ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಮಹಿಳಾ ಪೈಲಟ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೈಲಟ್
ಚಾರ್ಟರ್ಡ್ ವಿಮಾನದ ಕರ್ತವ್ಯದಲ್ಲಿದ್ದಾಗ ಬೆಂಗಳೂರಿನಲ್ಲಿ ಲೇಓವರ್ ಸಮಯದಲ್ಲಿ ಸಹ ಪೈಲಟ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳಾ ಸಹ-ಪೈಲಟ್ ಆರೋಪಿಸಿದ್ದಾರೆ. ಲೇಓವರ್ ಸಮಯದಲ್ಲಿ ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದ ಪೈಲಟ್ ಒಬ್ಬರು ತನ್ನ ಸಹ-ಪೈಲಟ್ಗೆ ತನ್ನೊಂದಿಗೆ ಸಿಗರೇಟ್ ಸೇದಲು ಬಾ ಎಂದು ಕರೆದಿದ್ದಾರೆ. ಆಗ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆ ಪೈಲಟ್ ವಿರುದ್ಧ ಮಹಿಳಾ ಪೈಲಟ್ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ನವೆಂಬರ್ 24: ಬೆಂಗಳೂರಿನಲ್ಲಿ (Bengaluru) ಲೇಓವರ್ ಸಮಯದಲ್ಲಿ ಮಹಿಳಾ ಸಹ-ಪೈಲಟ್ ಮೇಲೆ ಪೈಲಟ್ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಾರ್ಟರ್ಡ್ ವಿಮಾನದ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ ಮಹಿಳೆಯ ದೂರಿನ ನಂತರ, ಆರಂಭದಲ್ಲಿ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅದನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು. ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ನಲ್ಲೇ ಈ ಅಪರಾಧ ನಡೆದಿದೆ ಎನ್ನಲಾಗಿದೆ. ಬೆಂಗಳೂರು ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ನವೆಂಬರ್ 18ರಂದು ತಾನು ಮತ್ತು ಇಬ್ಬರು ಪುರುಷ ಪೈಲಟ್‌ಗಳು ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಪುಟ್ಟಪರ್ತಿ ಮೂಲಕ ಬೆಂಗಳೂರಿಗೆ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸಿದ್ದೆವು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅವರು ಮರುದಿನ ಮತ್ತೊಂದು ವಿಮಾನವನ್ನು ಚಲಾಯಿಸಬೇಕಾಗಿತ್ತು. ಆದ್ದರಿಂದ ಅವರು ರಾತ್ರಿ ಅದೇ ಹೋಟೆಲ್‌ಗೆ ಉಳಿದುಕೊಂಡಿದ್ದರು. ಆ ರಾತ್ರಿ ಪೈಲಟ್ ರೋಹಿತ್ ಶರಣ್ ಎಂಬ ಆರೋಪಿ, ಮಹಿಳಾ ಸಹ-ಪೈಲಟ್ ಅವರನ್ನು ಸಿಗರೇಟ್ ಸೇದಲು ತನಗೆ ಕಂಪನಿ ಕೊಡಲು ಬರುವಂತೆ ಕೇಳಿಕೊಂಡನು. ಆಕೆ ಅದಕ್ಕೆ ಒಪ್ಪಿದಳು. ಹೊರಗೆ ಸಿಗರೇಟ್ ಸೇದಿದ ನಂತರ ಅವರು ತಮ್ಮ ಹೋಟೆಲ್ ರೂಂ ಕಡೆಗೆ ನಡೆದರು. ರೋಹಿತ್ ಶರಣ್ ತನ್ನ ರೂಂ ಬಳಿ ತಲುಪಿದಾಗ ಆಕೆಯನ್ನು ಒಳಗೆ ಎಳೆದುಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಸಿಲುಕಿದ ಪ್ರೇಮಿಗಳು, ಸಿನಿಮಾ ಸ್ಟೈಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿ?
ನವೆಂಬರ್ 20ರಂದು ಆಕೆ ಹೈದರಾಬಾದ್‌ಗೆ ಹಿಂತಿರುಗಿದ್ದರು. ಆ ಮಹಿಳಾ ಪೈಲಟ್ ನಡೆದ ಘಟನೆಯನ್ನು ವಿಮಾನ ನಿರ್ವಹಣೆಗೆ ವರದಿ ಮಾಡಿ ನಂತರ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಈ ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಗಿದೆ. ತನಿಖೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Mon, 24 November 25




