
ಬೆಂಗಳೂರು, ಜನವರಿ 26: ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವವನ್ನು (Republic Day 2026) ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ ಶುಭ ಕೋರಿದ್ದಾರೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಭವ್ಯ ಗಣರಾಜ್ಯೋತ್ಸವ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷತೆ ವಹಿಸಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾಗವಹಿಸಿರುವುದು ವಿಶೇಷ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಭಾರತದ ಗೌರವ, ಹೆಮ್ಮೆ ಮತ್ತು ವೈಭವದ ಸಂಕೇತವಾದ ಗಣರಾಜ್ಯೋತ್ಸವವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಹಾಗೂ ಉತ್ಸಾಹವನ್ನು ತುಂಬಲಿ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿರುವ ಪ್ರಧಾನಿ, ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.
Best wishes on Republic Day.
May this occasion add renewed energy and enthusiasm in our collective resolve to build a Viksit Bharat.
— Narendra Modi (@narendramodi) January 26, 2026
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿ, ಎಲ್ಲರ ಜೀವನವು ಸಂತೋಷ, ಶಾಂತಿ, ಭದ್ರತೆ ಮತ್ತು ಸಾಮರಸ್ಯದಿಂದ ತುಂಬಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ಪ್ರೇರಣಾದಾಯಕ ಭಾಷಣ ಮಾಡಿದ್ದರು. ಸಂವಿಧಾನದ ಅನನ್ಯತೆ, ಸಾಮೂಹಿಕ ಮನೋಭಾವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು ಭಾರತವನ್ನು ಅಭಿವೃದ್ಧಿಗೊಳಿಸಬೇಕೆಂದು ಹೇಳಿದ್ದರು.
77ನೇ ಗಣರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿ ಸಂದೇಶ ನೀಡಿದ್ದಾರೆ. ಜನವರಿ 26ರಂದು ಸಂವಿಧಾನ ಜಾರಿಗೆ ಬಂದು 76 ವರ್ಷಗಳು ಪೂರ್ಣಗೊಂಡಿರುವುದನ್ನು ಸ್ಮರಿಸಿದ ಅವರು, ಸಂವಿಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ನೀಡುವುದೇ ಸಂವಿಧಾನದ ಆಶಯ ಎಂದರು. ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದ ಶರಣ ಚಳವಳಿ ಹಾಗೂ ಅನುಭವ ಮಂಟಪ ಪ್ರಜಾಪ್ರಭುತ್ವದ ಅಡಿಗಲ್ಲು ಎಂದು ಸ್ಮರಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲರನ್ನೂ ಒಳಗೊಂಡ ಸಮಾನ ಸಮಾಜ ನಿರ್ಮಾಣದ ದಿಕ್ಕು ತೋರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Mon, 26 January 26