PSI Recruitment Scam: ರಾಜಕೀಯ ಲಾಭದ ಹುನ್ನಾರ ಬೇಡ; ಪ್ರಿಯಾಂಕ್ ಖರ್ಗೆಗೆ ಆರಗ ಜ್ಞಾನೇಂದ್ರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 25, 2022 | 9:03 AM

‘ಯಾವುದೇ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸದೆ, ಅಕ್ರಮ ಎಸಗಿದವರನ್ನು, ಕಾನೂನಿನ ಬಲೆಗೆ ತರಲು ಮುಂದಾಗಬೇಕು’ ಎಂದು ಸಲಹೆ ಮಾಡಿದ್ದಾರೆ.

PSI Recruitment Scam: ರಾಜಕೀಯ ಲಾಭದ ಹುನ್ನಾರ ಬೇಡ; ಪ್ರಿಯಾಂಕ್ ಖರ್ಗೆಗೆ ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಪಿಎಸ್​ಐಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನು ಒದಗಿಸುವಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಯಾವುದೇ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸದೆ, ಅಕ್ರಮ ಎಸಗಿದವರನ್ನು, ಕಾನೂನಿನ ಬಲೆಗೆ ತರಲು ಮುಂದಾಗಬೇಕು’ ಎಂದು ಸಲಹೆ ಮಾಡಿದ್ದಾರೆ. ‘ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಇದಕ್ಕೆ ಸಹಾಯವಾಗುವಂತೆ ಸಿಐಡಿ ಪೊಲೀಸರಿಗೆ, ತಮ್ಮ ಬಳಿ ಇರಬಹುದಾದ ಸಾಕ್ಷ್ಯಗಳನ್ನು ಒದಗಿಸಿ, ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿ’ ಎಂದು ಕೋರಿದ್ದಾರೆ.

‘ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲು ಸಹಕರಿಸಬೇಕು. ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ’ ಎಂದು ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ತಮ್ಮ ಬಳಿ ಅಕ್ರಮಕ್ಕೆ ಸಂಬಂಧಿಸಿದಂತೆ ಒಂದು ಆಡಿಯೋ ರೆಕಾರ್ಡ್ ಇದೆ ಎಂದಿದ್ದರು. ಇದನ್ನು ಸಿಐಡಿಗೆ ಒದಗಿಸಬೇಕು ಎಂದು ಗೃಹ ಸಚಿವರು ಇದೀಗ ಕೋರಿದ್ದಾರೆ. ‘ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ ತನಿಖೆಗೆ ಆದೇಶ ನೀಡಿದ್ದೆ. ಇಂಥ ಕೃತ್ಯಗಳಿಂದ ಬಡ ಕುಟುಂಬದಿಂದ ಬಂದಂಥ ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿಗಳು ಮೂಲೆಗುಂಪಾದರೆ ಸಮಾಜಕ್ಕೆ ಆಗುವ ನಷ್ಟ ಅಪಾರ’ ಎಂದು ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದರು.

ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರನ್ನು ಸಿಐಡಿ ಇಂದು (ಏಪ್ರಿಲ್ 25) ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ಡಿವೈಎಸ್​ಪಿ ನರಸಿಂಹಮೂರ್ತಿ ಎದುರು ಪ್ರಿಯಾಂಕ್​ ಖರ್ಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಪಿಎಸ್​ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ್ದ ಖರ್ಗೆ, ಅಕ್ರಮದ ಬಗ್ಗೆ ತಮ್ಮಲ್ಲಿ ಸಾಕ್ಷ್ಯವಿದೆ ಎಂದಿದ್ದರು. ಸಾಕ್ಷ್ಯಾಧಾರ, ದಾಖಲೆ ಒದಗಿಸುವಂತೆ ಸಿಐಡಿ ನೊಟೀಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಖರ್ಗೆ ಅವರು ಸಿಐಡಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಇದನ್ನೂ ಓದಿ: PSI Recruitment Scam: ಕಿಂಗ್​ಪಿನ್​ ರುದ್ರಗೌಡಗೆ ಸಿಐಡಿ ಗ್ರಿಲ್​, ಆರೋಪಿ ಮಂಜುನಾಥ ನಾಪತ್ತೆ, ಪ್ರಿಯಾಂಕ್ ಖರ್ಗೆ ವಿಚಾರಣೆ ಸಾಧ್ಯತೆ

ಇದನ್ನೂ ಓದಿ: PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?