PFI Ban: ಪಿಎಫ್ಐ ನಿಷೇಧಕ್ಕೆ ದಿವಂಗತ ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಸ್ವಾಗತ
ಆ ಸಂಘಟನೆಯನ್ನು ನಿಷೇಧಿಸದಿದ್ದರೆ ಬಹಳಷ್ಟು ಕಷ್ಟಪಡಬೇಕಾಗಿತ್ತು. ಯಾವುದೇ ಕಾರಣಕ್ಕೂ ಅವರನ್ನು ಬೆಳೆಸಲು ಬಿಡಬಾರದು ಎಂದರು.
ಕಾರವಾರ: ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಿದ್ದನ್ನು ಮೃತ ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಸ್ವಾಗತಿಸಿದ್ದಾರೆ. ಈ ಕುರಿತು ‘ಟಿವಿ9’ಗೆ ಪ್ರತಿಕ್ರಿಯಿಸಿದ ಅವರು, ಉಗ್ರ ಸಂಘಟನೆಯಾಗಿರುವ ಪಿಎಫ್‌ಐ ಹಲವರ ಹತ್ಯೆ ಪ್ರಕರಣಗಳಲ್ಲಿ ಪಾತ್ರ ಹೊಂದಿದೆ. ಪಿಎಫ್ಐ ಸಂಘಟನೆ ಇಷ್ಟರಮಟ್ಟಿಗೆ ಬೆಳೆಯಲು ಕಾಂಗ್ರೆಸ್ ಸರ್ಕಾರವೇ ಮುಖ್ಯ ಕಾರಣ. ನನ್ನ ಮಗ ಪರೇಶ್ ಮೇಸ್ತಾನ ಹತ್ಯೆಯಲ್ಲೂ ಪಿಎಫ್ಐ ಸಂಘಟನೆಯವರ ಕೈವಾಡವಿರಬಹುದು ಎಂದು ನನಗೆ ಅನಿಸುತ್ತಿದೆ ಎಂದು ಹೇಳಿದರು.
ಆ ಸಂಘಟನೆಯನ್ನು ನಿಷೇಧಿಸದಿದ್ದರೆ ಬಹಳಷ್ಟು ಕಷ್ಟಪಡಬೇಕಾಗಿತ್ತು. ಯಾವುದೇ ಕಾರಣಕ್ಕೂ ಅವರನ್ನು ಬೆಳೆಸಲು ಬಿಡಬಾರದು. ಸಮಾಜದ ಜನರು ಶಾಂತಿಯಿಂದ ಬಾಳಬೇಕಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಾವುಕರಾಗಿ ಮಾತನಾಡಿದರು.
ಡಿಸೆಂಬರ್ 8, 2017ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಮೃತದೇಹ ಪತ್ತೆಯಾಗಿತ್ತು. ಅನ್ಯಕೋಮಿನವರೇ ಪರೇಶ್ ಮೇಸ್ತಾನನ್ನು ಕೊಂದಿರಬಹುದು ಎಂದು ಆರೋಪಿಸಿದ್ದ ಹಲವರು, ಪಿಎಫ್‌ಐ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿದ್ದರು. ಇದೀಗ ಪಿಎಫ್ಐ ಸಂಘಟನೆ ನಿಷೇಧಿಸಿರುವುದನ್ನು ಪರೇಶ್ ಮೇಸ್ತಾ ಸ್ವಾಗತಿಸಿದ್ದಾರೆ.
ಶಿವರಾಮ್ ಹೆಬ್ಬಾರ್ ಸ್ವಾಗತ
ದೇಶದ ನಾಡಿನ ಹಿತದೃಷ್ಟಿಯಿಂದ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಸಂಘಟನೆ ಬ್ಯಾನ್ ಆಗಿದೆ. ದೇಶ ವಿರೋಧಿ ಕೃತ್ಯಮಾಡುವ ಯಾವ ಸಂಘಟನೆಗಳಾಗಲಿ ಅಂಥವುಗಳನ್ನು ಬ್ಯಾನ್ ಮಾಡಲೇಬೇಕಾದ ಅನಿವಾರ್ಯತೆಯಿದೆ ಎಂದು ಕಾರವಾರದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಪಿಎಫ್ಐ ಒಂದೇ ಅಲ್ಲ, ಯಾವುದೇ ಸಂಘಟನೆ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೂ ಅಂಥವನ್ನು ಬ್ಯಾನ್ ಮಾಡಬೇಕು. ಇದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಈ ಬಗ್ಗೆ ಶೀಘ್ರ ತನಿಖೆ ಆರಂಭವಾಗಬೇಕಿದೆ. ದೇಶಕ್ಕೆ ಮಾರಕವಾಗುವ ಕೃತ್ಯಗಳಿಗೆ ಬೆಂಬಲ ಕೊಡುವ ಯಾರಿಗೂ ಇನ್ನು ಉಳಿಗಾಲ ಇರುವುದಿಲ್ಲ ಎಂದು ಅವರು ಹೇಳಿದರು.
ಅಖಂಡತೆ ಮುಖ್ಯ: ಸಿಸಿ ಪಾಟೀಲ್
ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿರುವುದನ್ನು ಸಚಿವ ಸಿ.ಸಿ.ಪಾಟೀಲ್ ಸ್ವಾಗತಿಸಿದರು. ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗ ನಾವು ಪಿಎಫ್ಐ ಬ್ಯಾನ್ ಮಾಡಿದ್ದೇವೆ. ಅದು ಈ ದೇಶದ ಪ್ರಧಾನಿ ತಾಕತ್ತು. ಗೋಮಾಂಸ ತಿಂದವರು ಏನೇನು ಆದರು ಎಂದು ನೀವೇ ನೋಡಿದ್ದೀರಿ. ಛಿದ್ರಕಾರಕ ಶಕ್ತಿಗಳನ್ನು ಬುದ್ಧಿಜೀವಿಗಳು ಬೆಂಬಲಿಸಿದ್ದು ಏಕೆ ಎಂಬ ಪ್ರಶ್ನೆಯನ್ನು ಜನರು ಈಗ ಕೇಳಬೇಕಿದೆ. ದೇಶದ ಅಖಂಡತೆ ಮತ್ತು ಏಕತೆ ನಮಗೆ ಮುಖ್ಯ ಎಂದು ಹೇಳಿದರು.
Published On - 3:43 pm, Wed, 28 September 22