Rail Electrification: ತ್ವರಿತ ರೈಲ್ವೆ ವಿದ್ಯುದೀಕರಣ: ಬೆಂಗಳೂರು ಘಟಕಕ್ಕೆ ಪ್ರಶಸ್ತಿಯ ಮಹಾಪೂರ

| Updated By: ಗಣಪತಿ ಶರ್ಮ

Updated on: Jan 30, 2024 | 7:33 AM

ದೇಶಾದ್ಯಂತ ರೈಲು ಹಳಿ ವಿದ್ಯುದೀಕರಣ ಕಾಮಗಾರಿ ಚುರುಕುಗೊಂಡಿರುವುದಾಗಿ ಇತ್ತೀಚೆಗೆ ರೈಲ್ವೆ ಸಚಿವಾಲಯ ತಿಳಿಸಿತ್ತು. 2023 ರ ನವೆಂಬರ್​​ವರೆಗೆ 60,814 ಕಿಮೀಗಳ ಒಟ್ಟು ಬ್ರಾಡ್ ಗೇಜ್ (ಬಿಜಿ) ಹಳಿಯನ್ನು ವಿದ್ಯುದೀಕರಿಸಲಾಗಿದೆ ಎಂದು ಸಚಿವಾಲಯ ಹೇಳಿತ್ತು.

Rail Electrification: ತ್ವರಿತ ರೈಲ್ವೆ ವಿದ್ಯುದೀಕರಣ: ಬೆಂಗಳೂರು ಘಟಕಕ್ಕೆ ಪ್ರಶಸ್ತಿಯ ಮಹಾಪೂರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜನವರಿ 30: ರೈಲು ಹಳಿಗಳ ತ್ವರಿತ ವಿದ್ಯುದೀರಣಕ್ಕಾಗಿ (Railway Electrification)ನೀಡಲಾಗುವ ಮಾಸಿಕ 12 ‘ಪರ್ಸನ್ ಆಫ್​ ದಿ ಮಂತ್’ ಪ್ರಶಸ್ತಿಗಳ ಪೈಕಿ 7 ಪ್ರಶಸ್ತಿ ಬೆಂಗಳೂರು (Bengaluru) ಘಟಕದ ಪಾಲಾಗಿವೆ ಎಂದು ಬೆಂಗಳೂರಿನ ರೈಲ್ವೆ ವಿದ್ಯುದೀಕರಣ ಯೋಜನಾ ಘಟಕ ತಿಳಿಸಿದೆ. ರೈಲ್ವೆ ವಿದ್ಯುದೀಕರಣವನ್ನು ತ್ವರಿತಗೊಳಿಸಲು ಕೇಂದ್ರೀಯ ರೈಲ್ವೆ ಎಲೆಕ್ಟ್ರಿಫಿಕೇಶನ್ ಸಂಸ್ಥೆಯ (CORE) ಜನರಲ್ ಮ್ಯಾನೇಜರ್ ಈ ಪ್ರಶಸ್ತಿಯನ್ನು ಪರಿಚಯಿಸಿದ್ದರು.

ಬೆಂಗಳೂರು ಘಟಕವು ಎಲೆಕ್ಟ್ರಿಕಲ್, ಹಣಕಾಸು ಮತ್ತು ಅಕೌಂಟ್​ ವಿಭಾಗಗಳಿಗೆ ದಕ್ಷತೆಯ ಶೀಲ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಕೇಂದ್ರೀಯ ರೈಲ್ವೆ ಎಲೆಕ್ಟ್ರಿಫಿಕೇಶನ್ ಸಂಸ್ಥೆಯ ಪ್ರಧಾನ ಕಚೇರಿಯಾದ ಪ್ರಯಾಗ್‌ರಾಜ್‌ನಿಂದ ‘ಎರಡನೇ ಅತ್ಯುತ್ತಮ ಪ್ರಾಜೆಕ್ಟ್ ಅಚೀವರ್ ಶೀಲ್ಡ್’ (ರನ್ನರ್ಸ್-ಅಪ್) ಅನ್ನು ಸಹ ಪಡೆದುಕೊಂಡಿದೆ.

ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿರುವ ಟ್ರಾನ್ಸ್‌ಮಿಷನ್ ಲೈನ್‌ಗಳು ಮತ್ತು ಟ್ರಾಕ್ಷನ್ ಸಬ್ ಸ್ಟೇಷನ್‌ಗಳನ್ನು ನಿಯೋಜಿಸಲು ನೀಡಿದ ಕೊಡುಗೆಗಳಿಗಾಗಿ ಆರ್​ಇ, ಬೆಂಗಳೂರಿನ ಉಪ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ತುಳಜಪ್ಪ ಎಂ ಲಡ್ವಾ ಅವರು ‘ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ್ 2023’ ಅನ್ನು ಸ್ವೀಕರಿಸಿದ್ದಾರೆ ಎಂದು ಬೆಂಗಳೂರಿನ ರೈಲ್ವೆ ವಿದ್ಯುದೀಕರಣ ಯೋಜನಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

2022-23 ರಲ್ಲಿ, ಬೆಂಗಳೂರಿನ ರೈಲ್ವೇ ವಿದ್ಯುದೀಕರಣ ಯೋಜನಾ ಘಟಕವು ಕರ್ನಾಟಕದಲ್ಲಿ 698 ಆರ್​ಕೆಎಂ/ 1318 ಟಿಕೆಎಂ ಗುರಿಗೆ ವಿರುದ್ಧವಾಗಿ 1,306 ಟಿಕೆಎಂ (713 ಆರ್​ಕೆಎಂ) ಮಾರ್ಗವನ್ನು ವಿದ್ಯುದೀಕರಣಗೊಳಿಸಿದೆ. 2021 ರ ಜೂನ್ 16ರಂದು ಮುಖ್ಯ ಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಶ್ಯಾಮ್ ಸುಂದರ್ ಮಂಗಲ್ ಅವರ ಪ್ರಕಾರ, 2023-24 ಹಣಕಾಸು ವರ್ಷದಲ್ಲಿ (ಡಿಸೆಂಬರ್ ವರೆಗೆ), ಘಟಕವು 279 ಆರ್​​ಕೆಎಂ ಗುರಿಯೊಂದಿಗೆ 217 ಆರ್​ಕೆಎಂ ಅನ್ನು ವಿದ್ಯುದೀಕರಿಸಿದೆ.

ಚುರುಕುಗೊಂಡ ರೈಲ್ವೆ ಹಳಿ ವಿದ್ಯುದೀಕರಣ

ಕರ್ನಾಟಕದಲ್ಲಿ ವಂದೇ ಭಾರತ್​ನಂತಹ ಹೊಸ ರೈಲುಗಳ ಸಂಚಾರ ಆರಂಭವಾಗಿದ್ದು, ನೂತನ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಳಿಗಳ ಅಭಿವೃದ್ಧಿಕಾರ್ಯವೂ ಚುರುಕುಗೊಂಡಿದೆ. ರೈಲ್ವೆ ಹಳಿಗಳ ವಿದ್ಯುದೀಕರಣ ಕಾರ್ಯವೂ ತ್ವರಿತಗತಿಯಲ್ಲಿ ಸಾಗುತ್ತಿದೆ. ದೇಶಾದ್ಯಂತ ರೈಲು ಹಳಿ ವಿದ್ಯುದೀಕರಣ ಕಾಮಗಾರಿ ಚುರುಕುಗೊಂಡಿರುವುದಾಗಿ ಇತ್ತೀಚೆಗೆ ರೈಲ್ವೆ ಸಚಿವಾಲಯ ತಿಳಿಸಿತ್ತು. 2023 ರ ನವೆಂಬರ್​​ವರೆಗೆ 60,814 ಕಿಮೀಗಳ ಒಟ್ಟು ಬ್ರಾಡ್ ಗೇಜ್ (ಬಿಜಿ) ಹಳಿಯನ್ನು ವಿದ್ಯುದೀಕರಿಸಲಾಗಿದೆ ಎಂದು ಸಚಿವಾಲಯ ಹೇಳಿತ್ತು.

ಇದನ್ನೂ ಓದಿ: ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್

ಈ ರಾಜ್ಯಗಳಲ್ಲಿ ಶೇ 100 ವಿದ್ಯುದೀಕೃತ ರೈಲು ಹಳಿ

ಚಂಡೀಗಢ, ಛತ್ತೀಸ್‌ಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪುದುಚೇರಿ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ದೇಶದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ 100ರಷ್ಟು ವಿದ್ಯುದೀಕೃತ ರೈಲು ಹಳಿಗಳನ್ನು ಹೊಂದಿವೆ ಎಂದೂ ಸಚಿವಾಲಯದ ಪ್ರಕಟಣೆ ತಿಳಿಸಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ