AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ದಿವ್ಯಾಳನ್ನೇ ಬ್ಲ್ಯಾಕ್ ಮೇಲ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಬೆದರಿಕೆಗೆ ಬಗ್ಗಿದ ದಿವ್ಯಾ-ಕಾಶಿನಾಥ ಜೋಡಿ ಸೈಲೆಂಟಾಗಿ 10 ಲಕ್ಷ ರೂ ನೀಡಿ, ತಮ್ಮ ಅಕ್ರಮ ಬಯಲಿಗೆ ಬಾರದಂತೆ ಅಡೆತಡೆ ನಿರ್ಮಿಸಿಕೊಂಡಿದ್ದಾರೆ. ಸಿಐಡಿ ತನಿಖೆ ಶುರುವಾಗಿ, 18 ದಿನಗಳ ತರುವಾಯ ದಿವ್ಯಾ-ಕಾಶಿನಾಥ ಜೋಡಿ ಸಿಕ್ಕಿ, ಅವರಿಬ್ಬರನ್ನೂ ತನಿಖೆಗೆ ಒಳಪಡಿಸಿದಾಗ ಸಾಲಿ ಸಾಹೇಬನ ಭ್ರಷ್ಟಾಚಾರ ಬೆಳಕಿಗೆ ಬಂದಿರುವುದು. ಅದುವರೆಗೂ ಎಲ್ಲಾ ಗುಪ್ತ್​ ಗುಪ್ತ್​ ಆಗಿಯೇ ಇತ್ತು ಸಾಲಿ ವ್ಯವಹಾರ.

PSI Recruitment Scam: ದಿವ್ಯಾಳನ್ನೇ ಬ್ಲ್ಯಾಕ್ ಮೇಲ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ದಿವ್ಯಾಳನ್ನೇ ಬ್ಲ್ಯಾಕ್ ಮೇಲ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
TV9 Web
| Edited By: |

Updated on: May 05, 2022 | 10:51 PM

Share

ಕಲಬುರಗಿ: ರಾಜ್ಯ ಸಿವಿಲ್ ಪೊಲೀಸ್​ ವಿಭಾಗಕ್ಕೆ ಇತ್ತೀಚೆಗೆ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್​​ ಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ನಡೆದ ನಾನಾ ಪರೀಕ್ಷೆಗಳ ವೇಳೆ ಅಕ್ರಮಗಳ ಸರಮಾಲೆಯೆ ಕಂಡುಬಂದಿದೆ. ಈ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ನಾನಾ ಕರಾಳ ಮುಖಗಳು ಬಯಲಿಗೆ ಬೀಳುತ್ತಿವೆ. ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳಿಂದ ಓರ್ವ ಡಿವೈಎಸ್ಪಿ ಬಂಧನ ವಿಚಾರವೇ ರೋಚಕವಾಗಿದೆ. ಅಸಲಿಗೆ ಈ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸಿಕ್ಕಿಬಿದ್ದಿದ್ದು ಬ್ಲ್ಯಾಕ್ ಮೇಲ್ ಮಾಡಿ‌ಯಂತೆ!

ಬಂದಿತ ಆರೋಪಿ ಮಲ್ಲಿಕಾರ್ಜುನ ಸಾಲಿ ಅವರು ಲಿಂಗಸುಗೂರು ಡಿವೈಎಸ್ಪಿ. ಇವರೇನೂ ನೇರವಾಗಿ ಅಕ್ರಮದಲ್ಲಿ ಸಕ್ರಿಯರಾಗಿ ಭಾಗಿಯಾಗಿಲ್ಲವಾದರೂ ಸುಪ್ತವಾಗಿದ್ದುಕೊಂಡು, ಕರಾಳ ದಂಧೆ ಮಾಡಿದ್ದಾರೆ. ಡಿವೈಎಸ್ಪಿ ಮಟ್ಟದ ಪೊಲೀಸ್​ ಅಧಿಕಾರಿಯಾಗಿ ಅಕ್ರಮಕ್ಕೆ ಕಡಿವಾಣ ಹಾಕುವುದನ್ನು ಬಿಟ್ಟು, ಮತ್ತಷ್ಟು ಕುಮ್ಮಕ್ಕು ಕೊಟ್ಟಿದ್ದಾರೆ.

ದಿವ್ಯಾ ಹಾಗರಗಿ ಸಾರಥ್ಯದ ಜ್ಞಾನಜೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅಕ್ರಮ ನಡೆದಿರುವುದರ ಮಾಹಿತಿ ಸಾಲಿ ಸಾಹೇಬರಿಗೆ ಸ್ಪಷ್ಟವಾಗಿ ತಿಳಿದಿತ್ತು. ಪರೀಕ್ಷೆ ಮುಗಿದ ಕೆಲ ದಿನದಲ್ಲಿ ಆ ಮಾಹಿತಿ ಸಿಕ್ಕಿತ್ತು. ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ಸಾಲಿ ಸಾಹೇಬರಿಗೆ ಖಚಿತ ಮಾಹಿತಿ ಸಿಕ್ಕಿತು. ಆದರೆ ಪುಣ್ಯಾತ್ಮ, ಅದರ ವಿರುದ್ಧ ಕಾರ್ಯಾಚರಣೆ ನಡೆಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಡಿವಾಣ ಹಾಕುವುದನ್ನು ಬಿಟ್ಟು ಸಾಲಿ ಸಾಹೇಬ, ಗುಪ್ತ್ ಗುಪ್ತ್​ ಆಗಿ ಸುಪ್ತವಾಗಿದ್ದುಬಿಟ್ಟರು.

ಜ್ಞಾನಜೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಹೆಡ್ ಮಾಸ್ಟರ್ ಕಾಶಿನಾಥನಿಗೆ ಸಾಲಿ ಸಾಹೇಬರು ಬೆದರಿಕೆಹಾಕತೊಡಗಿದರು. ನನಗೆ ಹತ್ತು ಲಕ್ಷ ರೂಪಾಯಿ ರೊಕ್ಕ ಕೊಟ್ಟರೆ ಸುಮ್ಮನಾಗುತ್ತೇನೆ. ನಿಮ್ಮ ಅಕ್ರಮದ ಬಗ್ಗೆ ನಾನೇನೂ ಬಹಿರಂಗಪಡಿಸುವುದಿಲ್ಲ. ಅದಕ್ಕಿಂತ ಹೆಚ್ಚಿಗೆ ನಿಮ್ಮಗಳ ವಿರುದ್ಧ ಯಾವುದೇ ಕಾನೂನುಕ್ರಮ ತೆಗೆದುಕೊಳ್ಳುವುದಿಲ್ಲ. ಇಲ್ಲದಿದ್ದರೆ, ಗೊತ್ತಲ್ಲಾ.. ಮಾಹಿತಿ ಲೀಕ್ ಮಾಡಿಬಿಡುವೆ ಎಂದು ತಾನು ತೊಟ್ಟಿದ್ದ ಸಮವಸ್ತ್ರಕ್ಕೆ ಅಪಮಾನ ಮಾಡುವಂತೆ ಡೀಲ್​ಗೆ ಇಳಿದು, ಆರೋಪಿಗಳಿಬ್ಬರಿಗೂ ಬೆದರಿಕೆ ಹಾಕಿದ್ದನಂತೆ ಸಾಲಿ ಸಾಹೇಬ.

ಕುತೂಹಲಕಾರಿ ಸಂಗತಿಯೆಂದರೆ ಆ ಬೆದರಿಕೆಗೆ ಬಗ್ಗಿದ ದಿವ್ಯಾ-ಕಾಶಿನಾಥ ಜೋಡಿ ಸೈಲೆಂಟಾಗಿ ಹತ್ತು ಲಕ್ಷ ರೂಪಾಯಿ ನೀಡಿ, ತಮ್ಮ ಅಕ್ರಮ ಬಯಲಿಗೆ ಬಾರದಂತೆ ಸಾಲಿ ಸಾಹೇಬರಿಂದ ಅಡೆತಡೆ ನಿರ್ಮಿಸಿಕೊಂಡಿದ್ದಾರೆ. ಸಿಐಡಿ ತನಿಖೆ ಶುರುವಾಗಿ, 18 ದಿನಗಳ ತರುವಾಯ ದಿವ್ಯಾ-ಕಾಶಿನಾಥ ಜೋಡಿ ಸಿಕ್ಕಿ, ಅವರಿಬ್ಬರನ್ನೂ ತನಿಖೆಗೆ ಒಳಪಡಿಸಿದಾಗ ಸಾಲಿ ಸಾಹೇಬನ ಭ್ರಷ್ಟಾಚಾರ ಬೆಳಕಿಗೆ ಬಂದಿರುವುದು. ಅದು ವರೆಗೂ ಎಲ್ಲಾ ಗುಪ್ತ್​ ಗುಪ್ತ್​ ಆಗಿಯೇ ಇತ್ತು ಸಾಲಿ ವ್ಯವಹಾರ.

ತನಿಖೆಯ ವೇಳೆ ಬ್ಲ್ಯಾಕ್ ಮೇಲ್ ಬಗ್ಗೆ ಬಾಯಿಬಿಟ್ಟಿದ್ದ ದಿವ್ಯಾ ಮತ್ತು ಕಾಶಿನಾಥ್ ಜೋಡಿ ಸಾಲಿ ಸಾಹೇಬ ಹಣ ಪಡೆದಿರೋ ಬಗ್ಗೆ ಮಾಹಿತಿ ನೀಡಿತ್ತು. ಅದರ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ಇಂದು ಮಲ್ಲಿಕಾರ್ಜುನ ಸಾಲಿನನ್ನು ಬಂಧಿಸುವ ಶಾಸ್ತ್ರ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆ ನಡೆದ ಸಮಯದಲ್ಲಿ ಸಾಲಿ ಸಾಹೇಬರು ಆಳಂದ ಡಿವೈಎಸ್ಪಿ ಯಾಗಿದ್ದರು. ಇನ್ನು ನಾಳೆಯಿಂದ ಸಾಲಿ ಸಾಹೇಬರಿಗೆ ಸಿಐಡಿ ಪೊಲೀಸರ ಡ್ರಿಲ್ಲಿಂಗ್​ ಶುರುವಾಗಲಿದ್ದು, ಪ್ರಕರಣ ಮತ್ತಷ್ಟು ಬಿಗಿಗೊಳ್ಳಲಿದೆ. ತನ್ಮೂಲಕ ದಿವ್ಯಾ ಮತ್ತು ಕಾಶಿನಾಥ್ ಜೋಡಿಗೆ ಕುಣಿಕೆ ಬಿಗಿಯಾಗಲಿದೆ.