ಬೆಂಗಳೂರು: ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಯಶವಂತಗೌಡ, ಮಧು ಎಂಬುವವರನ್ನು ಬಂಧಿಸಿದ್ದಾರೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಈವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರ ವಿರುದ್ಧ ಒಎಂಆರ್ ಶೀಟ್ ತಿದ್ದಿರುವ ಆರೋಪ ಕೇಳಿಬಂದಿದೆ. ಎಚ್.ಯು.ರಘುವೀರ್, ಎಂ.ಸಿ.ಚೇತನ್ ಕುಮಾರ್, ಸಿ.ವೆಂಕಟೇಶ್ ಗೌಡ, ಮಮತೇಶ್ ಗೌಡ, ಆರ್.ಮಧು, ಸಿ.ಕೆ.ದಿಲೀಪ್ ಕುಮಾರ್, ಎಚ್.ಆರ್.ಪ್ರವೀಣ್ ಕುಮಾರ್, ಸೂರ್ಯನಾರಾಯಣ, ಸಿ.ಎಂ.ನಾಗರಾಜ, ಗಜೇಂದ್ರ, ಯಶವಂತ್ ದೀಪ್, ಮನುಕುಮಾರ್, ಜಿ.ಸಿ.ರಾಘವೇಂದ್ರ, ನಾಗೇಶ್ ಗೌಡ, ಆರ್.ಮಧು, ಯಶವಂತ ಗೌಡ ಬಂಧಿತರು. ನಾಪತ್ತೆಯಾಗಿರುವ ಆರು ಆರೋಪಿಗಳಿಗಾಗಿ ಸಿಐಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ರೋಲ್ ನಂಬರ್ 9245556ರ ಮಧು ಮತ್ತು ರೋಲ್ ನಂಬರ್ 9244198ರ ಯಶವಂತಗೌಡ ಅವರ ವಿರುದ್ಧ ಒಎಂಅರ್ ಶೀಟ್ ತಿದ್ದಿರುವ ಆರೋಪ ಕೇಳಿಬಂದಿದೆ. ಪಿಎಸ್ಐ ನೇಮಕಾತಿ ಹಗರಣ ಸಂಬಂಧ ಪ್ರಕರಣ ದಾಖಲಾದ ಬಳಿಕ ಇವರಿಬ್ಬರೂ ನಾಪತ್ತೆಯಾಗಿದ್ದರು.
ಹಗರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ಬಂಧಿಸಿದ ಹಿನ್ನೆಲೆಯಲ್ಲಿ ಕಿಂಗ್ಪಿನ್ಗಳ ಜೊತೆ ಸಂಪರ್ಕ ಹೊಂದಿದ್ದ ಪೊಲೀಸರು ಕಂಗಾಲಾಗಿದ್ದಾರೆ. ರುದ್ರಗೌಡ ಪಾಟೀಲ್ ನಡೆಸಿದ್ದ ಅವ್ಯವಹಾರದಲ್ಲಿ ಇನ್ನೂ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಯಾರಾದರೂ ತಮ್ಮ ಹೆಸರು ಹೇಳಿದರೆ ಏನು ಮಾಡುವುದು ಎಂದು ಆತಂಕ ತೋಡಿಕೊಳ್ಳುತ್ತಿದ್ದಾರೆ. ಶಾಮೀಲಾಗಿರುವ ಸಿಬ್ಬಂದಿಯ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಸಿಐಡಿ, ಇನ್ನೂ ಕೆಲ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನೇಮಕಾತಿ ವಿಭಾಗದ ಎಲ್ಲ ಸಿಬ್ಬಂದಿ ವರ್ಗಾವಣೆ
ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಎಲ್ಲ ಸಿಬ್ಬಂದಿ ವರ್ಗಾವಣೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಿಎಸ್ಐ ಪರೀಕ್ಷಾ ಅಕ್ರಮ ಬಹಿರಂಗವಾಗುತ್ತಿದ್ದಂತೆ ನೇಮಕಾತಿ ವಿಭಾಗದಲ್ಲಿದ್ದ ಸುಮಾರು 40 ಸಿಬ್ಬಂದಿಯನ್ನು ಹಂತಹಂತವಾಗಿ ವರ್ಗಾವಣೆ ಮಾಡಲು ಗೃಹ ಇಲಾಖೆ ನಿರ್ಧರಿಸಿದೆ. ಈಗಾಗಲೇ ಎಡಿಜಿಪಿ ಹಾಗೂ ಡಿವೈಎಸ್ಪಿ ವರ್ಗಾವಣೆ ಆಗಿದೆ.
ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಎಡಿಜಿಪಿ ಇರುತ್ತಾರೆ. ಐಜಿ, ಡಿಐಜಿ, ಎಸ್ಪಿ ಹಂತದ ಓರ್ವ ಅಧಿಕಾರಿಗಳ ಹುದ್ದೆ ಮಂಜೂರಾಗಿದೆ. ಆದರೆ ಯಾರೂ ನಿಯೋಜನೆಗೊಂಡಿರಲಿಲ್ಲ. ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ಓರ್ವ ಡಿವೈಎಸ್ಪಿ ಮಾತ್ರ ನಿಯೋಜಿತರಾಗಿದ್ದರು. ಎಂಟಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳು, ಪಿಎಸ್ಐ, ಎಎಸ್ಐ, ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ ಸೇರಿ 42 ಮಂದಿ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇವರೆಲ್ಲರನ್ನೂ ವರ್ಗಾವಣೆ ಮಾಡಲು ಗೃಹ ಇಲಾಖೆ ನಿರ್ಧರಿಸಿದೆ.
ನರ್ಸಿಂಗ್ ಪರೀಕ್ಷೆಯಲ್ಲಿಯೂ ದಿವ್ಯಾ ಕೈವಾಡ ಶಂಕೆ
ನರ್ಸಿಂಗ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿಯೂ ದಿವ್ಯಾ ಹಾಗರಗಿ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಲಬುರಗಿಯಲ್ಲಿ ಸ್ವಂತ ನರ್ಸಿಂಗ್ ಕಾಲೇಜು ಹೊಂದಿರುವ ದಿವ್ಯಾ ಹಾಗರಗಿ, ನರ್ಸಿಂಗ್ ಪರೀಕ್ಷಾ ಕೇಂದ್ರ ಮಂಜೂರು ಮಾಡಿಸಿಕೊಂಡಿದ್ದರು.
ಇದನ್ನೂ ಓದಿ: PSI Recruitment Scam: ಪೋಷಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ರಚನಾ
Published On - 11:07 am, Fri, 6 May 22