ಕನ್ನಡ ಅದ್ಭುತ ಭಾಷೆ, ಕಲಿತು ಮಾತನಾಡಿ: ಕ್ಯಾಲಿಫೋರ್ನಿಯಾ ಬುರೀಟೊ ಸ್ಥಾಪಕ ಬರ್ಟ್ ಮುಲ್ಲರ್ ಕರೆ
ಹೊರಗಿನವರು ಬೆಂಗಳೂರಿಗೆ, ಅದರಲ್ಲಿಯೂ ಕರ್ನಾಟಕಕ್ಕೆ ಬಂದರೆ ಕನ್ನಡ ಮಾತನಾಡುವುದಿಲ್ಲ. ಸ್ಥಳೀಯ ಭಾಷೆ ಕಲಿಯಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಸಾಮಾನ್ಯ. ಅಂಥದ್ದರಲ್ಲಿ ಇದೀಗ ಅಮೆರಿಕ ಮೂಲದ ಉದ್ಯಮಿ ಬರ್ಟ್ ಮುಲ್ಲರ್ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದರ ಜತೆಗೆ, ಬೆಂಗಳೂರಿಗೆ ಬರುವವರೆಲ್ಲ ಕನ್ನಡ ಮಾತನಾಡಲು ಕಲಿಯಿರಿ ಎಂದು ಕರೆ ಕೊಟ್ಟಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ಬೆಂಗಳೂರು, ಏಪ್ರಿಲ್ 29: ‘ಬೆಂಗಳೂರು (Bengalru) ಎಂಬುದು ಭಾರತದ ಅಮೆರಿಕ (America of India). ಕನ್ನಡ ಒಂದು ಅದ್ಭುತ ಭಾಷೆ. ಇಲ್ಲಿಗೆ ಬರುವವರೆಲ್ಲ ಕನ್ನಡ ಕಲಿತು ಮಾತನಾಡಲು ಯತ್ನಿಸಬೇಕು’. ಹೀಗೆ ಹೇಳಿದ್ದು ಕರ್ನಾಟಕದ ವ್ಯಕ್ತಿಯಲ್ಲ! ಬೆಂಗಳೂರಿನವರಂತೂ ಅಲ್ಲವೇ ಅಲ್ಲ! ಅಮೆರಿಕದ ಮೂಲದ ಉದ್ಯಮಿ, ಕ್ಯಾಲಿಫೋರ್ನಿಯಾ ಬುರೀಟೊ ಸಂಸ್ಥಾಪಕ ಬರ್ಟ್ ಮುಲ್ಲರ್ (Bert Mueller) ಕನ್ನಡ ಕಲಿಯುವಂತೆ ಕರೆ ನೀಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
13 ವರ್ಷ ವಯಸ್ಸಿನವರಿದ್ದಾಗ ಅಮೆರಿಕ ತೊರೆದು ಭಾರತಕ್ಕೆ ಬಂದು ಇಲ್ಲಿಯೇ ಅಧ್ಯಯನ ನಡೆಸಿ ದಕ್ಷಿಣ ಕ್ಯಾಲಿಫೋರ್ನಿಯಾ ಮಾದರಿಯ ಬುರೀಟೊ ರೆಸ್ಟೋರೆಂಟ್ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ ಬರ್ಟ್ ಮುಲ್ಲರ್ ಸಂದರ್ಶನವೊಂದರಲ್ಲಿ ಕನ್ನಡದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ.
ಕನ್ನಡದ ಬಗ್ಗೆ ಬರ್ಟ್ ಮುಲ್ಲರ್ ಹೇಳಿದ್ದೇನು?
ನಾವು ನಮ್ಮವರದ್ದಲ್ಲದ ಸ್ಥಳಕ್ಕೆ ಬಂದಾಗಲೆಲ್ಲಾ, ಆ ಸ್ಥಳದ ಸಂಸ್ಕೃತಿಯ ಬಗ್ಗೆ ಸ್ವಲ್ಪ ಕಲಿಯಲು ಪ್ರಯತ್ನಿಸಬೇಕು ಎಂದು ನಾನು ಭಾವಿಸುತ್ತೇನೆ. ನಾನು ಸ್ವಲ್ಪ ಸ್ವಲ್ಪ ಕನ್ನಡ ಭಾಷೆ ಮಾತನಾಡುತ್ತೇನೆ. ಕನ್ನಡ ಒಂದು ಅದ್ಭುತ ಭಾಷೆ. ಕರ್ನಾಟಕಕ್ಕೆ ಬರುವ ಎಲ್ಲರೂ ಕನ್ನಡ ಭಾಷೆ ಕಲಿಯಬೇಕು. ಮಾತನಾಡಬೇಕು ಎಂದು ಬರ್ಟ್ ಮುಲ್ಲರ್ ಹೇಳಿದ್ದಾರೆ.
ಬರ್ಟ್ ಮುಲ್ಲರ್ ಕನ್ನಡ ಮಾತಿನ ವಿಡಿಯೋ
Bert Mueller likes to call Bengaluru the ‘America of India’. He says Kannada is a wonderful language, and people who come here should try to learn and speak Kannada. https://t.co/F8KH9cE4ZU pic.twitter.com/7AaKsqhcqp
— ವಿಜಯಶ್ರೇಷ್ಠ (@Vijayashresta) April 28, 2025
ಕನ್ನಡದ ನಟರಾದ ಅಂಬರೀಷ್, ಕಿಚ್ಚ ಸುದೀಪ್ ಅವರ ಕೆಲವು ಸಿನಿಮಾಗಳನ್ನು ನೋಡಿದ್ದಾಗಿಯೂ ಬರ್ಟ್ ಮುಲ್ಲರ್ ಹೇಳಿದ್ದಾರೆ.
ಇದನ್ನೂ ಓದಿ: ಉಗ್ರರ ದಾಳಿ: ಬೆಂಗಳೂರಿನಿಂದ ಕಾಶ್ಮೀರಕ್ಕೆ ತೆರಳುವ ವಿಮಾನ ಪ್ರಯಾಣ ದರ ಇಳಿಕೆ
35 ವರ್ಷ ವಯಸ್ಸಿನ ಮುಲ್ಲರ್, 2010 ರಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದರು. ಅನೇಕ ಸ್ನೇಹಿತರು ಯುರೋಪ್ ಮತ್ತು ಸ್ಪೇನ್‌ನಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದಾಗ, ಮುಲ್ಲರ್ ಬೆಂಗಳೂರಿನಲ್ಲಿ ಉಳಿಯುವ ನಿರ್ಧಾರ ಕೈಗೊಂಡಿದ್ದರು. ನಂತರ ಇಲ್ಲಿ ಕ್ಯಾಲಿಫೋರ್ನಿಯಾ ಬುರೀಟೊ ರೆಸ್ಟೋರೆಂಟ್ಗಳನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾದರು ಎಂದು ವರದಿಯೊಂದು ತಿಳಿಸಿದೆ.