Paresh Mesta: ಪರೇಶ್​ ಮೇಸ್ತ ಸಾವು ಆಕಸ್ಮಿಕ ಎಂದ ಸಿಬಿಐ; ಮುಜುಗರಕ್ಕೆ ಸಿಲುಕಿದ ಬಿಜೆಪಿ, ಕಾಂಗ್ರೆಸ್​ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 04, 2022 | 1:10 PM

ಹೊನ್ನಾವರದ ಪರೇಶ್ ಮೇಸ್ತಾ ಅವರದು ಸಹಜ ಸಾವು ಎಂದು ಸಿಬಿಐ ತನ್ನ ವರದಿಯಲ್ಲಿ ನಮೂದಿಸಿರುವುದು ಆಡಳಿತಾರೂಢ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

Paresh Mesta: ಪರೇಶ್​ ಮೇಸ್ತ ಸಾವು ಆಕಸ್ಮಿಕ ಎಂದ ಸಿಬಿಐ; ಮುಜುಗರಕ್ಕೆ ಸಿಲುಕಿದ ಬಿಜೆಪಿ, ಕಾಂಗ್ರೆಸ್​ ವಾಗ್ದಾಳಿ
ಮೃತ ಪರೇಶ್ ಮೇಸ್ತ ಮತ್ತು ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು: ಹೊನ್ನಾವರದ ಪರೇಶ್ ಅವರದು ಸಹಜ ಸಾವು ಎಂದು ಕೇಂದ್ರೀಯ ತನಿಖಾ ದಳವು (Central Bureau of Investigation – CBI) ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ನಾಲ್ಕೂವರೆ ವರ್ಷಗಳ ಸುದೀರ್ಘ ತನಿಖೆಯ ನಂತರ ಸಿಬಿಐ 1,500 ಪುಟಗಳ ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಿಬಿಐ ಅಧಿಕಾರಿಗಳು ಭಾನುವಾರ (ಅ 2) ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯವು ಸೋಮವಾರ ಸ್ವೀಕರಿಸಿತು. ಪ್ರಕರಣದ ಮುಂದಿನ ವಿಚಾರಣೆಯು ನ.16ರಂದು ನಡೆಯಲಿದೆ. ಡಿಸೆಂಬರ್ 6, 2017ರಂದು ಹೊನ್ನಾವರದಲ್ಲಿ ನಡೆದಿದ್ದ ಗಲಭೆಯಲ್ಲಿ ಮೀನುಗಾರ ಪರೇಶ್ ಮೇಸ್ತ ಸಾವನ್ನಪ್ಪಿದ್ದರು. ಇದು ಕೊಲೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು. ನಂತರದ ದಿನಗಳಲ್ಲಿ ಕರಾವಳಿಯಲ್ಲಿ ಕೋಮುಗಲಭೆಗಳು ಆರಂಭವಾಗಿದ್ದವು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದರು.

ಮುಜುಗರಕ್ಕೆ ಸಿಲುಕಿದ ಬಿಜೆಪಿ

ಹೊನ್ನಾವರದ ಪರೇಶ್ ಮೇಸ್ತ ಅವರದು ಸಹಜ ಸಾವು ಎಂದು ಸಿಬಿಐ ತನ್ನ ವರದಿಯಲ್ಲಿ ನಮೂದಿಸಿರುವುದು ಆಡಳಿತಾರೂಢ ಬಿಜೆಪಿಗೆ ಮುಜುಗರ ಉಂಟು ಮಾಡಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವನ್ನು ಕರಾವಳಿ ಭಾಗದಲ್ಲಿ ಚುನಾವಣಾ ವಿಷಯವನ್ನಾಗಿಸಿದ್ದ ಬಿಜೆಪಿ ನಾಯಕರ ಪೈಕಿ ಬಹುತೇಕರು ಮೌನ ಮುರಿಯುತ್ತಿಲ್ಲ. ಸಿಬಿಐ ವರದಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ ದಸರಾ ಹಬ್ಬದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ಮೃತನ ತಂದೆ ಬೇಸರ

ಮೃತ ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಸಿಬಿಐ ವರದಿ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ವರದಿಯು ತೃಪ್ತಿ ನೀಡಿಲ್ಲ ಎಂದು ಹೊನ್ನಾವರದಲ್ಲಿ ಮೃತ ಪರೇಶ್ ಮೇಸ್ತ ತಂದೆ ಬೇಸರ ವ್ಯಕ್ತಪಡಿಸಿದರು. ಸಿಬಿಐನಿಂದ ನಮಗೆ ನ್ಯಾಯ ಸಿಗಬಹುದು ಎಂದುಕೊಂಡಿದ್ದೆ. ಕುಟುಂಬಸ್ಥರು, ಮುಖಂಡರ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗಲೂ ಹೇಳ್ತೇನೆ ನನ್ನ ಮಗನದ್ದು ಸಹಜ ಸಾವಲ್ಲ, ಹತ್ಯೆ ಎಂದು ಪ್ರತಿಪಾದಿಸಿದರು.

ಪೊಲೀಸ್ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಿಲ್ಲ. ಪೊಲೀಸ್ ಇಲಾಖೆ, ಆಗಿನ ಸರ್ಕಾರ ಸರಿಯಾಗಿ ಸಹಕರಿಸಿಲ್ಲ. ಅಂದಿನ ಸರ್ಕಾರವು ನಮಗೆ ಅನ್ಯಾಯ ಮಾಡಿದೆ. ಎಲ್ಲ ರೀತಿಯ ಸಾಕ್ಷಿಗಳನ್ನೂ ನಾಶ ಮಾಡಿದ್ದಾರೆ. ನಾಲ್ಕು ತಿಂಗಳ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: PFI Ban: ಪಿಎಫ್​ಐ ನಿಷೇಧಕ್ಕೆ ದಿವಂಗತ ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಸ್ವಾಗತ

ಕ್ಷಮೆ ಕೇಳುವುದೇನಿದೆ: ಛಲವಾದಿ ನಾರಾಯಣಸ್ವಾಮಿ

ಪರೇಶ್ ಮೇಸ್ತ ಸಾವಿನ ತನಿಖಾ ವರದಿ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಇದು ಮಾನ, ಮರ್ಯಾದೆಯ ಪ್ರಶ್ನೆ ಅಲ್ಲ. ಕೊಲೆಯೋ, ಅಲ್ಲವೋ ಎಂದು ಗೊತ್ತಾಗುವುದು ವರದಿ ಬಳಿಕವಷ್ಟೇ. ಈಗ ಸಿಬಿಐ ರಿಪೋರ್ಟ್ ಬಂದಿದೆ, ಅದನ್ನು ನಾವು ಸ್ವೀಕರಿಸಬೇಕಷ್ಟೇ. ಇದರಲ್ಲಿ ಕ್ಷಮೆ ಕೇಳುವುದು ಏನಿದೆ? ಸಿದ್ದರಾಮಯ್ಯ ಕ್ಷಮೆ ಕೇಳಬೇಕಾದ ವಿಷಯಗಳು ಬಹಳಷ್ಟಿವೆ’ ಎಂದು ಹೇಳಿದರು.

ಪಿಎಫ್​ಐ ನಿಭಾಯಿಸಲು ಸರ್ಕಾರ ಬದ್ಧ

ಬಂಟ್ವಾಳದಲ್ಲಿ ಪಿಎಫ್ಐ ಕಾರ್ಯಕರ್ತರ ರಸ್ತೆ ಬರಹ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಸಂಘಟನೆಯನ್ನು ನಿಷೇಧಿಸಿದರೂ ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಮತ್ತೊಂದು ಹೆಸರಿನಲ್ಲಿ ಮುಂದುವರೆಸುತ್ತಾರೆ ಎಂದು ಮೊದಲೇ ಹೇಳಿದ್ದೆವು. ಪಿಎಫ್ಐ ಬ್ಯಾನ್ ಮಾಡಿದ್ದಕ್ಕೆ ಬಿಜೆಪಿ ವಿರುದ್ಧ ಆ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಕೋಪ ಬರುವುದು ಸಹಜ. ನಮ್ಮ ವಿರುದ್ಧ ತಂತ್ರ, ಕುತಂತ್ರ ಮಾಡುತ್ತಾರೆ. ಅದನ್ನೆಲ್ಲಾ ನಿಭಾಯಿಸುವುದಕ್ಕೆ ನಮ್ಮ ಸರ್ಕಾರ ಸಿದ್ಧವಿದೆ ಎಂದರು.

ಪ್ರಮೋದ್ ಮುತಾಲಿಕ್ ಆಕ್ರೋಶ

ಹೊನ್ನಾವರ ಪರೇಶ್ ಮೇಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ‘ಇದು ಆಕಸ್ಮಿಕ ಸಾವು’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಕ್ಕೆ ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೂರಕ್ಕೆ ನೂರರಷ್ಟು ಪರೇಶ್ ಮೇಸ್ತ ಕೊಲೆಯಾಗಿದೆ. ಸಿಬಿಐ ಸಲ್ಲಿಸಿರುವ ವರದಿಯಿಂದ ಕುಟುಂಬಕ್ಕೆ ಅನ್ಯಾಯ ಆಗಿದೆ. ಅಂದಿನ ಕಾಂಗ್ರೆಸ್​ ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡಿದೆ. ಈಗಿನ ಕೇಂದ್ರ ಸರ್ಕಾರ ಪ್ರಕರಣವನ್ನು ರಿ ಓಪನ್ ಮಾಡಬೇಕು. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಎಚ್ಚರಿಸಿದರು.

ಆಕಸ್ಮಿಕ ಸಾವು ಅಸಾಧ್ಯ: ಶೋಭಾ ಕರಂದ್ಲಾಜೆ

ಸಿಬಿಐ ವರದಿ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪರೇಶ್ ಮೇಸ್ತ ಆಕಸ್ಮಿಕವಾಗಿ ಸಾವನ್ನಪ್ಪಲು ಸಾಧ್ಯವಿಲ್ಲ. ತನಿಖೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಸಿದ್ದರಾಮಯ್ಯನವರು ಯಾವಾಗ ಏನು ಹೇಳ್ತಾರೆ ಗೊತ್ತಿಲ್ಲ. ರಕ್ತದ ಕಲೆ ಅಂಟಿರುವುದು ಅವರ ಕೈಗೆ. ಅವರು ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯ ನೆಪದಲ್ಲಿ ಗಲಭೆ ಮಾಡಿದರು. ಹಿಂದೂ ಕಾರ್ಯಕರ್ತರ ಕೊಲೆಗೆ ಅವರ ನಿರ್ಧಾರವೂ ಕಾರಣವಾಯಿತು. ಪಿಎಫ್​ಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಅವರು ಹೊರಗೆ ಬಂದು ಕೊಲೆ, ದೇಶದ್ರೋಹದ ಚಟುವಟಿಕೆಗಳನ್ನು ನಡೆಸಿದರು ಎಂದು ತಿಳಿಸಿದರು.

Published On - 1:10 pm, Tue, 4 October 22