ರೇಮಿಗಳು ಅಶ್ಲೀಲವಾಗಿ ವರ್ತಿಸುವಂತಿಲ್ಲ. ಮರ ಏರುವುದು, ಪರಿಸರವನ್ನು ಹಾಳು ಮಾಡುವಂತಿಲ್ಲ ಎಂದು ಹೊಸ ನಿಯಮ ತರಲಾಗಿದೆ. ಸದ್ಯ ಈಗ ಈ ಹೊಸ ನಿಯಮಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆನ್‌ಲೈನ್ ಅರ್ಜಿಯೊಂದು ಹರಿದಾಡುತ್ತಿದ್ದು ಸಹಿ ಸಂಗ್ರಹಿಸಲಾಗುತ್ತಿದೆ. ಹೊಸ ನಿಯಮಗಳ ವಿರುದ್ಧ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗಿದ್ದು ಸೋಮವಾರ, 11 ಗಂಟೆ ಒಳಗೆ 1,290 ಕ್ಕೂ ಹೆಚ್ಚು ಜನರು ಈ ಅಭಿಯಾನದ ಅರ್ಜಿಗೆ ಸಹಿ ಹಾಕಿದ್ದಾರೆ.
ಲಾಭರಹಿತ ಸಂಸ್ಥೆ (NGO) Jhatkaa.org ವಬ್ ಸೈಟ್ ನಲ್ಲಿ ಈ ಬಗ್ಗೆ ಸಲ್ಲಿಸಿರುವ ಆನ್‌ಲೈನ್ ಅರ್ಜಿಯಲ್ಲಿ, ಕಾನೂನು ನಿಯಮಗಳು ಸುರಕ್ಷತೆಯ ಸೋಗಿನಲ್ಲಿ ನೈತಿಕ ಪೊಲೀಸಿಂಗ್ಗೆ ದಾರಿ ಮಾಡಿಕೊಡುವಂತಿದೆ ಈ ಹೊಸ ನಿಯಮಗಳು ಎಂದು ಉಲ್ಲೇಖಿಸಲಾಗಿದೆ.
ಈ ರೀತಿಯ ನಿಯಮಗಳನ್ನು ಮಾಡುವ ಬದಲಿಗೆ, ಕಬ್ಬನ್ ಪಾರ್ಕ್‌ನಲ್ಲಿ ಹೆಚ್ಚಿನ ಡೆಸ್ಟ್ ಬಿನ್ಗಳನ್ನು ಇಡಿ. ಮತ್ತು ಸರಿಯಾದ ಸೂಚನೆಗಳನ್ನು ನೀಡಿ. ಇದರಿಂದ ಕಬ್ಬನ್ ಪಾರ್ಕ್ಗೆ ಬರುವವರು ತಮ್ಮ ಆಹಾರ ತ್ಯಾಜ್ಯವನ್ನು ಪ್ರತ್ಯೇಕವಾದ ಡೆಸ್ಟ್ ಬಿನ್ಗಳಲ್ಲಿ ಎಸೆಯುವಂತಾಗುತ್ತೆ. ಆಗ ಕಬ್ಬನ್ ಪಾರ್ಕ್ ತನ್ನ ಅಂದವನ್ನು ಕಳೆದುಕೊಳ್ಳುವುದಿಲ್ಲ. ಕಬ್ಬನ್ ಪಾರ್ಕ್ ಬೆಂಗಳೂರಿನ ಐಕಾನಿಕ್ ಸ್ಥಳಗಳಲ್ಲಿ ಒಂದಾಗಿದೆ. ನಗರ ಜೀವನದ ಜಂಜಾಟದ ನಡುವೆ ನೆಮ್ಮದಿಯ, ಸುಂದರ ವಾತಾವರಣವನ್ನು ಸೃಷ್ಟಿಸುವ ಈ ತಾಣಕ್ಕೆ ಎಲ್ಲಾ ವಯಸ್ಸಿನ ಜನರು ಬಂದು ಸೇರುತ್ತಾರೆ. ಒಂದಷ್ಟು ಸಮಯ ಕಳೆದು ಮನಸ್ಸು ನಿರಾಳ ಮಾಡಿಕೊಳ್ಳುತ್ತಾರೆ. ಇದು 300 ಎಕರೆಯ ಹಸಿರು ಸ್ವರ್ಗವಾಗಿದ್ದು, ದಶಕಗಳಿಂದ ಬೆಂಗಳೂರಿನ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಜನ ಭೇಟಿ ನೀಡುವ ಸ್ಥಳವಾಗಿದೆ ಎಂದು Jhatkaa.org ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: Cubbon Park New Rules: ಕಬ್ಬನ್ ಪಾರ್ಕ್ಗೆ ಹೋಗುವ ಪ್ರೇಮಿಗಳೇ ಎಚ್ಚರ! ಈಗ ಬಂದಿದೆ ಹೊಸ ನಿಯಮ
ಆಹಾರ ಸೇವನೆ, ಆಟ ಆಡುವುದು, ಫೋಟೋಗಳನ್ನು ತೆಗೆಯುವುದು, ಪ್ರೇಮಿಗಳು ಪರಸ್ಪರ ಹತ್ತಿರ ಕೂತು ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಇತರೆ ಸಮಸ್ಯೆಗಳು ಕಬ್ಬನ್ ಪಾರ್ಕ್‌ನಲ್ಲಿ ಹೆಚ್ಚಾಗುತ್ತಿದ್ದು ಜನರು ಇದರಿಂದ ಮುಜುಗರಕ್ಕೆ ಇಡಾಗುತ್ತಿದ್ದಾರೆ ಎಂದು ಕೆಲವು ವರದಿಗಳು ಬಂದ ಕಾರಣ ಈ ನಿಯಮಗಳನ್ನು ಜಾರಿ ಮಾಡಿ ಇಲ್ಲಿನ ಸೆಕ್ಯೂರಿಟಿ ಗಾರ್ಡ್ಗಳೇ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ಹೊಸ ನಿರ್ಬಂಧಗಳಿಗೆ ಬೆಂಗಳೂರಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ನಿಯಮಗಳನ್ನು ವಿರೋಧಿಸಿದ್ದು ಮತ್ತೊಂದಷ್ಟು ಮಂದಿ ಬೆಂಬಲಿಸಿದ್ದಾರೆ.
ಕಬ್ಬನ್ ಪಾರ್ಕ್ನ್ನು ಸಂಪೂರ್ಣವಾಗಿ ವಿನಾಶದಿಂದ ರಕ್ಷಿಸಲು ಆಹಾರ ನಿಷೇಧ ಎಂಬ ನಿಯಮವು ಅತ್ಯಂತ ಅಗತ್ಯದ್ದಾಗಿದೆ. ಅನೇಕ ಮಂದಿ ಆಹಾರವನ್ನು ಪ್ಯಾಕ್ ಮಾಡಿಕೊಂಡು ಬಂದು ಪಾರ್ಕ್‌ನಲ್ಲಿ ತಿನ್ನುತ್ತಾರೆ. ಇದರಿಂದ ಉದ್ಯಾನವನ ಸಂಪೂರ್ಣ ಕಸದ ತೊಟ್ಟಿಯಂತಾಗಿರುತ್ತದೆ. ಪಾರ್ಕ್ನ ಸ್ವಚ್ಛತೆ ಎಲ್ಲರಿಗೂ ಸೇರಿದ್ದು ಎಂದು ಇಲ್ಲಿಗೆ ಭೇಟಿ ನೀಡುವ ಮಹಿಳೆಯೊಬ್ಬರಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:00 pm, Mon, 17 April 23