KSRTC: ಅತ್ಯಾಧುನಿಕ ಇ-ಬಸ್ ಸೇವೆ ಶೀಘ್ರ ಆರಂಭ; ಬ್ರಾಂಡಿಂಗ್ ಐಡಿಯಾ ಕೊಟ್ಟರೆ 25 ಸಾವಿರ ಬಹುಮಾನ
ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಮೈಸೂರು ಬಸ್ ನಿಲ್ದಾಣದಲ್ಲಿ ಬಸ್ ಚಾರ್ಜಿಂಗ್ ಯೂನಿಟ್ ಸ್ಥಾಪಿಸುವ ಪ್ರಕ್ರಿಯೆಯೂ ಈಗಾಗಲೇ ಆರಂಭವಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಹೊಸದಾಗಿ ಆರಂಭಿಸುತ್ತಿರುವ ಮಲ್ಟಿ ಆಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಸಾರ್ವಜನಿಕರು ಬ್ರಾಂಡ್ ನೇಮ್, ಟ್ಯಾಗ್ಲೈನ್ ಹಾಗೂ ಗ್ರಾಫಿಕ್ಸ್ಗಳನ್ನು ಆಹ್ವಾನಿಸಿದೆ. ಪ್ರತಿ ಮಾದರಿಯ ವಾಹನಗಳಿಗೆ ಸೂಚಿಸುವ ಟ್ಯಾಗ್ಲೈನ್, ಬ್ರಾಂಡ್ ನೇಮ್ಗೆ ತಲಾ ₹ 10 ಸಾವಿ ನಗದು ಬಹುಮಾನ ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ₹ 25 ಸಾವಿರ ಬಹುಮಾನ ನೀಡಲಾಗುವುದು ಎಂದು ನಿಗಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಐಡಿಯಾಗಳನ್ನು ಹಂಚಿಕೊಳ್ಳಲು ಕೊನೆಯ ದಿನಾಂಕ ಡಿಸೆಂಬರ್ 5. ಬ್ರಾಂಡ್ ಐಡಿಯಾಗಳನ್ನು cpro@ksrtc.org ಇಮೇಲ್ಗೆ ಅಥವಾ ನಿಗಮದ ಫೇಸ್ಬುಕ್/ಟ್ವಿಟರ್ ಖಾತೆಗೆ ಸಲ್ಲಿಸಬಹುದಾಗಿದೆ ಎಂದು ನಿಗಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಮೈಸೂರಿಗೆ ಡಿ 15 ರಿಂದ ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಬಸ್ಗಳ ಸೇವೆ ಆರಂಭಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ. ಇದು ಕರ್ನಾಟಕದಲ್ಲಿ ಎರಡು ನಗರಗಳ ನಡುವೆ ಆರಂಭವಾಗಲಿರುವ ಮೊದಲ ಎಲೆಕ್ಟ್ರಿಕ್ ಬಸ್ ಮಾರ್ಗವಾಗಲಿದೆ. ನಂತರದ ದಿನಗಳಲ್ಲಿ ಬೆಂಗಳೂರಿನಿಂದ ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಗರಗಳಿಗೂ ಎಲೆಕ್ಟ್ರಿಕ್ ಬಸ್ಗಳು ಸಂಚರಿಸಲಿವೆ. ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಮೈಸೂರು ಬಸ್ ನಿಲ್ದಾಣದಲ್ಲಿ ಬಸ್ ಚಾರ್ಜಿಂಗ್ ಯೂನಿಟ್ ಸ್ಥಾಪಿಸುವ ಪ್ರಕ್ರಿಯೆಯೂ ಈಗಾಗಲೇ ಆರಂಭವಾಗಿದೆ.
ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ಕಂಪನಿಯಿಂದ ಕೆಎಸ್ಆರ್ಟಿಸಿ ಬಸ್ಗಳನ್ನು ಖರೀದಿಸುತ್ತಿದೆ. ಡಿಸೆಂಬರ್ 15ಕ್ಕೆ ಮೊದಲ ಬಸ್ ನಿಗಮಕ್ಕೆ ಹಸ್ತಾಂತರವಾಗಲಿದ್ದು, ಇದನ್ನು ಪ್ರಾಯೋಗಿಕವಾಗಿ ಮೈಸೂರು ಮಾರ್ಗದಲ್ಲಿ ಓಡಿಸಲಾಗುವುದು. ಡಿಸೆಂಬರ್ 31ರ ಹೊತ್ತಿಗೆ 25, ಫೆಬ್ರುವರಿ 15ರ ಹೊತ್ತಿಗೆ ಇತರ 55 ಬಸ್ಗಳನ್ನು ಕೆಎಸ್ಆರ್ಟಿಸಿ ಸ್ವೀಕರಿಸಲಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅಂಬುಕುಮಾರ್ ‘ಟೈಮ್ಸ್ ಆಫ್ ಇಂಡಿಯಾ’ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದಾರೆ.
KSRTC New Line of Buses Branding Ideas pic.twitter.com/zNvnGTb5hl
— KSRTC (@KSRTC_Journeys) November 28, 2022
ಕೆಎಸ್ಆರ್ಟಿಸಿಯು ಹೊಸ ಮಾದರಿಯ ವೋಲ್ವೋ 9600 ಮಾಡೆಲ್ನ ಬಿಎಸ್-6 ಮಾನದಂಡವನ್ನು ಪೂರೈಸುವ 20 ಅತ್ಯಾಧುನಿಕ ಯೂರೋಪಿಯನ್ ಶೈಲಿಯ ಬಸ್ಗಳನ್ನು ರಸ್ತೆಗೆ ಇಳಿಸಲಿದೆ. ಈ ಬಸ್ಗಳು 15 ಮೀಟರ್ (50 ಅಡಿ) ಉದ್ದವಿದ್ದು, 40 ಬರ್ತ್ಗಳನ್ನು ಹೊಂದಿರಲಿದೆ. ಈ ಬಸ್ಗಳಲ್ಲಿ ಪ್ರತಿ ಬರ್ತ್ಗೆ ಪ್ರತ್ಯೇಕ ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಎಸಿ ನಳಿಕೆಗಳು ಮತ್ತು ರೀಡಿಂಗ್ ಲೈಟ್ ವ್ಯವಸ್ಥೆ ಇರಲಿದೆ.