ಕರ್ನಾಟಕದಲ್ಲಿ ಶೀಘ್ರ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಆಗ್ರಹ, ಮುಸ್ಲಿಂ ಬಾಲಕಿಯರಿಗೆ ಪ್ರತ್ಯೇಕ ಕಾಲೇಜು ಚಿಂತನೆಗೆ ವಿರೋಧ
ಹಿಂದೂ ಹೆಣ್ಣುಮಕ್ಕಳು ಪ್ರೀತಿ ಮಾಡುವಾಗ ವ್ಯತ್ಯಾಸ ಅರಿಯಲಿ. ಇಲ್ಲವಾದರೆ ಶ್ರದ್ಧಾಳ ಹಾಗೇ ತುಂಡು ತುಂಡಾಗಿ ಬಲಿಯಾಗುತ್ತಾರೆ ಎಂದು ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ಬೆಂಗಳೂರು: ಕರ್ನಾಟಕದಲ್ಲಿ ಶೀಘ್ರ ಲವ್ ಜಿಹಾದ್ ವಿರೋಧಿ (Love Jihad) ಕಾನೂನು ಜಾರಿಯಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಸಂಚಾಲಕ ಮೋಹನ್ಗೌಡ ಆಗ್ರಹಿಸಿದರು. ರಾಜ್ಯದಲ್ಲಿ ಹಿಂದೂ ಯುವತಿಯರ ರಕ್ಷಣೆಗೆ ಇಂಥ ಕಾನೂನು ಅತ್ಯಗತ್ಯ. ಹಿಂದೂ ಸಂಘಟನೆಗಳಿಂದ ಅಭಿಯಾನ, ಪ್ರತಿಭಟನೆ ಆರಂಭಿಸುತ್ತೇವೆ. ಚಳಿಗಾಲದ ಅಧಿವೇಶನದೊಳಗೆ ಸರ್ಕಾರ ಈ ಕಾನೂನು ಜಾರಿಗೆ ತರಬೇಕು. ಡಿ 11ರಿಂದ ರಾಜ್ಯಾದ್ಯಂತ ಹಿಂದೂ ಸಂಘಟನೆಗಳಿಂದ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದರು. ಮಂಗಳೂರಿನಲ್ಲಿ ಶ್ರದ್ಧಾ ಕೊಲೆ ಪ್ರಕರಣವನ್ನು ಲವ್ ಜಿಹಾದ್ಗೆ ಹೋಲಿಸುವ ಪೋಸ್ಟರ್ಗಳನ್ನು ಅಂಟಿಸಲಾಗಿದ್ದು, ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ಜಾರಿ ಮಾಡಬೇಕು ಎಂದು ಹಿಂದುತ್ವ ಪರ ಸಂಘಟನೆಗಳು ಆಗ್ರಹಿಸಿವೆ.
ಸಿಎಂಗೆ ಮನವಿ: ಪ್ರಮೋದ್ ಮುತಾಲಿಕ್
ಮೈಸೂರು: ರಾಜ್ಯದಲ್ಲಿ ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿದೆ. ಲವ್ ಜಿಹಾದ್ ವಿರುದ್ಧ ಮೊದಲು ಧ್ವನಿ ಎತ್ತಿದವನೇ ನಾನು. ಮೂರು ಸಾವಿರ ಹೆಣ್ಣುಮಕ್ಕಳನ್ನ ನಾವು ಪಾರು ಮಾಡಿದ್ದೇವೆ. ಹಿಂದೂ ಹೆಣ್ಣುಮಕ್ಕಳು ಪ್ರೀತಿ ಮಾಡುವಾಗ ವ್ಯತ್ಯಾಸ ಅರಿಯಲಿ. ಇಲ್ಲವಾದರೆ ಶ್ರದ್ಧಾಳ ಹಾಗೇ ತುಂಡು ತುಂಡಾಗಿ ಬಲಿಯಾಗುತ್ತಾರೆ ಎಂದು ಅವರು ಹೇಳಿದರು.
ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜು: ಹಿಂದೂ ಜನಜಾಗೃತಿ ಸಮಿತಿ ಆಕ್ಷೇಪ
ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜು ನಿರ್ಮಿಸುವ ವಕ್ಫ್ ಮಂಡಳಿ ನಿರ್ಧಾರವನ್ನು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಮೋಹನ್ ಗೌಡ ಖಂಡಿಸಿದ್ದಾರೆ. ಹಿಂದೂಗಳಿಗೂ ಪ್ರತ್ಯೇಕ ಕಾಲೇಜುಗಳನ್ನು ನಿರ್ಮಿಸಿಕೊಡಿ ಎಂದು ಆಗ್ರಹಿಸಿದ್ದಾರೆ. ಹಿಜಾಬ್ ಧರಿಸಲು ಮುಸ್ಲಿಮರಿಗೆ ಅವಕಾಶ ಸಿಗಬೇಕೆಂಬ ಕಾರಣಕ್ಕೆ ಸರ್ಕಾರವೇ ಸಾರ್ವಜನಿಕರ ಹಣದಲ್ಲಿ ಪ್ರತ್ಯೇಕ ಕಾಲೇಜು ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ವಿಚಾರ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಲೇಜುಗಳಲ್ಲಿ ಹಿಂದೂ ಮುಸ್ಲಿಂ ಎಂಬ ತಾರತಮ್ಯ ಆಗಬಾರದು ಎನ್ನುವ ಕಾರಣಕ್ಕೆ ವಸ್ತ್ರಸಂಹಿತೆಯನ್ನು ಜಾರಿಗೆ ತರಲಾಗಿದೆ. ಆದರೆ ಈಗ ಸರ್ಕಾರವೇ ಸರ್ಕಾರವೇ ಮುಸ್ಲಿಮರಿಗೆ ಪ್ರತ್ಯೇಕವಾಗಿ ಕಾಲೇಜು ನಿರ್ಮಾಣ ಮಾಡಲು ಮುಂದಾಗಿದೆ. ಮುಸ್ಲಿಮರ ಮತಗಳ ಮೇಲೆ ಕಣ್ಣಿಟ್ಟು ನಡೆಸುತ್ತಿರುವ ಓಲೈಕೆ ರಾಜಕಾರಣ ಇದು. ಚುನಾವಣೆ ಕೊನೆಯ ಕ್ಷಣದಲ್ಲಿ ಸರ್ಕಾರ ಅಘಾತಕಾರಿ ನಿರ್ಣಯ ತೆಗೆದುಕೊಂಡಿರುವುದು ಖಂಡನೀಯ. ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜು ನಿರ್ಮಿಸುವುದಾದರೆ ಹಿಂದೂಗಳಿಗೂ ಪ್ರತ್ಯೇಕ ಕಾಲೇಜು ನಿರ್ಮಿಸಿಕೊಡಿ. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬೀಫ್ ಬಿರಿಯಾನಿ ರೀಲ್ಸ್ಗೆ ಹಿಂದೂ ಜಾಗರಣ ವೇದಿಕೆ ಆಕ್ಷೇಪ
ಮಂಗಳೂರು: ಹೊರವಲಯದ ಮುಡಿಪು ಬಳಿ ಇರುವ ತಾಜ್ ಹೊಟೆಲ್ಗೆ ಬುಧವಾರ ಭೇಟಿ ನೀಡಿದ್ದ ಹಿಂದೂ ಜಾಗರಣ ವೇದಿಕೆ ಸದಸ್ಯರು ‘ಬೀಫ್ ಬಿರಿಯಾನಿ’ ರಿಲ್ಸ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ದನದ ಮಾಂಸದ ಬಿರಿಯಾನಿ ಇದೆ’ ಎಂದು ಹೊಟೆಲ್ ಮಾಲೀಕ ಹರಿಬಿಟ್ಟಿದ್ದ ವಿಡಿಯೊಗೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ, ಮಾಲೀಕ ಹುಸೇನ್ನನ್ನು ವಿಚಾರಣೆ ನಡೆಸಿದರು.
ಇದನ್ನೂ ಓದಿ: ವಕ್ಫ್ ಮಂಡಳಿಯಿಂದ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ 10 ಹೊಸ ಕಾಲೇಜು: ಸರ್ಕಾರಿ ಕಾಲೇಜುಗಳ ಪಠ್ಯಕ್ರಮ
Published On - 2:11 pm, Wed, 30 November 22