ಬೆಂಗಳೂರು: ಪಾಕಿಸ್ಥಾನ ಮೂಲದ ಮಹಿಳೆ ಇಕ್ರಾ ಜಿವಾನಿ ಗಡಿ ದಾಡಿ ಭಾರತಕ್ಕೆ ಬಂದು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಪ್ರಕರಣ ಸಂಬಂಧ ಪೊಲೀಸರು ಮಹಿಳೆಯನ್ನು ಮರಳಿ ಪಾಕಿಸ್ತಾನಕ್ಕೆ ಕಳಿಸಲು ಸಿದ್ಧತೆ ನಡೆಸಿದ್ದರು. ಆದರೆ ಇಕ್ರಾ ಜಿವಾನಿ ಮಾತ್ರ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ನಾನು ಭಾರತದ ಮುಲಾಯಂ ಸಿಂಗ್ನನ್ನು ಮದುವೆ ಆಗಿದ್ದೇನೆ. ನಾನು ಪತಿ ಮುಲಾಯಂ ಸಿಂಗ್ನನ್ನು ಬಿಟ್ಟು ಹೋಗಲ್ಲ ಎಂದು ಪೊಲೀಸರ ಕಾಲು ಹಿಡಿದು ಬೇಡಿಕೊಂಡಿದ್ದಾಳೆ.
ಸದ್ಯ ಇಕ್ರಾ ಜಿವಾನಿ ಎಫ್ಆರ್ಆರ್ಒ ಅಧೀನದಲ್ಲಿದ್ದಾಳೆ. ಇನ್ನೂ ಯುವತಿ ಭಾರತಕ್ಕೆ ಬಂದಿರೋದೆ ಅಕ್ರಮವಾದ ಕಾರಣ ಅಧಿಕಾರಿಗಳು ಯುವತಿಯನ್ನು ಪಾಕಿಸ್ತಾನಕ್ಕೆ ಡಿಪೋರ್ಟ್ ಮಾಡಲು ತಯಾರು ಮಾಡಿಕೊಳ್ಳುತ್ತಿದ್ದಾರೆ. ಯುವತಿಯನ್ನು ಕಳುಹಿಸಲು ಸುಮಾರು ಎರಡು ತಿಂಗಳು ಸಮಯ ಬೇಕಾಗುತ್ತದೆ. ಪಾಕಿಸ್ತಾನದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕಾಗುತ್ತದೆ. ಈ ನಡುವೆ ಮದುವೆ ಕಾರಣ ಕೊಟ್ಟು ಯುವತಿ ರಂಪಾಟ ಮಾಡುತ್ತಿದ್ದಾಳೆ.
ಇದನ್ನೂ ಓದಿ: ಪಾಕಿಸ್ತಾನ್ ಟು ಇಂಡಿಯಾ ಲವ್ ಸ್ಟೋರಿ: ಇಕ್ರಾ-ಮುಲಾಯಂ ಪ್ರೀತಿ ಕಥೆಯಲ್ಲಿ ಅನುಮಾನ, ಈ ಜೋಡಿ ಗಡಿ ಪ್ರವೇಶಿಸಿದ್ದು ಹೇಗೆ?
ಇಕ್ರಾ ಜಿವಾನಿ ಮತ್ತು ಮುಲಾಯಂ ಸಿಂಗ್ ಮದುವೆ ಬಗ್ಗೆಯೇ ಪೊಲೀಸರಿಗೆ ಅನುಮಾನ ಮೂಡಿದೆ. ಪೊಲೀಸರ ವಿಚಾರಣೆ ವೇಳೆ ಇಬ್ಬರು ಮದುವೆಯಾಗಿದ್ದೀವಿ ಎಂದಿದ್ದಾರೆ. ಅದರೆ ಮದುವೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆ, ಪೋಟೊಗಳಿಲ್ಲ. ಮದುವೆಯಾದ ಬಗ್ಗೆ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಇಲ್ಲ. ಬೇರೆ ದಾಖಲಾತಿಗಳು ಕೂಡ ಪತ್ತೆಯಾಗಿಲ್ಲ. ಈ ರೀತಿ ಮದುವೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ವಿದೇಶಿ ಮಹಿಳೆಯನ್ನ ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು. ಈ ಹಿನ್ನೆಲೆ ಮುಲಾಯಂ ಸಿಂಗ್ ಯಾದವ್ನನ್ನು ಕಸ್ಟಡಿಗೆ ಪಡೆದು ಪೊಲೀಸರ ವಿಚಾರಣೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಹಲವು ಆಯಾಮಗಳಲ್ಲಿ ಬೆಳ್ಳಂದೂರು ಪೊಲೀಸರು ತನಿಖೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ