ಲಾಂಗ್ ವೀಕೆಂಡ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ: ಇಲ್ಲಿದೆ ವಿವರ
NWKRTC Special Buses: ದೀರ್ಘ ವಾರಾಂತ್ಯ ಇರುವ ಕಾರಣ ಪ್ರಯಾಣಿಕರ ದಟ್ಟಣೆ ನಿರ್ವಹಿಸುವುದಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ ವಿಶೇಷ ಬಸ್ಗಳ ಸೌಲಭ್ಯ ಕಲ್ಪಿಸಿದೆ. ಬಸವ ಜಯಂತಿ ಹಾಗೂ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಹೆಚ್ಚುವರಿ ಬಸಗಳ ಸೌಲಭ್ಯ ಕಲ್ಪಿಸಿರುವುದಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ, ಏಪ್ರಿಲ್ 29: ಬಸವ ಜಯಂತಿ, ಕಾರ್ಮಿಕರ ದಿನಾಚರಣೆ ರಜೆ ಹಾಗೂ ವಾರಾಂತ್ಯದ ರಜೆಗಳ (Weekend Holidays) ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ಗಳ ಸೇವೆ (NWKRTC Special Buses) ಕಲ್ಪಿಸಲು ಮುಂದಾಗಿದೆ. ಈ ವಿಚಾರವಾಗಿ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಹೆಚ್ಚುವರಿ ಬಸ್ ಸಂಚಾರದ ಮಾಹಿತಿ ನೀಡಿದೆ. ಬೆಂಗಳೂರು (Bengalru) ಹಾಗೂ ಇತರ ಪ್ರಮುಖ ಸ್ಥಳಗಳಿಂದ ವಿಶೇಷ ಬಸ್ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ.
30 ರಂದು ಬುಧವಾರ ಬಸವ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರದ ವತಿಯಿಂದ ರಜೆ ಘೋಷಿಸಲಾಗಿದೆ. ಮೇ 1 ರಂದು ಗುರುವಾರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇದೆ. ಶುಕ್ರವಾರ ಒಂದು ದಿನ ಕಳೆದರೆ ಶನಿವಾರ ಹಾಗೂ ಭಾನುವಾರ ವಾರಾಂತ್ಯದ ರಜೆಗಳಿವೆ. ಹೀಗಾಗಿ ಸಾಲು ರಜೆಗಳ ಕಾರಣ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ.
ವಿಶೇಷ ಬಸ್ಗಳ ಕಾರ್ಯಾಚರಣೆ ಎಲ್ಲೆಲ್ಲ?
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಇತರೇ ಪ್ರಮುಖ ಸ್ಥಳಗಳು / ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ಗಳು ಕಾರ್ಯಾಚರಿಸಲಿವೆ. ಅದರಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಿಂದ ಬೆಂಗಳೂರು ಹಾಗೂ ಇತರೆ ಪ್ರಮುಖ ಸ್ಥಳಗಳಿಗೆ ಹೋಗಲು ದಿನಾಂಕ:01-05-2025, 04-05-2025 ಹಾಗೂ 05-05-2025 ರಂದು ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸ್ಥೆ ಮನವಿ ಮಾಡಿದೆ.
ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಿ ಮತ್ತು ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: ಹುಬ್ಬಳ್ಳಿ ಎನ್ಕೌಂಟರ್: ಪೊಲೀಸರಿಗೆ ತನಿಖೆ ಬಿಸಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಎಂಟ್ರಿ
ಬೇಸಿಗೆ ರಜೆಯ ಸಂಚಾರ ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ಈಗಾಗಲೇ ಅನೇಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ನಡೆಸುತ್ತಿದೆ. ಬೆಂಗಳೂರಿನಿಂದ ಬೆಳಗಾವಿ, ಯಶವಂತಪುರದಿಂದ ವಿಜಯಪುರ, ಬೆಂಗಳೂರು ಮಧುರೈ ವಿಶೇಷ ರೈಲುಗಳು ಸಂಚಾರ ಮಾಡುತ್ತಿವೆ. ಇದೀಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡ ವಿಶೇಷ ಬಸ್ಗಳ ಮೂಲಕ ಪ್ರಯಾಣಿಕರ ಅನುಕೂಲಕ್ಕೆ ಕ್ರಮ ಕೈಗೊಂಡಿದೆ.