ಮಂಡ್ಯ ಕಾವೇರಿ ಆರತಿ ಕಿಚ್ಚು: ವಿರೋಧದ ಮಧ್ಯೆ ರಾತ್ರೋರಾತ್ರಿ ಕದ್ದು ಮುಚ್ಚಿ ಕಾಮಗಾರಿ
ಮಂಡ್ಯದ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಕಾವೇರಿ ಆರತಿ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಆದರೆ, ರೈತ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಸಚಿವರು ತಾತ್ಕಾಲಿಕ ತಡೆ ನೀಡುವುದಾಗಿ ಹೇಳಿದ್ದರೂ, ರಾತ್ರಿಯ ವೇಳೆ ಕಾಮಗಾರಿ ಮುಂದುವರಿದಿದೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಮಂಡ್ಯ, ಜೂನ್ 13: ಕಾವೇರಿ ಆರತಿ ಮತ್ತು ಕೆಆರ್ಎಸ್ (KRS) ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿರೋಧದ ನಡುವೆಯೂ ಯೋಜನೆಗೆ ಸಂಬಂಧಿಸಿದಂತೆ ರೈತರು ವಿರೋಧಿಸುತ್ತಾರೆ ಎಂದು ರಾತ್ರಿ ವೇಳೆಯಲ್ಲಿ ಕದ್ದು ಮುಚ್ಚಿ ಕಾಮಗಾರಿ (work) ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಗಾರರು ಸಿಡಿದೆದ್ದಿದ್ದಾರೆ.
ಹಳೇ ಮೈಸೂರು ಭಾಗದ ಜೀವನಾಡಿ ಮಂಡ್ಯದ ಕೆಆರ್ಎಸ್ ಅಣೆಕಟ್ಟೆ ಬಳಿ 100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮತ್ತು 2670 ಕೋಟಿ ರೂ ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ಎರಡು ಯೋಜನೆಗಳಿಗೆ ರೈತಪರ ಮತ್ತು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಕನಸಿನ ಯೋಜನೆ ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ಗೆ ಬೀಳುತ್ತಾ ಬ್ರೇಕ್? ರೈತರಿಂದ ತೀವ್ರ ವಿರೋಧ
ಕಳೆದ ವಾರ ರೈತರು, ಜಿಲ್ಲೆಯ ಮುಖಂಡರ ಜೊತೆ ಸಚಿವ ಚಲುವರಾಯಸ್ವಾಮಿ ಸಭೆ ಮಾಡಿದ್ದರು. ಸಭೆಯಲ್ಲಿ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ವಿರುದ್ಧ ಒಕ್ಕೊರಲ ಧ್ವನಿ ಕೇಳಿಬಂದಿತ್ತು. ಬಳಿಕ ಸಿಎಂ, ಡಿಸಿಎಂ ಗಮನಕ್ಕೆ ತಂದು ನಿರ್ಧರಿಸುವುದಾಗಿ ಸಚಿವರು ಹೇಳಿದ್ದರು. ಆದರೆ ಇದೀಗ ಕಾವೇರಿ ನೀರಾವರಿ ನಿಗಮ ರಾತ್ರಿ ವೇಳೆ ಕದ್ದು ಮುಚ್ಚಿ ಕಾಮಗಾರಿ ಆರಂಭಿಸಿದೆ. ಆ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗೆ ಕೆಆರ್ಎಸ್ ಜಲಾಶಯದ ಬೋಟಿಂಗ್ ಪಾಯಿಂಟ್ ಬಳಿ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ರೈತಪರ ಮತ್ತು ವಿವಿಧ ಸಂಘಟನೆಗಳ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿರೋಧ ಮುಂದುವರೆಸಿದ ಪ್ರತಿಭಟನಾಕಾರರು, ವಿರೋಧದ ನಡುವೆಯೂ ಕಾಮಗಾರಿ ಆರಂಭಿಸಿರುವ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಯೋಜನೆ ಡ್ಯಾಂಗೆ ಮಾರಕವಾಗಲಿದೆ. ಕೂಡಲೇ ಎರಡೂ ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಕಾವೇರಿ ಆರತಿಗೆ 100 ಕೋಟಿ ರೂ. ಖರ್ಚು ಮಾಡುವುದಕ್ಕೆ ನನ್ನ ವಿರೋಧ ಇದೆ: ಹೆಚ್ಡಿ ಕುಮಾರಸ್ವಾಮಿ
ಒಟ್ಟಾರೆ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿರೋಧಗಳು ಹೆಚ್ಚಾಗುತ್ತಿದ್ದು, ಹೋರಾಟಗಾರರ ಒತ್ತಡಕ್ಕೆ ಮಣಿದು ಸರ್ಕಾರ ಯೋಜನೆ ಕೈಬಿಡುತ್ತಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.