ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ
ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಇತ್ತೀಚಿಗೆ ದೇಶದ್ರೋಹ ಆರೋಪದಡಿ ನೌಕಾನೆಲೆಯ ಮೂವರನ್ನು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ, ಅಧಿಕಾರಿಗಳು ಬೆಂಗಳೂರಿನಿಂದ ಸೌದಿಗೆ ಪಾರಾರಿಯಾಗುತ್ತಿದ್ದ ಶಂಕಿತ ಉಗ್ರ ಅಜೀಜ್ ಅಹ್ಮದ್ನನ್ನು ಶುಕ್ರವಾರ ಬಂಧಿಸಿದ್ದಾರೆ.
ಬೆಂಗಳೂರು, ಆಗಸ್ಟ್ 31: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಅಜೀಜ್ ಅಹ್ಮದ್ ಬಂಧಿತ ಶಂಕಿತ ಉಗ್ರ. ಹಿಜ್ಬ್ ಉಲ್ ತಹ್ರೀರ್ ಭಯೋತ್ಪಾದಕ ಸಂಘಟನೆಯ ಅಜೀಜ್ ಅಹ್ಮದ್ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಸೌದಿಯ ಜಿದ್ದಾಗೆ ಪಾರಾರಿಯಾಗುತ್ತಿದ್ದನು. ಈ ಮಾಹಿತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ಎನ್ಐಎಗೆ ನೀಡಿದ್ದಾರೆ. ಮಾಹಿತಿ ಆಧರಿಸಿ ಕೂಡಲೆ ಸ್ಥಳಕ್ಕೆ ತೆರಳಿದ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರ ಅಜೀಜ್ ಅಹ್ಮದ್ನನ್ನು ಬಂಧಿಸಿದ್ದಾರೆ.
ನಾಕಾನೆಲೆಯ ಮೂವರು ವಶಕ್ಕೆ
ಇತ್ತೀಚಿಗೆ ಎನ್ಐಎ ಅಧಿಕಾರಿಗಳು ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳು ಹನಿಟ್ರ್ಯಾಪ್ಗೆ ಒಳಗಾಗಿ, ಹಣಕ್ಕಾಗಿ ಸೀಬರ್ಡ್ ನೌಕಾನೆಲೆ ಫೋಟೋ, ಇತರೆ ಮಾಹಿತಿಯನ್ನು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಎನ್ಐಎ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಭಾರತದಲ್ಲಿ ಖಲಿಫೇಟ್, ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್: ಬಳ್ಳಾರಿ ಉಗ್ರರ ಬಗ್ಗೆ ಎನ್ಐಎ ಸ್ಫೋಟಕ ಮಾಹಿತಿ
ತೋಡೂರಿನ ಸುನೀಲ್ ನಾಯ್ಕ್, ಮುದುಗಾದ ವೇತನ್ ತಾಂಡೇಲ್ ಮತ್ತು ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ವಶಕ್ಕೆ ಪಡೆದು ಎನ್ಐಎ ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳಿಂದ ವಿಚಾರಣೆ ಮಾಡಿದ್ದರು.
ಓರ್ವನನ್ನು ಗೋವಾದಿಂದ ವಶಕ್ಕೆ ಪಡೆದಿದ್ದು, ಇನ್ನಿಬ್ಬರನ್ನು ಸೀಬರ್ಡ್‌ನಿಂದ ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳು ಸೀಬರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರವಿರೋಧಿ ಚಟುವಟಿಕೆಯಡಿ 2023ರಲ್ಲಿ ಹೈದ್ರಾಬಾದ್‌ನಲ್ಲಿ ಎನ್ಐಎ ದೀಪಕ್ ಹಾಗೂ ಇತರರನ್ನು ಬಂಧಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Sat, 31 August 24