ಬೆಂಗಳೂರು: ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಅವರ ಮಹದೇವಪುರದ ಅಂಬಲಿಪುರದಲ್ಲಿರುವ ನಿವಾಸಕ್ಕೆ ಇಂದು(ಜ.3) ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಮುಖಂಡರು ಭೇಟಿ ನೀಡಿ ಪ್ರದೀಪ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಇಂದು ಸಿದ್ದರಾಮಯ್ಯ ಹಾಗೂ ರಾಮಲಿಂಗ ರೆಡ್ಡಿ ಜೊತೆಗೆ ಭೇಟಿ ನೀಡಿದ್ದೇವೆ, ರಿಪೇರಿ ಮಾಡಲಾಗದಷ್ಟು ನೋವಾಗಿದೆ ಪ್ರದೀಪ್ ಕುಟುಂಬಕ್ಕೆ, ದುರಂತ್ಯ ಅಂತ್ಯವಾಗಿರುವ ಪ್ರದೀಪ್ ಕುಟುಂಬಕ್ಕೆ ದುಃಖ ಹಂಚಿಕೊಳ್ಳಲು ಬಂದಿದ್ದೇವೆ. ಅತಿರೇಕದ ನಿರ್ಧಾರ ಪ್ರದೀಪ್ ತೆಗೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳು.
40% ಕಮಿಷನ್ ನಿಂದ ಜೀವದ ಮೇಲೆ ಜೀವ ಬಲಿಯಾಗುತ್ತಿದೆ. ಸಂತೋಷ್ ಪಾಟೀಲ್ ಕೂಡ ಬಿಜೆಪಿ ಲೀಡರ್ ಆಗಿದ್ದ ಅವನಿಗೂ ಹಣಕಾಸಿನ ಸಮಸ್ಯೆ ಆಗಿತ್ತು. ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿತ್ತು, ಬಿಜೆಪಿ ನಾಯಕರು ಯಾಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕುತ್ತಿದ್ದಾರೆ. ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ, ಇವರ ಮಗಳ ಹೆಂಡತಿಯ ಕಣ್ಣೀರು ಒರೆಸುವುದಕ್ಕೆ ಸರ್ಕಾರದ ಕೈಲಿ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರದಿಂದಾಗಿಯೇ ಇದೆಲ್ಲ ಆಗುತ್ತಾ ಇದೆ. ಪ್ರದೀಪ್ ಕೊಲೆಗೆ ಕಾರಣ ಆದವರಿಗೆ ಸರ್ಕಾರ ಶಿಕ್ಷೆ ಕೊಡಬೇಕು. ಅದು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರಿಗೆ ಶಿಕ್ಷೆ ಆಗಬೇಕು. ಅವರನ್ನು ಬಂಧಿಸಿ ಕಂಬಿ ಹಿಂದೆ ಕಳಿಸಬೇಕು ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಈ ಹಿಂದೆ ಬಿಜೆಪಿ ಕಾರ್ಯಕರ್ತನಾಗಿಯೂ ಕೆಲಸ ಮಾಡಿದ್ದ, ಆತ್ಮಹತ್ಯೆಗೂ ಮುನ್ನ ಪ್ರದೀಪ್ ಒಂದಲ್ಲ ಮೂರು ಡೆತ್ನೋಟ್ಗಳನ್ನು ಬರೆದಿಟ್ಟು ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Pradeep Suicide) ಮಾಡಿಕೊಂಡಿರುವುದು ತಿಳಿದುಬಂದಿದೆ. ರೆಸಾರ್ಟ್ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಭಾಗಿಯಾದ ನಂತರ ಮೂರು ಡೆತ್ ನೋಟ್ ಬರೆದಿದ್ದ ಪ್ರದೀಪ್, ಒಂದನ್ನು ಪತ್ನಿ ನಮಿತಾಳ ವಾರ್ಡ್ ರೋಮ್ನಲ್ಲಿಟ್ಟಿದ್ದಾರೆ. ಬಳಿಕ ರೆಸಾರ್ಟ್ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನ ಇಟ್ಟಿದ್ದರು. ಮೂರನೇ ಡೆತ್ನೋಟ್ ಅನ್ನು ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದ ಪ್ರದೀಪ್, ಡೆತ್ ನೋಟ್ ಜೊತೆಗೆ ಬ್ಯಾಂಕ್ ದಾಖಲೆಗಳನ್ನ ಕೂಡ ಇಟ್ಟಿದ್ದರು. ಆತ್ಮಹತ್ಯೆಗೂ ಮುನ್ನವೇ ಈ ಡೆತ್ನೋಟ್ ಪ್ರದೀಪ್ ಕುಟುಂಬಸ್ಥರ ಕಣ್ಣಿಗೆ ಬಿದ್ದಿದೆ.
ಡೆತ್ನೋಟ್ ಗಮನಿಸದ ಸಂಬಂಧಿಕರು ಜನವರಿ 1ರ ಸಂಜೆ ಸುಮಾರು 4 ಗಂಟೆಗೆ ರೆಸಾರ್ಟ್ನಿಂದ ಹೊರಟಿದ್ದಾರೆ. ಅದನ್ನ ಕಂಡ ಪ್ರದೀಪ್, ಸಂಬಂಧಿಕರು ಹೋಗುತ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ ಮುನ್ನುಗ್ಗಿದ್ದಾರೆ. ಬಳಿಕ ಒಂದು ಕಿ.ಮೀ ದೂರದಲ್ಲಿ ‘ನಿಟ್ಟಿಗೆರೆ’ ಎಂಬಲ್ಲಿ ಸಂಬಂಧಿಕರು ಹಿಂದೆ ಬರುತ್ತಿರುವುದನ್ನು ಖಾತ್ರಿ ಮಾಡಿಕೊಂಡ ಪ್ರದೀಪ್ ಪಿಸ್ತೂಲ್ ಕೈಗೆತ್ತಿಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ