ಬೆಂಗಳೂರು (ಅಕ್ಟೋಬರ್ 09): ನಮ್ಮ ಮೆಟ್ರೋದ (Namma Metro) ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿಯಿಂದ-ಚಲ್ಲಘಟ್ಟ ಹಾಗೂ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಇಂದು (ಅ.9) ಬೆಳಗ್ಗೆ 5 ಗಂಟೆಯಿಂದ ಪೂರ್ಣ ಪ್ರಮಾಣದಲ್ಲಿ ಜನಸಂಚಾರಕ್ಕೆ ಮುಕ್ತವಾಗಿದೆ. ಯಾವುದೇ ರೀತಿಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಮಾಡದೇ ಮೆಟ್ರೋ ಸಂಚಾರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವುದೇ ಔಪಚಾರಿಕ ಉದ್ಘಾಟನೆ ಇಲ್ಲದೆ 2.10 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು 2.5 ಕಿ.ಮೀ. ಉದ್ದದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದೆ. ಇದರಿಂದ ಸಂಪೂರ್ಣ ನೇರಳೆ ಮಾರ್ಗ ವೈಟ್‌ಫೀಲ್ಡ್ (ಪೂರ್ವ) -ಚಲ್ಲಘಟ್ಟ (ಪಶ್ಚಿಮ) ಭಾಗ 43.49 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ಇದು ವೈಟ್ ಫಿಲ್ಡ್ ಭಾಗದ ಐಟಿ ಉದ್ಯೋಗಿಗಳು ಹಾಗೂ ಜನತೆ ಹೆಚ್ಚಿನ ಅನುಕೂಲವಾಗಿದೆ
ವೈಟ್‌ಫೀಲ್ಡ್‌ನಿಂದ ನೇರವಾಗಿ ಚಲ್ಲಘಟ್ಟದವರೆಗೆ ಯಾವುದೇ ತಡೆಯಿಲ್ಲದೆ ಪ್ರಯಾಣಿಕರು ಸಂಚರಿಸಬಹುದಾಗಿದೆ. ಸಂಚಾರ ದಟ್ಟಣೆ ಇಲ್ಲದ ವೇಳೆಯೂ ವೈಟ್‌ಫೀಲ್ಡ್‌ನಿಂದ ಪಟ್ಟಂದೂರು ಅಗ್ರಹಾರ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ. ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಂ.ಜಿ.ರಸ್ತೆ ಮಾರ್ಗದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ರೈಲು ಸಂಚಾರ ಆಗಲಿದೆ. ಮೈಸೂರು ರಸ್ತೆಯಿಂದ ಚಲ್ಲಘಟ್ಟ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆ ಎಂದಿನಂತೆ ಬೆಳಗ್ಗೆ 5ಕ್ಕೆ ಆರಂಭವಾಗುತ್ತದೆ.
ದೇಶದಲ್ಲಿ ಎರಡನೇ ಅತೀ ಉದ್ದದ ಮೆಟ್ರೋ ಮಾರ್ಗ ಎನ್ನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಇದೀಗ ವಿಸ್ತರಣೆ ಮಾರ್ಗ ಸೇರ್ಪಡೆಯಿಂದ ಒಟ್ಟಾರೆ 73.81 ಕಿಲೋ ಮೀಟರ್‌ಗೆ ವಿಸ್ತರಣೆಯಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗ 43.49 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಒಟ್ಟು 37 ಮೆಟ್ರೋ ನಿಲ್ದಾಣಗಳಿವೆ. ಇನ್ನು ಹಸಿರು ಮತ್ತು ನೇರಳೆ ಮಾರ್ಗ ಸೇರಿ ಒಟ್ಟು66 ಮೆಟ್ರೋ ನಿಲ್ದಾಣಗಳಿವೆ.
ಹೌದು.. ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ವರೆಗೆ ಕಳೆದ ಮಾರ್ಚ್‌ನಿಂದ ಮೆಟ್ರೋ ಸಂಚಾರವಿತ್ತಾದರೂ ಈ ವಿಭಾಗ ಸಂಪರ್ಕಿಸಲು ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್.ಪುರದವರೆಗೆ ಮಾರ್ಗ ಇರಲಿಲ್ಲ. ಇದರಿಂದ 2.10 ಕಿ.ಮೀ. ಅಂತರ ಕ್ರಮಿಸಲು ಫೀಡರ್ ಬಸ್, ಖಾಸಗಿ ವಾಹನ ಅವಲಂಬಿಸಬೇಕಾಗಿತ್ತು. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಸೆಪ್ಟೆಂಬರ್ 25ರಂದು ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರಂ ಮತ್ತು ಸೆ.30ರಂದು ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಅನುಮತಿ ನೀಡಿದ್ದರೂ ಸಹ ಸಂಚಾರ ಆರಂಭವಾಗಿರಲಿಲ್ಲ. ಇದರಿಂದ ಈ ಮಾರ್ಗದ ಮೆಟ್ರೋ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಮಾರ್ಗ ಉದ್ಘಾಟಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಿದ್ದಿಗೆ ಬಿದ್ದಿದ್ದರಿಂದ ರೈಲು ಆರಂಭ ವಿಳಂಬವಾಗಿತ್ತು. ಸಂಸದ ಪಿ.ಸಿ.ಮೋಹನ್ ಹಾಗೂ ತೇಜಸ್ವಿ ಸೂರ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ‘ಉದ್ಘಾಟನೆಗೆ ಕಾಯುವುದು ಬೇಡ, ನೇರವಾಗಿ ಚಾಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ’ ಎಂದು ಪೋಸ್ಟ್ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:23 am, Mon, 9 October 23