ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್ಗೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಪ್ರಸಿದ್ಧ ಪ್ರವಾಸಿ ತಾಣವೂ ಆಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನೂ ಸಹ ಸೈಬರ್ ವಂಚಕರು ಗುರಿಯಾಗಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಆರಂಭಿಸಿ, ಟಿಕೆಟ್ ಹೆಸರಿನಲ್ಲಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಉದ್ಯಾನವನ ಆಡಳಿತ ಮನವಿ ಮಾಡಿದೆ.

ಆನೇಕಲ್, ಏಪ್ರಿಲ್ 29: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನ (Bannerghatta National Park) ಹೆಸರಿನಲ್ಲಿ ಆನ್ಲೈನ್ ವಂಚಕರು (Online Fraud) ನಕಲಿ ವೆಬ್‌ಸೈಟ್ (Fake Website) ಆರಂಭಿಸಿ ಸಾರ್ವಜನಿಕರಿಗೆ ವಂಚನೆ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್ಗೆ ಆನ್ಲೈನ್ ಮೂಲಕ ಟಿಕೆಟ್ ಪಡೆಯಲು ಮುಂದಾದ ಗ್ರಾಹಕರನ್ನು ಈ ನಕಲಿ ವೆಬ್‌ಸೈಟ್ ಮೂಲಕ ಯಾಮಾರಿಸಲಾಗುತ್ತಿದೆ. ಇದರಿಂದಾಗಿ ಪ್ರವಾಸಿಗರು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಬನ್ನೇರುಘಟ್ಟ ಉದ್ಯಾನವನ ಹೆಸರಿನಲ್ಲಿ ವಂಚನೆ ಹೇಗೆ?
ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೆಸರಿನಲ್ಲಿ ನಕಲಿ ವೆಬ್ಸೈಟೊಂದು (https://bannerghattanationalpark.org) ಕಾರ್ಯಾಚರಿಸುತ್ತಿದೆ. ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್ಗೆ ಟಿಕೆಟ್ ಬುಕಿಂಗ್ ಹೆಸರಿನಲ್ಲಿ ವಂಚನೆ ಎಸಗಲಾಗುತ್ತಿದೆ. ನಕಲಿ ವೆಬ್ಸೈಟ್ನಲ್ಲಿ ಡೊನೇಷನ್ ಲಿಂಕ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯ ಲಿಂಕ್ ಎಂಬ ಪೇಜೊಂದು (payments@banbanjara.com) ತೆರೆದುಕೊಳ್ಳುತ್ತದೆ. ಸದ್ಯ, ಈವರೆಗೆ ಯಾವುದೇ ಪ್ರವಾಸಿಗರು ಮೋಸ ಹೋದ ಬಗ್ಗೆ ದೂರುಗಳನ್ನು ದಾಖಲಿಸಿಲ್ಲ.
‘ವೆಬ್‌ಸೈಟ್ ಪರಿಶೀಲನೆ ನಡೆಸಿದ ವೇಳೆ ಫೇಕ್ ವೆಬ್‌ಸೈಟ್ ಪತ್ತೆಯಾಗಿದೆ. ಅದರಲ್ಲಿ ಬನ್ನೇರುಘಟ್ಟ ಜೂ, ಸಫಾರಿಗೆ ಟಿಕೆಟ್ ಬುಕ್ ಮಾಡಿದ್ದು ನನ್ನ ವೈಯಕ್ತಿಕ ಅಕೌಂಟ್ನಿಂದ 2 ಸಾವಿರ ರೂ. ಹಣ ಪಾವತಿ ಆಗಿದೆ. ಹಾಗಾಗಿ ಪ್ರವಾಸಿಗರು ಯಾರೂ ವಂಚನೆಗೆ ಒಳಗಾಗಬಾರದು’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮನವಿ ಮಾಡಿದ್ದಾರೆ.
ಅಲ್ಲದೆ, ನಕಲಿ ವೆಬ್‌ಸೈಟ್ ವಿಚಾರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಸೂರ್ಯಸೇನ್ ದೂರು ದಾಖಲಿಸಿದ್ದಾರೆ.
ಪ್ರವಾಸಿಗರೇ ಗಮನಿಸಿ
ಮೇಲೆ ಉಲ್ಲೇಖಿಸಿರುವ ವೆಬ್ಸೈಟ್ಗಳು ನಕಲಿ ಆಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನ್ಲೈನ್ ಟಿಕೇಟ್ ಬುಕಿಂಗ್‌ಗಾಗಿ ಅಧಿಕೃತ ವೆಬ್‌ಸೈಟ್ https://bannerughattabiopark.org/ ಇದನ್ನೇ ಬಳಸಬೇಕು ಎಂದು ಸೂರ್ಯಸೇನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್ಲೈನ್ ವಂಚನೆ: ಈ ಸ್ಕ್ಯಾಮ್ಗಳ ಬಗ್ಗೆ ಎಚ್ಚರದಿಂದಿರಿ
ಈಗಾಗಲೇ ಬ್ಯಾಂಕ್, ಷೇರು ಮಾರುಕಟ್ಟೆ ಹೂಡಿಕೆ, ಡಿಜಿಟಲ್ ಅರೆಸ್ಟ್ ಇತ್ಯಾದಿಗಳ ಮೂಲಕ ಸೈಬರ್ ಅಪರಾಧಿಗಳು ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿವೆ. ಇದೀಗ ಉದ್ಯಾನವನಗಳು, ಪ್ರವಾಸಿ ತಾಣಗಳ ಆನ್ಲೈನ್ ಬುಕಿಂಗ್ ಹೆಸರಿನಲ್ಲಿಯೂ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.