ಕಾವೇರಿ ಆರತಿಗೆ 100 ಕೋಟಿ ರೂ. ಖರ್ಚು ಮಾಡುವುದಕ್ಕೆ ನನ್ನ ವಿರೋಧ ಇದೆ: ಹೆಚ್ಡಿ ಕುಮಾರಸ್ವಾಮಿ
ಮಂಡ್ಯದಲ್ಲಿ ನಡೆದ ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, ದೇಶಾದ್ಯಂತ 14,000 ವಿದ್ಯುತ್ ಬಸ್‌ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಬೆಂಗಳೂರಿಗೆ 4500 ಮತ್ತು ಇತರ ರಾಜ್ಯಗಳಿಗೆ 2000 ಬಸ್‌ಗಳನ್ನು ನೀಡುವುದಾಗಿ ಹೇಳಿದ್ದಾರೆ. ಮಂಡ್ಯದ ಅಭಿವೃದ್ಧಿ, ಕೈಗಾರಿಕಾ ಸ್ಥಾಪನೆ, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಅವರು ಭರವಸೆ ನೀಡಿದ್ದಾರೆ. ಮೈಶುಗರ್ ಶಿಕ್ಷಣ ಸಂಸ್ಥೆ ಮತ್ತು ಎಚ್ಎಂಟಿ ಕಾರ್ಖಾನೆಯನ್ನು ಉಳಿಸುವುದಕ್ಕೆ ತಮ್ಮ ಬದ್ಧತೆಯನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

ಮಂಡ್ಯ, ಜೂನ್ 07: ಕಾವೇರಿ ಆರತಿಗೆ 100 ಕೋಟಿ ರೂ. ಯಾಕೆ ಬೇಕು? ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಅವರು ಕೆರೆತಣ್ಣೂರಿನಲ್ಲಿ ಕಾವೇರಿ ಆರತಿ ಮಾಡಿಸಿದಾಗ ಎಷ್ಟು ಖರ್ಚು ಆಯ್ತು ಅಂತ ಅವರಿಗೆ ಕೇಳಿ. 100 ಕೋಟಿ ರೂ. ಖರ್ಚು ಮಾಡುವುದಕ್ಕೆ ನನ್ನ ವಿರೋಧ ಇದೆ ಎಂದು ಹೆಚ್.ಡಿ.ಕುಮಾರಸ್ವಾಮಿ (HD Kumarswamy) ವಾಗ್ದಾಳಿ ಮಾಡಿದರು. ಮಂಡ್ಯದಲ್ಲಿ ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವರ್ಷ ದೇಶಾದ್ಯಂತ 14 ಸಾವಿರ ಎಲೆಕ್ಟ್ರಿಕ್ ಬಸ್ (Electric Bus) ಕೊಡಲು ತೀರ್ಮಾನ ಮಾಡಿದ್ದೇನೆ. ಇದರಲ್ಲಿ ಬೆಂಗಳೂರಿಗೆ ನಾಲ್ಕೂವರೆ ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುತ್ತೇನೆ. ಬೇರೆ ರಾಜ್ಯಕ್ಕೆ ಎರಡು ಸಾವಿರ ಬಸ್‌ಗಳನ್ನು ನೀಡುತ್ತೇನೆ ಎಂದು ಹೇಳಿದರು.
ಬೃಹತ್ ಕೈಗಾರಿಕಾ ಸಚಿವನಾಗಿ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ಮಂಡ್ಯ ಜಿಲ್ಲೆಗೆ ಕೈಗಾರಿಕೆ ತರಲು ನಿತ್ಯ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನವನ್ನೂ ಮಾಡುತ್ತೇನೆ. ರೈತ ಭವನ ಪುನಶ್ಚೇತನಕ್ಕೆ ನಾಲ್ಕು ಕೋಟಿ ಅನುದಾನ ಕೊಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಹೊಸ ಕಾರ್ಖಾನೆಗೆ 100 ಕೋಟಿ ರೂ. ಮೀಸಲಿಟ್ಟಿದ್ದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ತಿಳಿಸಿದರು.
ಮೈಶುಗರ್ ಶಿಕ್ಷಣ ಸಂಸ್ಥೆ ಉಳಿಸಲು ನಾನು ಬದ್ಧನಾಗಿದ್ದೇನೆ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿಕೊಡಿ. ಮಾದರಿ ಶಾಲೆ ಮಾಡಲು ಅಗತ್ಯ ನೆರವು ನೀಡುತ್ತೇನೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲೀಷ್ ಶಾಲೆ ತೆರೆಯಬೇಕು ಅಂತ ಯೋಚಿಸಿದ್ದೇನೆ. ಪಂಚ ಯೋಜನೆಗಳನ್ನು ಜಾರಿಗೆ ತರಬೇಕು ಅಂತ ನನ್ನ ಕನಸಿತ್ತು. ಇಂತಹ ದೊಡ್ಡ ಕಾರ್ಯಕ್ರಮ ಕೊಡುತ್ತಾನೆಯೇ? ಎಂದು ಜನರು ಅನುಮಾನ ವ್ಯಕ್ತಪಡಿಸಿದರು. ನನ್ನ ದುರಾದೃಷ್ಟ ಜನರಿಗೆ ನನ್ನ ಮೇಲೆ ವಿಶ್ವಾಸ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೆ ಶಿಕ್ಷಣ ಅನ್ನೋದು ಮಠಗಳಿಂದ ನಡೆಯುತ್ತಿತ್ತು. ಸರ್ಕಾರದಿಂದ ಶಿಕ್ಷಣಕ್ಕೆ ದೊಡ್ಡ ಮಟ್ಟದ ಅವಕಾಶ ಇರಲಿಲ್ಲ. ಕೆ.ವಿ.ಶಂಕರಗೌಡ ಸೇರಿದಂತೆ ಅನೇಕ ಹಿರಿಯರು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೈಶುಗರ್ ಕಾರ್ಖಾನೆ ಏಳು ಬೀಳು ಕಂಡಿದೆ. ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ. ಅದು ಸರಿಯಾಗಿ ಸದ್ಭಳಕೆ ಆಗಿದೆಯೋ, ದುರುಪಯೋಗ ಆಗಿದೆಯೋ ಅದನ್ನ ಚರ್ಚೆ ಮಾಡಲ್ಲ. ನನ್ನಿಂದ ಜಿಲ್ಲೆಗೆ ಅನುಕೂಲ ಆಗುತ್ತೆ ಅಂತ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಿರಿ ಎಂದು ಹೇಳಿದರು.
ಮಂಡ್ಯ ಮಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ನಿಧನ ಆಗಿದ್ದು ಮತ್ತು ಪೊಲೀಸರ ವರ್ತನೆಯಿಂದ ನಾಯಿ ಕಚ್ಚಿದ ಮಗು ಮೃತಪಟ್ಟ ಎರಡೂ ಪ್ರಕರಣಗಳು ನೋವು ತರುತ್ತದೆ. ಈ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳು ಹಣದಾಸೆಗೆ ಜೀವ ಕಳೆಯಬಾರದು. ಮಿಮ್ಸ್ ಆಸ್ಪತ್ರೆ ಸಮಸ್ಯೆ ಪರಿಹಾರಕ್ಕೆ ತಕ್ಷಣ ಸಿಎಸ್ಆರ್ ಫಂಡ್ಗೆ ಎರಡೂವರೆ ಕೋಟಿ ರೂ. ಕೊಡಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿಗೆ ಬಂದ 320 ಎಸಿ ಎಲೆಕ್ಟ್ರಿಕ್ ಬಸ್: ಮೊದಲ ಬಾರಿಗೆ ರಾಜಧಾನಿಯಲ್ಲಿ ಬಿಎಂಟಿಸಿ ಎಸಿ ಎಲೆಕ್ಟ್ರಿಕ್ ಬಸ್ ಸಂಚಾರ
ಹೆಚ್ಎಮ್ಟಿ ಕಾರ್ಖಾನೆ ಉಳಿಸಲು ಪಣತೊಟ್ಟಿದ್ದೇನೆ. ಆದರೆ, ಅದಕ್ಕೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ನನಗೆ ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನನ್ನ ಮೇಲೆ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ನನ್ನ ಒಂದು ಕಣ್ಣು, ಹೃದಯ ಇಲ್ಲೇ ಇರುತ್ತೆ. ನಿಮ್ಮ ನಿರೀಕ್ಷೆ ಆಸೆಗಳನ್ನು ನಿರಾಸೆ ಮಾಡಲ್ಲ. ನನಗೆ ಬೇರೆ ಯಾವುದೇ ಆಸೆ ಇಲ್ಲ. ನನಗೆ ಬೇಕಿರುವುದು ನಿಮ್ಮ ಹೃದಯದಲ್ಲಿ ಸ್ಥಾನ. ಆ ಶಾಶ್ವತ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗುತ್ತೇನೆ ಎಂದು ಭಾವುಕರಾದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Sat, 7 June 25







