ಕಾವೇರಿ ಆರತಿ ಕಿಚ್ಚು: ಡಿಕೆ ಶಿವಕುಮಾರ್ ಕನಸಿನ ಯೋಜನೆ ಪರನಿಂತ ಹಿಂದೂ ಸಂಘಟನೆಗಳು
ಮಂಡ್ಯದಲ್ಲಿ ಕಾವೇರಿ ಆರತಿ ಯೋಜನೆಗೆ ಸಂಬಂಧಿಸಿದಂತೆ ಪರ-ವಿರೋಧಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ರೈತ ಸಂಘಟನೆ, ಪ್ರಗತಿಪರರು ವಿರೋಧಿಸಿರುವ ಯೋಜನೆಗೆ ಇದೀಗ ಅಚ್ಚರಿ ಎಂಬಂತೆ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಬೆಂಬಲ ಸೂಚಿಸಿದ್ದಾರೆ. ಆ ಮೂಲಕ ಡಿಸಿಎಂ ಡಿಕೆ ಶಿವವಕುಮಾರ್ ಕನಸಿನ ಯೋಜನೆ ಪರ ನಿಂತಿದ್ದಾರೆ.

ಮಂಡ್ಯ, ಜೂನ್ 18: ಕಾವೇರಿ ಆರತಿ (Cauvery Aarti) ಮತ್ತು ಕೆಆರ್ಎಸ್ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ಈಗಾಗಲೇ ಸಾಕಷ್ಟು ತೀವ್ರ ವಿರೋಧ ವ್ಯಕ್ತವಾಗಿದೆ. ವಿರೋಧದ ನಡುವೆಯೂ ಯೋಜನೆ ಸಂಬಂಧಿಸಿತದಂತೆ ಇತ್ತೀಚೆಗೆ ಕಾಮಗಾರಿಗಳನ್ನ ಆರಂಭಿಸಿದ್ದ ಸರ್ಕಾರದ ವಿರುದ್ಧ ಕೂಡ ಹೋರಾಟಗಾರರು ಸಿಡಿದೆದಿದ್ದರು. ಇದೆಲ್ಲದರ ಮಧ್ಯೆ ಇದೀಗ ಯೋಜನೆಗೆ ಹಿಂದೂ ಸಂಘಟನೆ ಮುಖಂಡರು ಬಹುಪರಾಕ್ ಎನ್ನುತ್ತಿದ್ದಾರೆ. ಆ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕನಸಿನ ಯೋಜನೆಗೆ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಬೆಂಬಲ ಸೂಚಿಸಿದ್ದಾರೆ.
ಈ ಯೋಜನೆ ಕೈ ಬಿಟ್ಟರೆ ಹೋರಾಟದ ಎಚ್ಚರಿಕೆ
ಮಂಡ್ಯದಲ್ಲಿ ಕಾವೇರಿ ಆರತಿ ಯೋಜನೆಗೆ ಸಂಬಂಧಿಸಿದಂತೆ ಪರ-ವಿರೋಧ ತಾರಕಕ್ಕೇರಿದೆ. ಮೊದಲಿನಿಂದಲೂ ಕಾವೇರಿ ಆರತಿಗೆ ರೈತ ಸಂಘಟನೆಗಳು ಮತ್ತು ಪ್ರಗತಿಪರರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಬಿಜೆಪಿ ಸೇರಿದಂತೆ ಕೆಲ ರಾಜಕೀಯ ನಾಯಕರು ಕೂಡ ಇದಕ್ಕೆ ವಿರೋಧಿಸಿದ್ದು, ರೈತರ ಪರವಾಗಿ ನಿಂತಿದ್ದಾರೆ. ಹೀಗಿರುವಾಗ ಅಚ್ಚರಿ ಎಂಬಂತೆ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಯೋಜನೆ ಪರ ನಿಂತ್ತಿದ್ದು, ಈ ಯೋಜನೆ ಕೈ ಬಿಟ್ಟರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ಆರತಿಗಾಗಿ ಕಾಂಗ್ರೆಸ್ ಸರ್ಕಾರದ ಪರ ನಾವು ನಿಲ್ಲುತ್ತೇವೆ: ಮಂಜುನಾಥ್
ಈ ಬಗ್ಗೆ ಟಿವಿ9 ಜೊತೆ ಹಿಂದೂಪರ ಸಂಘಟನೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿದ್ದು, ಯೋಜನೆ ರೂಪಿಸಿದ ಡಿಕೆ ಶಿವಕುಮಾರ್ ಹಾಗೂ ಚಲುವರಾಯಸ್ವಾಮಿಗೆ ಅಭಿನಂದನೆ. ಕಾವೇರಿ ಆರತಿಗಾಗಿ ಕಾಂಗ್ರೆಸ್ ಸರ್ಕಾರದ ಪರ ನಾವು ನಿಲ್ಲುತ್ತೇವೆ. ಗಂಗಾ ಆರತಿಗಿಂತ ವಿಭಿನ್ನವಾಗಿ ಕಾವೇರಿ ಆರತಿ ಮಾಡಿ ಎಂದಿದ್ದಾರೆ.
ಇದನ್ನೂ ಓದಿ: ಮಂಡ್ಯ ಕಾವೇರಿ ಆರತಿ ಕಿಚ್ಚು: ವಿರೋಧದ ಮಧ್ಯೆ ರಾತ್ರೋರಾತ್ರಿ ಕದ್ದು ಮುಚ್ಚಿ ಕಾಮಗಾರಿ
ಕೆಲವು ಸೋಗಲಾಡಿ, ಸ್ವಾರ್ಥ ಪ್ರಗತಿಪರರ ಹೋರಾಟಕ್ಕೆ ಸರ್ಕಾರ ಮಣಿಯಬಾರದು. ಕಾವೇರಿ ಆರತಿ ನಮ್ಮ ಸಂಸ್ಕೃತಿಯ ಪ್ರತೀಕ, ಪರಂಪರೆಗೆ ಪ್ರೋತ್ಸಾಹ. ಸ್ಥಳೀಯ ಪ್ರದೇಶಗಳ ಅಭಿವೃದ್ಧಿ, ಆರ್ಥಿಕತೆ ವೃದ್ಧಿ, ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ. 100 ಕೋಟಿಯಲ್ಲ 200 ಕೋಟಿ ರೂ ಆದರೂ ಮಾಡಿ. ವಿರೋಧಕ್ಕೆ ಕ್ಯಾರೆ ಅನ್ನದೇ ಕಾವೇರಿ ಆರತಿ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ವಿರುದ್ಧ ಸುಮಲತಾ ಅಂಬರೀಶ್ ಕಿಡಿ
ಇನ್ನು ಈ ಬಗ್ಗೆ ಇತ್ತೀಚೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಆರ್ಎಸ್ ಬಳಿ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವುದನ್ನು ಮಂಡ್ಯದ ಜನತೆ ಹಾಗೂ ರೈತ ಸಂಘಗಳು ವಿರೋಧಿಸಿದ ಹೊರತಾಗಿಯೂ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿರುವುದು ಖಂಡನೀಯ ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







