ಬೆಂಗಳೂರು: ಆನೇಕಲ್​ನಲ್ಲಿ ಪಾಕಿಸ್ತಾನ ಪ್ರಜೆಯ ಬಂಧನ

| Updated By: ವಿವೇಕ ಬಿರಾದಾರ

Updated on: Sep 30, 2024 | 12:10 PM

ಇತ್ತೀಚಿಗೆ ಎನ್​ಐಎ ಅಧಿಕಾರಿಗಳು ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಜಿಗಣಿ ಪೊಲೀಸರು ಜಿಗಣಿಯ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಓರ್ವ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತ ಪಾಕಿಸ್ತಾನ ಪ್ರಜೆ ಕುಟುಂಬ ಸಮೇತವಾಗಿ ಜಿಗಣಿಯಲ್ಲಿ ವಾಸವಾಗಿದ್ದ. ಆತನನ್ನು ಪೊಲೀಸರು ಪತ್ತೆ ಮಾಡಿದ್ಹೇಗೆ? ಪೊಲೀಸರಿಗೆ ಏನು ಸುಳಿವು ಸಿಕ್ಕಿತ್ತು? ವಿವರಗಳು ಇಲ್ಲಿವೆ.

ಬೆಂಗಳೂರು: ಆನೇಕಲ್​ನಲ್ಲಿ ಪಾಕಿಸ್ತಾನ ಪ್ರಜೆಯ ಬಂಧನ
ಜಿಗಣಿ ಪೊಲೀಸ್ ಠಾಣೆ
Follow us on

ಆನೇಕಲ್​ ​, ಸೆಪ್ಟೆಂಬರ್​ 30: ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು (Pakistan citizen) ಪೊಲೀಸರು ಬಂಧಿಸಿದ್ದಾರೆ. ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ಬಂಧಿತನು ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು.

ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿದ್ದಾನೆ. ಬಳಿಕ, ಬಂಧಿತ ಪಾಕಿಸ್ತಾನ ಪ್ರಜೆ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ. ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾನೆ. ನಂತರ, 2018ರಲ್ಲಿ ಕುಟುಂಬ ಸಮೇತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದಾನೆ.

ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಾಳಿ

ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಪಾಕಿಸ್ತಾನ ಪ್ರಜೆ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ, ಜಿಗಣಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕುಟುಂಬ ಸಮೇತ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ

ಶಂಕಿತ ಉಗ್ರನ ಬಂಧನ

ಇತ್ತೀಚಿಗೆ, ಕೇಂದ್ರ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ಜಿಗಣಿಯಲ್ಲಿ ಶಂಕಿತ ಉಗ್ರ ಗಿರೀಶ್​ ಬೋರಾ ಅಲಿಯಾಸ್​ ಗೌತಮ್​ ಎಂಬಾತನನ್ನು ಬಂಧಿಸಿದ್ದರು. ಶಂಕಿತ ಉಗ್ರ ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ ಐಇಡಿ ಬಾಂಬ್​ ಇಟ್ಟು ಕುಟುಂಬ ​ಸಮೇತ ಜಿಗಣಿಗೆ ಬಂದು ನೆಲಸಿದ್ದನು. ಶಂಕಿತ ಉಗ್ರ ಉಲ್ಫಾ ಸಂಘಟನೆ ಸೇರಿದವನು ಎಂದು ತಿಳಿದು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:09 am, Mon, 30 September 24