ಬೆಂಗಳೂರು: ನಗರದಿಂದ ನೆಲಮಂಗಲ ಮಾರ್ಗವಾಗಿ ತುಮಕೂರು ಹಾಗೂ ಕುಣಿಗಲ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಮೇಲ್ಸೇತುವೆಯ ಮೇಲೆ ಕಬ್ಬಿಣದ ಸರಳುಗಳು ಕಾಣಿಸುವಷ್ಟು ಆಳವಾದ ಗುಂಡಿ ಕಾಣಿಸಿಕೊಂಡಿದೆ. ಜನರು ಫ್ಲೈಓವರ್ನ ಸುರಕ್ಷತೆಯ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂಚಾರ ಪೊಲೀಸರು ಹಾನಿಯನ್ನು ಪರಿಶೀಲಿಸಿ, ಬ್ಯಾರಿಕೇಡ್ಗಳನ್ನು ಹಾಕಿದರು. 2019ರ ನಂತರ ಎರಡನೇ ಬಾರಿಗೆ ಎಲಿವೇಟೆಡ್ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿದೆ. ಈ ಮೊದಲು ರಸ್ತೆ ಹಾಳಾಗಿದ್ದಾಗ ಸಮರ್ಪಕವಾಗಿ ರಿಪೇರಿ ಕಾಮಗಾರಿ ನಿರ್ವಹಿಸಿಲ್ಲ. ಬದಲಿಗೆ, ಬೇಕಾಬಿಟ್ಟಿಯಾಗಿ ತೇಪೆ ಹಾಕಲಾಗಿದೆ. ಫ್ಲೈಓವರ್ ಮೇಲೆ ಬಿದ್ದಿರುವ ರಂಧ್ರದಿಂದ ಕೆಳಗಿನ ರಸ್ತೆ ಕಾಣಿಸುತ್ತಿರುವುದು ಜನರ ಆತಂಕವನ್ನು ಹೆಚ್ಚು ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಗುರುವಾರ ದುರಸ್ತಿ ಕಾಮಗಾರಿಗಳನ್ನು ಆರಂಭಿಸಲಿದೆ. ದುರಸ್ತಿಯ ಸಮಯದಲ್ಲಿ ಮೇಲ್ಸೇತುವೆಯ ಒಂದು ಲೇನ್ನಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ. 2019ರಲ್ಲಿ ರಸ್ತೆಯ ಒಂದು ಭಾಗವೇ ಕುಸಿದಿತ್ತು. ಇದೀಗ ಬೆಳಕಿಗೆ ಬಂದಿರುವ ಗುಂಡಿಯು ಅಂದಿನ ಘಟನೆಯನ್ನು ಮತ್ತೆ ನೆನಪಿಸುವಂತೆ ಮಾಡಿದೆ.
ರಸ್ತೆ ಮೇಲೆ ಗುಂಡಿ ಬಿದ್ದ ಎರಡೂ ಘಟನೆಗಳ ಸಮಯದಲ್ಲಿ ಆಸ್ಫಾಲ್ಟ್ ಮತ್ತು ಸಿಮೆಂಟ್ ಎದ್ದು ಹೋಗಿತ್ತು. ಫ್ಲೈಓವರ್ ಮೇಲಿನ ಲೋಹದ ಸರಳುಗಳು ಗೋಚರಿಸುತ್ತಿದ್ದವು. ಹೊರ ವರ್ತುಲ ರಸ್ತೆಯ ಗೊರಗುಂಟೆಪಾಳ್ಯ-ನಾಯಂಡಹಳ್ಳಿ ವಿಭಾಗದಲ್ಲಿ ಸುಮನಹಳ್ಳಿ ಫ್ಲೈಓವರ್ ಇದೆ.
ಬಿಡಿಎ ನಿರ್ಮಿಸಿದ್ದ ಫ್ಲೈಓವರ್
ಈ ಮೇಲ್ಸೇತುವೆಯನ್ನು ‘ಬಿಡಿಎ ನಿರ್ಮಿಸಿತ್ತು. 2019ರಲ್ಲಿ ಕುಸಿದಿದ್ದ ಸ್ಥಳದಿಂದ ಸುಮಾರು 15 ಅಡಿ ಮುಂದೆ ಇದೀಗ ಮತ್ತೊಮ್ಮೆ ಕುಸಿದಿದೆ. ತಜ್ಞರಿಂದ ಪರಿಶೀಲನೆ ನಡೆಸಿ, ಯಾವ ರೀತಿ ದುರಸ್ತಿ ಕಾರ್ಯ ನಡೆಸಬೇಕು ಎಂಬುದನ್ನು ಬುಧವಾರ ತೀರ್ಮಾನಿಸುತ್ತೇವೆ. ಬಿಬಿಎಂಪಿ ವತಿಯಿಂದಲೇ ನಾವು ದುರಸ್ತಿ ಕಾಮಗಾರಿ ನಿರ್ವಹಿಸುತ್ತೇವೆ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಸಿ.ಎಸ್.ಪ್ರಹ್ಲಾದ್ ಹೇಳಿದ್ದಾರೆ. ಫ್ಲೈಓವರ್ ಮೇಲೆ ಡ್ರಿಲ್ ಮಾಡಲು ಕಷ್ಟ. ಹಳೆಯ ಕಾಂಕ್ರಿಟ್ ಅನ್ನು ನಿಧಾನವಾಗಿ ತೆಗೆದು, ಹೊಸದಾಗಿ ಹಾಕಬೇಕಾಗುತ್ತದೆ. ತಜ್ಞರಿಂದ ವರದಿ ಪಡೆದು ಮುಂದುವರಿಯುತ್ತೇವೆ ಎಂದಿದ್ದಾರೆ.
ಪ್ರೀಕಾಸ್ಟ್ ಪ್ರೀಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಗಿರ್ಡರ್ ಮತ್ತು ಸ್ಲ್ಯಾಬ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಬಳಸಿ ಮೇಲ್ಸೇತುವೆ ನಿರ್ಮಾಣವಾಗಿದೆ. ಆರ್‌ಸಿಸಿ ಸ್ಲ್ಯಾಬ್ಗಳ ಶಕ್ತಿ ಕಡಿಮೆಯಾಗಿರುವುದರಿಂದ ರಂಧ್ರಗಳು ಕಂಡುಬರುತ್ತಿವೆ. ಮೇಲ್ಸೇತುವೆಯ ಉಳಿದ ಭಾಗವನ್ನೂ ಬಿಬಿಎಂಪಿ ಪರಿಶೀಲಿಸಿದೆ.
Published On - 12:32 pm, Wed, 21 September 22