ಬೆಂಗಳೂರು, ಮೇ.20: ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು (CCB Police) ದಾಳಿ ಮಾಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಘಟನೆ ಸಂಬಂಧ ಪಾರ್ಟಿ ಆಯೋಜಕ ವಾಸು ಹಾಗೂ ಮೂವರು ಡ್ರಗ್ ಪೆಡ್ಲರ್ಸ್ (Drug Peddlers) ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಪೊಲೀಸರ ದಾಳಿ ವೇಳೆ 45 ಗ್ರಾಂ ಡ್ರಗ್ಸ್, MDMA, ಕೊಕೆನ್ ಸೇರಿ ಹಲವು ಬಗೆಯ ಮಾದಕ ವಸ್ತುಗಳು ಪತ್ತೆಯಾಗಿವೆ. ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರು, ಮಾಡೆಲ್‌ಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಇನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ 6 ಗಂಟೆಗಳಿಗೂ ಹೆಚ್ಚುಕಾಲದಿಂದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸೋಕೋ ಟೀಮ್ ಡ್ರಗ್ಸ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹೊಂದಿರುವ ಹೈದರಾಬಾದ್ ಮೂಲದ ವಾಸು ಎಂಬುವವರು G.R.ಫಾರ್ಮ್ಹೌಸ್ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ 30 ಮಹಿಳೆಯರು, 71 ಪುರುಷರು ಸೇರಿ ಒಟ್ಟು 101 ಜನ ಭಾಗಿಯಾಗಿದ್ದರು. ಸದ್ಯ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಉಳಿದವರಿಗೆ ಫಾರ್ಮ್ಹೌಸ್ನಲ್ಲೇ ಮೆಡಿಕಲ್ ಚೆಕಪ್ ಮಾಡಲಾಗಿದೆ. ರಕ್ತದ ಸ್ಯಾಂಪಲ್ ಪಡೆದು ಲ್ಯಾಬ್ಗೆ ಕಳಿಸಲಾಗಿದೆ. ಕೆಲ ಮಾದಕವಸ್ತುವನ್ನು ಟಾಯ್ಲೆಟ್ನಲ್ಲಿ ಬಿಸಾಕಿ ನೀರುಹಾಕಿ ನಾಶ ಮಾಡಲು ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು: ತೆಲುಗು ನಟಿಯರು ಭಾಗಿಯಾಗಿದ್ದ ರೇವ್ಪಾರ್ಟಿ ಮೇಲೆ ಸಿಸಿಬಿ ದಾಳಿ; ಡ್ರಗ್ಸ್, ಕೊಕೇನ್ ಪತ್ತೆ
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ ಹೆಬ್ಬಗೋಡಿ ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ. FSL ಟೀಂ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಅಗತ್ಯ ಸಾಕ್ಷ್ಯ ಸಂಗ್ರಹಿಸಿ ತೆರಳಿದೆ.
ಅವಧಿ ಮೀರಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಸೂಚನೆ ಸಿಕ್ಕಿದ್ದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿ ಮಾದಕ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ರೇವ್ ಪಾರ್ಟಿಯಲ್ಲಿ ಜನಪ್ರಿಯ ಡಿಜಿಎಗಳಾದ ರಾಬ್ಸ್, ಕಾಯ್ವಿ, ಬ್ಲಡಿ ಮಸ್ಕರಾ ಮುಂತಾದವರೂ ಭಾಗಿಯಾಗಿದ್ದರು ಎನ್ನಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಾದ ಭೂಮಿ, ರಾಣಾ , ರಾಮು ಮತ್ತು ಮೈಲು ಎಂಬ ಶ್ವಾನದಳದಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:43 am, Mon, 20 May 24