Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಂಗಳೂರಿನಲ್ಲಿದ್ದ ಮೊತ್ತೋರ್ವ ಆರೋಪಿ ಬಂಧನ
ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು: ಬಿಜೆಪಿ ಯುವ ಕಾರ್ಯಕರ್ತ (BJP Youth Activist) ಪ್ರವೀಣ್ ನೆಟ್ಟಾರು (Parveen Nettaru) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಬಂಧಿಸಿದ್ದಾರೆ. ತೌಫೀಲ್ ಬಂಧಿತ ಆರೋಪಿ. ಎನ್ಐಎ ಅಧಿಕಾರಿಗಳು ನಿನ್ನೆ (ಮಾ.4) ರಂದು ರಾತ್ರಿ 9.30 ಕ್ಕೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಬಂಧಿಸಿದ್ದಾರೆ. ಎನ್ಐಎ ಅಧಿಕಾರಿಗಳು ಆರೋಪಿ ಪತ್ತೆಗೆ 5 ಲಕ್ಷ ಹಣ ಬಹುಮಾನ ಘೋಷಣೆ ಮಾಡಿದ್ದರು.
ಪ್ಲಂಬರ್ನಂತೆ ಮನೆಗೆ ಎಂಟ್ರಿ ಕೊಟ್ಟು ತೌಫಿಲ್ ಬಂಧಿಸಿದ ಎನ್ಐಎ ಅಧಿಕಾರಿಗಳು
ನಿನ್ನೆ ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು ಎನ್ಐಎ ಅಧಿಕಾರಿಗಳು ತೌಫಿಲ್ ಮನೆ ಬಳಿಗೆ ಹೋಗಿದ್ದಾರೆ. ನಂತರ ಮೊದಲಿಗೆ ಇಬ್ಬರು ಅಧಿಕಾರಿಗಳು ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ತೌಫಿಲ್ ಮಟನ್ ಕತ್ತರಿಸುತ್ತಿದ್ದನು. ಇಬ್ಬರು ಅಧಿಕಾರಿಗಳು ಒಳಗಡೆ ಬಂದದ್ದನ್ನು ನೋಡಿದ ತೌಘಿಲ್, ಚಾಕುವಿನಿಂದ ಹಲ್ಲೆ ಮಾಡಲು ಬಂದಿದ್ದಾನೆ. ಇದನ್ನು ತಿಳಿದ ಉಳಿದ ಅಧಿಕಾರಿಗಳು ಏಕಕಾಲಕ್ಕೆ ಒಳಗೆ ಬಂದು ತೌಘಿಲ್ನನ್ನು ಲಾಕ್ ಮಾಡಿಕೊಂಡಿದ್ದಾರೆ. ಸದ್ಯ ಎನ್ಐಎ ಅಧಿಕಾರಿಗಳು ತೌಫಿಲ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ
ಪ್ರವೀಣ್ ನೆಟ್ಟಾರುನನ್ನು ಜುಲೈ 26 ರಂದು ಆತನ ಕೋಳಿ ಅಂಗಡಿಗೆ ನುಗ್ಗಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಜುಲೈ 27 ರಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಉಗ್ರ ಕೃತ್ಯಗಳಿಗೆ ಬಳಸುತ್ತಿರುವ ಆರೋಪದಲ್ಲಿ ಕಮ್ಯುನಿಟಿ ಹಾಲ್ ಎನ್ಐಎ ವಶಕ್ಕೆ
ಪ್ರವೀಣ್ ಹತ್ಯೆಗೆ ಮೂರು ಬಾರಿ ಸಂಚು
ಪ್ರವೀಣ್ ಹತ್ಯೆಯಾಗಿದ್ದು ಮೂರನೇ ಯತ್ನದಲ್ಲಿ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾಗೊ ಮೊದಲು ಎರಡು ಬಾರಿ ಹತ್ಯೆ ಯತ್ನ ನಡೆದಿತ್ತು. ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಅದೇ ಬೈಕ್ನಲ್ಲಿ ಕೊಲ್ಲಲು ತಂಡ ಬಂದಿದ್ದು, ಆದರೆ ಅಂಗಡಿ ಬಳಿ ಜನ ಇದ್ದಿದ್ದರಿಂದ ವಾಪಾಸ್ ಹೋಗಿದ್ದಾರೆ. ಜು.24 ರಂದು ಸಂಜೆ 4.30 ಕ್ಕೆ ಕೊಲ್ಲಲು ಸಂಚು ರೂಪಿಸಲಾಗಿತ್ತು.
20 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ NIA
ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು 1,500 ಪುಟಗಳ ಚಾರ್ಜ್ಶೀಟ್ ಅನ್ನು NIA ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಟಿವಿ9ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Sun, 5 March 23