ಪುನೀತ್ ನೆನಪಿನಲ್ಲಿ ಪೊಲೀಸರಿಂದ 50 ಕಿಲೋಮೀಟರ್ ಸೈಕಲ್ ಜಾಥಾ, ಮಹಾರಾಷ್ಟ್ರದ ಅನಾಥಾಶ್ರಮದಲ್ಲಿ ಅಭಿಮಾನಿ ಅನ್ನದಾನ

ಸೈಕಲ್ ಜಾಥಾಕ್ಕೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡಲಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಕೆಎಸ್ಆರ್ಪಿ ಬೆಂಗಳೂರು ಸಂಚಾರಿ ಪೊಲೀಸರು ಜಾಥದಲ್ಲಿ ಭಾಗಿಯಾಗಲಿದ್ದಾರೆ.

ಪುನೀತ್ ನೆನಪಿನಲ್ಲಿ ಪೊಲೀಸರಿಂದ 50 ಕಿಲೋಮೀಟರ್ ಸೈಕಲ್ ಜಾಥಾ, ಮಹಾರಾಷ್ಟ್ರದ ಅನಾಥಾಶ್ರಮದಲ್ಲಿ ಅಭಿಮಾನಿ ಅನ್ನದಾನ
ಪುನೀತ್ ರಾಜ್‍ಕುಮಾರ್ ನೆನಪಿನಲ್ಲಿ ಪೊಲೀಸರಿಂದ 50 ಕಿಲೋಮೀಟರ್ ಸೈಕಲ್ ಜಾಥಾ, ಮಹಾರಾಷ್ಟ್ರದ ಅನಾಥಾಶ್ರಮದಲ್ಲಿ ಅಭಿಮಾನಿಯಿಂದ ಅನ್ನದಾನ

ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Puneeth Rajkumar) ನೆನಪಿನಲ್ಲಿ ಪೊಲೀಸರು ಇಂದು ಬೆಂಗಳೂರಿನಲ್ಲಿ ಸೈಕಲ್ ಜಾಥಾ ಆರಂಭಿಸಿದ್ದಾರೆ. ಕೆಎಸ್ಆರ್ಪಿ (KSRP), ಬೆಂಗಳೂರು ಸಂಚಾರಿ ಪೊಲೀಸರು ಇಂದು ಕಂಠೀರವ ಸ್ಟೇಡಿಯಂನಿಂದ 50 ಕಿಲೋಮೀಟರ್ ವರೆಗೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ. ಪೊಲೀಸ್ ಹಾಕಿ ಗ್ರೌಂಡ್‌ನಲ್ಲಿ ಜಾಥಾ ಅಂತ್ಯಗೊಳ್ಳಲಿದೆ.

ಸೈಕಲ್ ಜಾಥಾಕ್ಕೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡಲಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಕೆಎಸ್ಆರ್ಪಿ ಬೆಂಗಳೂರು ಸಂಚಾರಿ ಪೊಲೀಸರು ಜಾಥದಲ್ಲಿ ಭಾಗಿಯಾಗಲಿದ್ದಾರೆ. ನಟ ಪುನೀತ್ ರಾಜ್‍ಕುಮಾರ್ ನೆನಪು ಹಾಗೂ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಎಂಬ ಘೋಷ ವಾಕ್ಯದಡಿ ಜಾಥ ನಡೆಯಲಿದೆ.

ಕಂಠೀರವ ಸ್ಟೇಡಿಯಂನಿಂದ ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್‌, ಹೆಬ್ಬಾಳ, ಬಿಇಎಲ್ ಸರ್ಕಲ್, ಗೋರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ಕಡೆಗೆ ಸಾಗಿ ಪುನೀತ್ ಸಮಾಧಿ ಬಳಿ ಬ್ರೇಕ್ ಪಡೆದು ನಾಗರಭಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಮೇಯೋ ಹಾಲ್, ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್ ನಲ್ಲಿ ಸೈಕಲ್ ಜಾಥ ಅಂತ್ಯಗೊಳ್ಳಲಿದೆ.

ಪೊಲೀಸರಿಂದ ಹಾಕಿ ಕ್ರೀಡಾ ಕೂಟ ಆಯೋಜನೆ ಮಾಡಬೇಕಿತ್ತು. ಇದಕ್ಕೆ ಅಪ್ಪುರನ್ನ ಕರೆಸಿ ಅವರಿಂದಲೇ ಚಾಲನೆ ಕೊಡಿಸಬೇಕಿತ್ತು. ಆದ್ರೆ ಅದು ಸಾಧ್ಯ ಆಗಲಿಲ್ಲ ಬಹಳ ನೋವಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ವೇದಿಕೆ ಮೇಲೆ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜ ಕುಮಾರ ಹಾಡನ್ನು ಹಾಡಿ ಭಾವುಕರಾದ್ರು.

ಅಪ್ಪು ಎಲ್ಲೂ ಹೋಗಿಲ್ಲ ಇಲ್ಲೇ ಇದ್ದಾನೆ
ಇನ್ನು ಜಾಥಕ್ಕೆ ಚಾಲನೆ ನೀಡಿದ ಶಿವರಾಜ್ ಕುಮಾರ್, ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಅವ್ನಿದ್ರೆ ನಿಮ್ ಜೊತೆ ಸೈಕಲ್ ಜಾಥಾಗೆ ಬರ್ತಿದ್ದ. ನನ್ನ ಹುಟ್ಟು ಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ ಮಾಡಿದ್ದ. ಈ 50 ಕಿಮೀ ಜಾಥಾದಲ್ಲಿ ಅಪ್ಪು ಇದ್ದಿದ್ರೇ ಖಂಡಿತ ಭಾಗವಹಿಸ್ತಿದ್ದ. ಆದ್ರೆ ನನ್ನ ತಮ್ಮ ಈಗಿಲ್ಲ. ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾನೆ. ಇರ್ತಾನೆ. ಎಲ್ಲರ ಹೃದಯದಲ್ಲೂ ಅಪ್ಪು ಶಾಶ್ವತ. ನಾನು ಅಪ್ಪುಗೆ ಅಣ್ಣನಲ್ಲ, ಅವ್ನೇ ನನಗೆ ಅಣ್ಣನಾಗಿ ಹೋಗಿದ್ದಾನೆ ಎಂದು ನಟ ಶಿವರಾಜ್ ಕುಮಾರ್ ಪುನೀತ್ ನೆನೆದು ಭಾವುಕ ನುಡಿಗಳನ್ನಾಡಿದ್ದಾರೆ.

ಅಭಿಮಾನಿಯಿಂದ ಅನ್ನ ಸಂತರ್ಪಣೆ
ಇನ್ನು ಮತ್ತೊಂದೆಡೆ ಕನ್ನಡದ ಮೇರು ನಟ ಪುನೀತ್ ಗಾಗಿ ಮಹಾರಾಷ್ಟ್ರದ ಮನಗಳು ಮಿಡಿಯುತ್ತಿವೆ. ಮಹರಾಷ್ಟ್ರದ ಅಹ್ಮದ್ ನಗರದ ಅನಾಥಾಶ್ರಮದಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅನ್ನ ಸೇವೆಯನ್ನ ನೆರವೇರಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಮಿತ್ತ ಮಹದೇವ ಕಲ್ಯಾಣಪ್ಪ ತಿಮ್ಮಲಾಪುರ್ ಎನ್ನುವವರು ಅನ್ನದಾನ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಅಹ್ಮದಾಬಾದ್ ನಗರದ ಆಶ್ರಮದ ನೂರಾರು ಅನಾಥ ಮಕ್ಕಳು ಪ್ರತಿದಿನ ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಕನ್ನಡದ ಮೇರು ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Petrol Price Today: ಸತತ ಹದಿನೇಳನೇ ದಿನವೂ ಪೆಟ್ರೋಲ್​, ಡೀಸೆಲ್​ ಬೆಲೆ ಸ್ಥಿರ!

Click on your DTH Provider to Add TV9 Kannada