
ಬೆಂಗಳೂರು, ಏಪ್ರಿಲ್ 29: ದೇಶವನ್ನೇ ಬೆಚ್ಚಿಬೀಳಿಸಿದ್ದ ಕಾಶ್ಮೀರದ ಪಹಲ್ಗಾಮ್ ದಾಳಿಯ (Pahalgam Terror Attack) ಬಗ್ಗೆ ಎನ್ಐಎ (NIA) ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದಾರೆ. ಉಗ್ರರ ಗುಂಡೇಟಿಗೆ ಬಲಿಯಾದ, ಬೆಂಗಳೂರಿನ ಮತ್ತಿಕೆರೆಯ ನಿವಾಸಿ ಭರತ್ ಭೂಷಣ್ (Bharath Bhushan) ಮನೆಗೂ ಎನ್ಐಎ ಅಧಿಕಾರಿಗಳ ತಂಡ ಆಗಮಿಸಿದೆ. ಭರತ್ ಭೂಷಣ್ ನಿವಾಸಕ್ಕೆ ಭೇಟಿ ನೀಡಿದ ನಾಲ್ವರು ಅಧಿಕಾರಿಗಳು ದಾಳಿ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಲ್ವರು ಅಧಿಕಾರಿಗಳ ತಂಡ ಭರತ್ ಭೂಷಣ್ ಪತ್ನಿ ಡಾ.ಸುಜಾತಾರನ್ನು ವಿಚಾರಣೆ ನಡೆಸಿದೆ. ಈ ವೇಳೆ ಘಟನೆ ಬಗ್ಗೆ ಕೆಲ ಮಾಹಿತಿ ಕಲೆ ಹಾಕಿದ ತಂಡ, ಶಂಕಿತ ಉಗ್ರರ ರೇಖಾಚಿತ್ರಗಳನ್ನು ತೋರಿಸಿ ಹೇಳಿಕೆ ಪಡೆದಿದ್ದಾರೆ.
ಹೀಗೆ ಎನ್ಐಎ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಉಗ್ರರ ಪೈಶಾಚಿಕ ಕೃತ್ಯವನ್ನು ಕಣ್ಣಾರೆ ಕಂಡಿದ್ದ ಸುಜಾತಾ ಕಂಡಿದ್ದೆಲ್ಲವನ್ನು ವಿವರಿಸಿದ್ದಾರೆ. ಮುಂದೆಯೂ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಇಷ್ಟಲ್ಲದೇ ಉಗ್ರರ ದಾಳಿಗೆ ಬಲಿಯಾದ ಎಲ್ಲರ ಮನೆಗೂ ಹೋಗಿ ಎನ್ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಉಗ್ರರ ದಾಳಿಯಲ್ಲಿ ಹತರಾಗಿದ್ದ ಶಿವಮೊಗ್ಗದ ಮಂಜುನಾಥ್ ಅವರ ಮನೆಗೂ ತೆರಳಿ ಅವರ ಪತ್ನಿ ಪಲ್ಲವಿ ಅವರಿಂದ ಎನ್ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಲಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದರಲ್ಲಿ 25 ಮಂದಿ ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ವ್ಯಕ್ತಿ ಸೇರಿದ್ದಾನೆ. ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸಹ ಘಟನೆಯಲ್ಲಿ ಸಾವಿಗೀಡಾಗಿದ್ದರು.
ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’