ಬಿಎಂಟಿಸಿಯ ಹೊಸ ಎಲೆಕ್ಟ್ರಿಕ್ ಬಸ್ಗಳಿಗೆ ಶಾಕ್! ಸಂಚಾರವೇ ಸ್ಥಗಿತ: ಕಾರಣವೇನು ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಬ್ರೇಕ್ ಹಾಕಲು ಬಿಎಂಟಿಸಿ ಬರೋಬ್ಬರಿ 320 ಎಸಿ ಎಲೆಕ್ಟ್ರಿಕ್ ಬಸ್ಗಳ ಮೊರೆ ಹೋಗಿತ್ತು. ಟ್ರಯಲ್ ರನ್ ಕೂಡ ಯಶಸ್ವಿಯಾಗಿ ನಡೆದಿತ್ತು. ಆದರೆ ಇದೀಗ ಹೊಸ ಬಸ್ಗಳು ಸಂಚಾರ ಮಾಡುತ್ತಿಲ್ಲ. ಅದ್ಯಾಕೆ ಹೀಗಾಯ್ತು? ಕಾರಣವೇನು? ತಿಳಿಯಲು ಮುಂದೆ ಓದಿ.

ಬೆಂಗಳೂರು, ಫೆಬ್ರವರಿ 22: ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ ಅಶೋಕ್ ಲೇಲ್ಯಾಂಡ್ ಬಸ್ಸುಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಆ 320 ಬಸ್ಗಳಿಗೆ ಚಾಲಕರು ಸಿಗುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಫೆಬ್ರವರಿ 1 ರಿಂದಲೇ 320 ಎಸಿ ಎಲೆಕ್ಟ್ರಿಕ್ ಬಸ್ಸುಗಳು ರಸ್ತೆಗಿಳಿಯಬೇಕಿತ್ತು. ಆದರೆ ಡ್ರೈವರ್ಗಳಿಲ್ಲದೆ ಬಸ್ಗಳು ರೋಡಿಗಿಳಿತ್ತಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಎಸಿ ಎಲೆಕ್ಟ್ರಿಕ್ ಬಸ್ಗಳ ಟ್ರಯಲ್ ರನ್ ಯಶಸ್ವಿಯಾಗಿದೆ .ಖಾಸಗಿ ಏಜೆನ್ಸಿಗಳ ಮೂಲಕ ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರ ನೇಮಕ ಮಾಡಿಕೊಳ್ಳಲು ಬಿಎಂಟಿಸಿ ಮುಂದಾಗಿತ್ತು. ಆದರೆ ಏಜೆನ್ಸಿಗಳ ಮೂಲಕ ಕೆಲಸಕ್ಕೆ ಬರಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಬಿಎಂಟಿಸಿ ಚಾಲಕರಿಗೆ 35 ರಿಂದ 40 ಸಾವಿರ ರೂ. ಸಂಬಳ ಕೊಡಲಾಗುತ್ತಿದೆ. ಆದರೆ ಏಜೆನ್ಸಿ ಮೂಲಕ ಬರುವ ಚಾಲಕರಿಗೆ ಕೇವಲ 18 ಸಾವಿರ ರೂ. ಸಂಬಳ ನೀಡಲಾಗುತ್ತಿದೆ. ಅದಕ್ಕೆ ಚಾಲಕರು ಎಲೆಕ್ಟ್ರಿಕ್ ಬಸ್ ಚಲಾಯಿಸುವ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಸಿಗುತ್ತಿಲ್ಲ ಚಾಲಕರು
ಈ ಹೊಸ ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರನ್ನು ಗುತ್ತಿಗೆ ಪಡೆದ ಬಸ್ ಕಂಪನಿಗಳಿಂದಲೇ ನೇಮಕ ಮಾಡಲಾಗುತ್ತಿದೆ. ಕಂಡಕ್ಟರ್ ಮಾತ್ರ ಬಿಎಂಟಿಸಿಯಿಂದ ನೇಮಕವಾಗುತ್ತಾರೆ. ಹನ್ನೆರಡು ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಒಂದು ಕಿಮೀಗೆ ಈ ಬಸ್ಗೆ ಬಿಎಂಟಿಸಿ 68 ರುಪಾಯಿ ನೀಡಲಿದೆ. ಮೊದಲ ಬಾರಿಗೆ ರಾಜಧಾನಿಯಲ್ಲಿ ಸಂಚರಿಸಬೇಕಿದ್ದ ಐದು ಎಸಿ ಎಲೆಕ್ಟ್ರಿಕ್ ಬಸ್ಗಳ ಟ್ರಯಲ್ ರನ್ ಮೆಜೆಸ್ಟಿಕ್ನಿಂದ ಕಾಡುಗೋಡಿವರೆಗೆ ನಡೆಸಲಾಗಿತ್ತು. ಸರ್ಕಾರದಿಂದ ಇವುಗಳಿಗೆ 150 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಎಲೆಕ್ಟ್ರಿಕ್ ಎಸಿ ಬಸ್ಗಳಿಗೆ ಚಾಲನೆ ನೀಡಬೇಕಿತ್ತು. ಆದರೆ ಚಾಲಕರು ಸಿಗದೆ ಎಲ್ಲವೂ ನಿಂತುಹೋಗಿದೆ.
ವಿಮಾನ ನಿಲ್ದಾಣ, ಮೆಜೆಸ್ಟಿಕ್, ಕತ್ರಿಗುಪ್ಪೆ, ಐಟಿಪಿಎಲ್, ಎಚ್ಎಸ್ಆರ್ ಡಿಪೋದಿಂದ ಬಸ್ ಹೊರಡಿಸಲು ಚಿಂತನೆ ನಡೆಸಲಾಗಿತ್ತು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಈ ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಕಂಡಕ್ಟರ್ಗಳನ್ನು ಮಾತ್ರ ನಾವು ಕೊಡುತ್ತೇವೆ. ಕೇಂದ್ರ ಸರ್ಕಾರ ಬಸ್ ಕಂಪನಿಗಳಿಗೆ ಸಬ್ಸಿಡಿ ನೀಡುತ್ತದೆ. ಸಬ್ಸಿಡಿ ಪಡೆದ ಕಂಪನಿ ಡ್ರೈವರ್ಗಳನ್ನು ನೇಮಕ ಮಾಡಿಕೊಳ್ಳುತ್ತದೆ. ನಮಗೆ ಸಬ್ಸಿಡಿ ನೀಡಿದ್ದರೆ ತುಂಬಾ ಸಹಾಯ ಆಗುತ್ತದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಬೇಕಿದ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಯಾಣ ದರ ಏರಿಕೆ ಪರಿಣಾಮ: ನಮ್ಮ ಮೆಟ್ರೋದಿಂದ ದೂರವುಳಿದ 6 ಲಕ್ಷ ಪ್ರಯಾಣಿಕರು!
ಒಟ್ಟಿನಲ್ಲಿ ಇತ್ತ ನಮ್ಮ ಮೆಟ್ರೋದಲ್ಲಿ ಟಿಕೆಟ್ ದರ ಏರಿಕೆ ಆಗಿದೆ. ಬಿಎಂಟಿಸಿಯ ಎಸಿ ಎಲೆಕ್ಟ್ರಿಕ್ ಬಸ್ನಲ್ಲಿ ಸಂಚಾರ ಮಾಡೋಣ, ಎಲೆಕ್ಟ್ರಿಕ್ ಬಸ್ನಿಂದ ವಾಯುಮಾಲಿನ್ಯ ಕಡಿಮೆ ಆಗುತ್ತದೆ, ಜನರು ನೆಮ್ಮದಿಯಿಂದ ಉಸಿರಾಡಬಹುದು ಎಂದುಕೊಂಡಿದ್ದ ಪ್ರಯಾಣಿಕರ ಆಸೆಗೆ ಬಿಎಂಟಿಸಿ ತಣ್ಣೀರು ಹಾಕಿದ್ದಂತೂ ಸುಳ್ಳಲ್ಲ.