Shakti Scheme: ಉಚಿತ ಬಸ್​ಗೆ ಮುಗಿಬಿದ್ದ ಮಹಿಳೆಯರು; ಸಂಕಷ್ಟದಲ್ಲಿ ಖಾಸಗಿ ಬಸ್ ಮಾಲೀಕರು

|

Updated on: Jun 12, 2023 | 12:11 PM

ಶಿವಮೊಗ್ಗ, ಮಂಗಳೂರು, ಹಾಸನ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಸಾರಿಗೆ ಬಸ್ ನಿಲ್ದಾಣ ಫುಲ್ ರಶ್ ಆಗಿದ್ದು ಮತ್ತೊಂದು ಕಡೆ ಖಾಸಗಿ ಬಸ್ ನಿಲ್ದಾಣ ಖಾಲಿ ಖಾಲಿ ಕಂಡು ಬಂದಿದೆ.

Shakti Scheme: ಉಚಿತ ಬಸ್​ಗೆ ಮುಗಿಬಿದ್ದ ಮಹಿಳೆಯರು; ಸಂಕಷ್ಟದಲ್ಲಿ ಖಾಸಗಿ ಬಸ್ ಮಾಲೀಕರು
ಕೆಂಪು ಬಸ್​ಗಳಲ್ಲಿ ಮಹಿಳಾ ಮಣಿಗಳು
Follow us on

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮೊದಲ ಗ್ಯಾರಂಟಿ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯು ರಾಜ್ಯಾದ್ಯಂತ ಜೂನ್‌ 11ರ ಭಾನುವಾರ ಯಶಸ್ವಿಯಾಗಿ ಉದ್ಘಾಟನೆಯಾಗಿದೆ(Shakti Scheme). ಇಂದು ಈ ಯೋಜನೆಯ ಎರಡನೇ ದಿನವಾಗಿದ್ದು ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಸರ್ಕಾರಿ ಬಸ್​ಗಳಿಗೆ ಮುಗಿಬಿದ್ದಿದ್ದಾರೆ. ಉಚಿತ ಪ್ರಯಾಣವೆಂದು ಕೆಂಪು ಬಸ್​ಗಳನ್ನತ್ತುತ್ತಿದ್ದಾರೆ. ಇದರಿಂದ ಖಾಸಗಿ ಬಸ್​ಗಳಿಗೆ ನಷ್ಟ ಎದುರಾಗಿದೆ.

ಶಿವಮೊಗ್ಗ, ಮಂಗಳೂರು, ಹಾಸನ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಸಾರಿಗೆ ಬಸ್ ನಿಲ್ದಾಣ ಫುಲ್ ರಶ್ ಆಗಿದ್ದು ಮತ್ತೊಂದು ಕಡೆ ಖಾಸಗಿ ಬಸ್ ನಿಲ್ದಾಣ ಖಾಲಿ ಖಾಲಿ ಕಂಡು ಬಂದಿದೆ. ಉಚಿತ ಬಸ್ ಪ್ರಯಾಣದ ಲಾಭ ಪಡೆಯಲು ನಾರಿಮಣಿಗಳು ಸರ್ಕಾರಿ ಬಸ್​ಗಳಿಗೆ ಮುಗಿಬೀಳುತ್ತಿದ್ದಾರೆ.

ಉಚಿತ ಬಸ್‌ಗಳ ಸೇವೆ ಆರಂಭವಾಗುತ್ತಿದ್ದಂತೆ ಮಹಿಳೆಯರು ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿಲ್ಲ. ಹಲವು ನಗರಗಳಲ್ಲಿ ಖಾಸಗಿ ಬಸ್‌ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಅಲ್ಲದೆ ಖಾಸಗಿ ಬಸ್​ಗಳ ಟಿಕೆಟ್‌ ಬುಕ್ಕಿಂಗ್‌ ಕೂಡ ಕಡಿಮೆ ಆಗಿದೆ. ದಿನಕ್ಕೆ 30ರಿಂದ 40 ಮಂದಿ ಮಹಿಳೆಯರು ಖಾಸಗಿ ಬಸ್​ನಲ್ಲಿ ಓಡಾಡುತ್ತಿದ್ದರು. ಆದ್ರೆ ಈಗ ಒಬ್ಬರು ಕೂಡ ಬರುತ್ತಿಲ್ಲ ಎಂದು ಖಾಸಗಿ ಬಸ್​ಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಬಾಗಲಕೋಟೆ ಟಂಟಂ ಚಾಲಕರಿಗೆ ಬಾರಿ ಹೊಡೆತ

ಶಕ್ತಿ ಯೋಜನೆಯು ಬಾಗಲಕೋಟೆ ಟಂಟಂ ಚಾಲಕರಿಗೆ ಬಾರಿ ಹೊಡೆತ ಕೊಟ್ಟಿದೆ. ಬಹುತೇಕ ಮಹಿಳಾ ಪ್ರಯಾಣಿಕರ ಮೇಲೆ ಅವಲಂಭಿತರಾಗಿರುವ ಟಂಟಂ ಚಾಲಕರು ಈಗ ಪ್ರಯಾಣಿಕರಿಲ್ಲದೆ ಖಾಲಿ ಕುಂತಿದ್ದಾರೆ. ವಿದ್ಯಾರ್ಥಿನಿಯರು, ತರಕಾರಿ ವ್ಯಾಪಾರಸ್ಥ ಮಹಿಳೆಯರು, ಮಹಿಳಾ ಸರಕಾರಿ ಹಾಗೂ ಖಾಸಗಿ ನೌಕರರ ಮೇಲೆ ಟಂಟಂ ಚಾಲಕರು ಅವಲಂಭಿತರಾಗಿದ್ದರು. ಬಾಗಲಕೋಟೆಯಿಂದ ನವನಗರ, ವಿದ್ಯಾಗಿರಿ, ಗದ್ದನಕೇರಿ ಕ್ರಾಸ್ ವರೆಗೂ ನಿತ್ಯ ಸಂಚರಿಸುವ ಟಂಟಂಗಳು ಬೆಳಗ್ಗೆಯಿಂದ ನಿಂತಲ್ಲೇ ನಿಂತಿವೆ.

ಇದನ್ನೂ ಓದಿ:Shakti Yojana: ಉಚಿತ ಬಸ್ ಪ್ರಯಾಣದಿಂದ ವಂಚಿತರಾದ ಗಡಿಭಾಗದ ಗ್ರಾಮಗಳ ಮಹಿಳೆಯರು, ಏಕೆ ? ಇಲ್ಲಿದೆ ಓದಿ 

ಬಾಗಲಕೋಟೆ ನಗರದಲ್ಲಿ 3 ಸಾವಿರ ಟಂಟಂಗಳಿವೆ. 3 ಸಾವಿರ ಕುಟುಂಬಗಳು ಟಂಟಂ ದುಡಿಮೆಯ ಮೇಲೆಯೇ ಜೀವನ ಸಾಗಿಸುತ್ತಿವೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯರಿಗೆ ಫ್ರೀ ಮಾಡಿದಾರೆ. ನಮ್ಮ ಪ್ಯಾಸೆಂಜರ್​ಗಳೆ ಹೆಚ್ಚು ಮಹಿಳೆಯರು. ಈಗ ಅವರೇ ಇಲ್ಲದ ಕಾರಣ ಬಹಳ ತೊಂದರೆಯಾಗಿದೆ. ಬೆಳಿಗ್ಗೆ ಐದು ಗಂಟೆಗೆ ಸ್ಟ್ಯಾಂಡ್ ನಲ್ಲಿ ಟಂಟಂ ನಿಲ್ಲಿಸಿ ಖಾಲಿ ಕೂತಿದ್ದೇವೆ. ಬೆಳಿಗ್ಗೆಯಿಂದ ಇಲ್ಲಿವರೆಗೆ ಎರಡೆರಡು ಟ್ರಿಪ್ ಹೊಡೆಯುತ್ತಿದ್ದೆವು. ಇಂದು ಇದುವರೆಗೂ ಒಂದು ಟ್ರಿಪ್ ಆಗಿಲ್ಲ. ಲೋನ್ ಮೇಲೆ ಟಂಟಂ‌ ಖರೀದಿ ಮಾಡಿರುತ್ತೇವೆ. ತಿಂಗಳಾದರೆ ಲೋನ್ ಕಟ್ಟೋದು ಹೇಗೆ? ಮಕ್ಕಳ ಶಾಲೆ, ಕುಟುಂಬ ನಿರ್ವಹಣೆ ಹೇಗೆ? ಮಹಿಳೆಯರ ಉಚಿತ ಪ್ರಯಾಣ ಬಾರಿ ನಷ್ಟ ತಂದಿದೆ. ಹೀಗೆ ಮುಂದುವರೆದರೆ ಟಂಟಂ ಮಾರುವ ಸ್ಥಿತಿ ಬರುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಟಂಟಂ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ನಾವೂ ಕೂಡ ಉಚಿತ ಸೇವೆ ನೀಡ್ತೀವಿ, ಅದರ ವೆಚ್ಚ ಸರ್ಕಾರ ಭರಿಸಲಿ -ಖಾಸಗಿ ಬಸ್ ಮಾಲೀಕರ ಅಳಲು

ಒಂದು ಕಡೆ ರಾಜ್ಯದಲ್ಲಿ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದರೆ ಮತ್ತೊಂದು ಕಡೆ ಖಾಸಗಿ ಬಸ್ ಮಾಲೀಕರು ಸಮಸ್ಯೆಗೆ ಸಿಲುಕಿದ್ದಾರೆ. ಮೈಸೂರಿನ ಖಾಸಗಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಸರ್ಕಾರ ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡಲಿ. ನಾವು ಉಚಿತವಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತೇವೆ. ಅದರ ಹಣವನ್ನು ಸರ್ಕಾರ ಭರಿಸಿ ಕೊಡಲಿ. ಯಾವುದೇ ನಿಯಮ ವಿಧಿಸಲಿ ಎಂದು ಟಿವಿ9 ಮೂಲಕ ಖಾಸಗಿ ಬಸ್ ಮಾಲೀಕರು ಮನವಿ ಮಾಡಿದರು. ಎಲ್ಲರಿಗೂ ಉಚಿತ ಕೊಟ್ಟಿರುವುದು ಸರಿಯಲ್ಲ. ವಯಸ್ಸಾದವರಿಗೆ, ಆಸ್ಪತ್ರೆಗೆ ಹೋಗುವವರಿಗೆ, ಬಡವರಿಗೆ ಈ ರೀತಿ ಆಯ್ದ ಕೆಲವರಿಗೆ ಮಾತ್ರ ಯೋಜನೆ ನೀಡಿ ಎಂದು ಖಾಸಗಿ ಬಸ್ ಮಾಲೀಕರು ಒತ್ತಾಯಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ