ಡಿಕೆ ಶಿವಕುಮಾರ್ ಕನಸಿನ ಯೋಜನೆ ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ಗೆ ಬೀಳುತ್ತಾ ಬ್ರೇಕ್? ರೈತರಿಂದ ತೀವ್ರ ವಿರೋಧ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸಿನ ಯೋಜನೆಯಾಗಿರುವ ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ಮಂಡ್ಯ ಜಿಲ್ಲೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಶನಿವಾರ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯ, ಜೂನ್ 7: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕನಸಿನ ಯೋಜನೆ ಕಾವೇರಿ ಆರತಿ (Cauvery Arti) ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸದ್ಯ ಈ ವಿವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂಗ ತಲುಪಿದೆ. ಮಂಡ್ಯದ ರೈತರು ಡಿಕೆಶಿ ವಿರುದ್ದ ತೊಡೆ ತಟ್ಟಿದ್ದು, ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ಮಾಡಿಯೇ ಸಿದ್ಧ ಎಂದು ಡಿಕೆಶಿ ಹೇಳಿದ್ದರು. ರೈತದ ಸಾಕಷ್ಟು ವಿರೋಧದ ನಡುವೆಯೂ ಹಲವು ಸಭೆಗಳನ್ನು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಚೆಲುವರಾಯಸ್ವಾಮಿಗೆ ರೈತರ ತರಾಟೆ
ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ವಿಚಾರವಾಗಿ ಶನಿವಾರ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಚಿವರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ‘ಕಾವೇರಿ ಆರತಿ ಯಾಕೆ ಬೇಕು ಸರ್’ ಎಂದು ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಚಲುವರಾಯಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ‘ನಿಮ್ಮದು ಹಠವಾದರೆ ನಮ್ಮದೂ ಹಠವೇ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ, ಕೊಪ್ಪ, ಮದ್ದೂರು ಭಾಗಗಳಲ್ಲಿರುವ ಕೆರೆಗಳನ್ನು ತುಂಬಿಸುವ ಕೆಲಸ ಜನಪ್ರತಿನಿಧಿಗಳ ಆದ್ಯತೆಯಾಗಬೇಕು. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಪೈಕಿ ಹಲವಾರು ಪಾಳುಬಿದ್ದಿವೆ. ಕೆಲಕಟ್ಟಡಗಳ ಸೀಲಿಂಗ್ ಕಳಚಿ ಬೀಳುವ ಸ್ಥಿತಿಯಲ್ಲಿದೆ. ಇದನ್ನೆಲ್ಲ ಯಾವಾಗ ನೋಡುತ್ತೀರಿ? ಕಾವೇರಿ ಆರತಿ ಬೇಕೆಂದು ರೈತರೇನಾದರೂ ಬಂದು ಕೇಳಿದ್ದರೇ? ಮೊದಲು ಸರ್ಕಾರಿ ಶಾಲೆಗಳನ್ನು ಸರಿಪಡಿಸಿ ಎಂದು ರೈತರು ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.
ಮೌನ ತಾಳಿದ ಚಲುವರಾಯಸ್ವಾಮಿ
ಯಾವುದೇ ಕಾರಣಕ್ಕೂ ಕಾವೇರಿ ಆರತಿಯೂ ಬೇಡ, ಅಮ್ಯೂಸ್ಮೆಂಟ್ ಪಾರ್ಕೂ ಬೇಡಾ ಎಂದು ರೈತರು ಪಟ್ಟು ಹಿಡಿದರು. ರೈತ ಸಂಘಟನೆಗಳಿಗೆ ಇತರ ವಿವಿಧ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿದವು. ಇದರಿಂದಾಗಿ ಸಚಿವ ಚಲುವರಾಯಸ್ವಾಮಿ ಮೌನ ತಾಳಬೇಕಾಯಿತು.
ಇದನ್ನೂ ಓದಿ: ದಸರಾ ಮಹೋತ್ಸವದ ಜೊತೆ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಶಿವಕುಮಾರ್
ನಂತರ ಮಾತನಾಡಿದ ಚಲುವರಾಯಸ್ವಾಮಿ, ನಿಮ್ಮ ಆಗ್ರಹವನ್ನು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಬಳಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು. ಹೀಗಾಗಿ, ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ಬ್ರೇಕ್ ಬೀಳಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಅಥವಾ ಡಿಸಿಎಂ ಡಿಕೆ ಶಿವಕುಮಾರ್ ರೈತರ ಮನವೊಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.







