ಬೆಂಗಳೂರಿನಲ್ಲಿ ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು: ಸಣ್ಣ ಮಳೆಗೂ ಜನಜೀವನ ಅಸ್ತವ್ಯಸ್ತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 02, 2022 | 8:21 AM

ರಾಜಕಾಲುವೆ ನೀರು ನುಗ್ಗಿದ್ದರಿಂದ ಮನೆಗಳಲ್ಲಿ ಕೆಸರು ತುಂಬಿಕೊಂಡಿದ್ದು, ಮನೆಗಳನ್ನು ಸ್ವಚ್ಛಗೊಳಿಸಲು ನಿವಾಸಿಗಳು ಪರದಾಡುವಂತಾಯಿತು. ಬಿಬಿಎಂಪಿ ಪೌರ ಕಾರ್ಮಿಕರು ರಸ್ತೆಗಳನ್ನು ಸ್ವಚ್ಛಗೊಳಿಸಲು ಮುಂದಾದರು. 

ಬೆಂಗಳೂರಿನಲ್ಲಿ ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು: ಸಣ್ಣ ಮಳೆಗೂ ಜನಜೀವನ ಅಸ್ತವ್ಯಸ್ತ
ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಲಾರಿಯ ಮೇಲೆ ತೆಂಗಿನಮರ ಉರುಳಿದೆ
Follow us on

ಬೆಂಗಳೂರು: ನಗರದ ವಿವಿಧೆಡೆ ರಾಜಕಾಲುವೆ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯದ ಪರಿಣಾಮವನ್ನು ಸಾರ್ವಜನಿಕರು ಅನುಭವಿಸಬೇಕಾಗಿದೆ. ನಿನ್ನೆ (ಮೇ 1) ಸಂಜೆ ನಗರದಲ್ಲಿ ಸುರಿದ ಮಳೆಯಿಂದಾಗಿ ಉತ್ತರಹಳ್ಳಿ ಪರಮಹಂಸ ಬಡಾವಣೆಯ ಸುಮಾರು 80 ಮನೆಗಳಿಗೆ‌ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ರಾಜಕಾಲುವೆ ನೀರು ನುಗ್ಗಿದ್ದರಿಂದ ಮನೆಗಳಲ್ಲಿ ಕೆಸರು ತುಂಬಿಕೊಂಡಿದ್ದು, ಮನೆಗಳನ್ನು ಸ್ವಚ್ಛಗೊಳಿಸಲು ನಿವಾಸಿಗಳು ಪರದಾಡುವಂತಾಯಿತು. ಬಿಬಿಎಂಪಿ ಪೌರ ಕಾರ್ಮಿಕರು ರಸ್ತೆಗಳನ್ನು ಸ್ವಚ್ಛಗೊಳಿಸಲು ಮುಂದಾದರು. ಮಳೆ-ಗಾಳಿಯಿಂದಾಗಿ ಎಂಟು ಮರಗಳು ಧರೆಗೆ ಉರುಳಿದವು. ಕೆಂಪೇಗೌಡ ರಸ್ತೆಯಲ್ಲಿ ಬೃಹತ್​ ಗಾತ್ರದ ಮರವೊಂದು ಉರುಳಿಬಿದ್ದಿತ್ತು. ಪ್ರಶಾಂತನಗರ, ಶೋಭಾ ಆಸ್ಪತ್ರೆ, ಶ್ರೀರಾಂಪುರ, ಮಲ್ಲೇಶ್ವರಂನ ಲಿಂಕ್ ರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ, ಉತ್ತರಹಳ್ಳಿ, ಕೆ.ಪಿ.ಅಗ್ರಹಾರಗಳಲ್ಲಿಯೂ ಮರಗಳು ಉರುಳಿದವು. ಸಂಗೊಳ್ಳಿ ರಾಯಣ್ಣ ರೈಲ್ವೆ ಅಂಡರ್​ಪಾಸ್ ನೀರಿನಲ್ಲಿ ಸಂಪೂರ್ಣ ಮುಳುಗಿತ್ತು. ಮಲ್ಲೇಶ್ವರಂನ ಪೈಪ್​ಲೈನ್​ ರಸ್ತೆಯಲ್ಲಿಯೂ ಮನೆಗಳಿಗೆ ನೀರು ನುಗ್ಗಿತ್ತು.

ಇನ್ನಷ್ಟು ಮಳೆ ಸಂಬಂಧಿತ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಮಳೆಯಿಂದಾಗಿ ಮರಗಳು ಉರುಳಿದ ಪರಿಣಾಮ 170 ವಿದ್ಯುತ್ ಕಂಬಗಳು ಭೂಮಿಗೆ ಬಿದ್ದಿವೆ. ಜಯನಗರ 2, ವೈಟ್ ಫೀಲ್ಡ್ 3, ಕೋರಮಂಗಲ 5, ಎಚ್​ಎಸ್​ಆರ್​ ಲೇಔಟ್ 6, ಹೊಸಕೋಟೆ 12, ಮಾಗಡಿ 9, ಚೆಂದಾಪುರ 44, ಕೋಲಾರ 19, ಕನಕಪುರ 12, ರಾಮನಗರ 60 ಸೇರಿ ಒಟ್ಟು 172 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಬೆಸ್ಕಾಂನ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಬಿಟಿಎಂ ಲೇಔಟ್​ನ ಐಎಎಸ್‌ ಕಾಲೊನಿಯಲ್ಲಿ ಮಳೆಯಿಂದಾಗಿ ನಾಲ್ಕೈದು ಮರಗಳು ಬುಡ ಸಮೇತ ಕಾರಿನ ಮೇಲೆ ಉರುಳಿವೆ. ಒಂದು ಒಂದು ಕಾರು ಸಂಪೂರ್ಣ ಜಖಂಗೊಂಡಿದ್ದರೆ, ಮತ್ತೆರಡು ಕಾರುಗಳ ಗಾಜುಗಳು ಪುಡಿಯಾಗಿವೆ. ಕಾರುಗಳ ಮೇಲೆ ಬಿದ್ದದ್ದ ಮರಗಳನ್ನು ಬಿಬಿಎಂಪಿ ಸಿಬ್ಬಂದಿ ನಿನ್ನೆ ರಾತ್ರಿಯೇ ತೆರವು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಮಳೆ ವಿವರ

ವಿದ್ಯಾಪೀಠ 77.5 ಮಿಮೀ, ಸಂಪಂಗಿರಾಮನಗರ 65 ಮಿಮೀ, ಬಿಳೆಕಹಳ್ಳಿ 62 ಮಿಮೀ, ರಾಜಮಹಲ್ ಗುಟ್ಟಹಳ್ಳಿ 61.5 ಮಿಮೀ, ಅರಕೆರೆ 60 ಮಿಮೀ, ದೊರೆಸಾನಿಪಾಳ್ಯ 49 ಮಿಮೀ, ದೊಡ್ಡನೆಕ್ಕುಂದಿ 48 ಮಿಮೀ, ಚೋಳನಾಯಕನಹಳ್ಳಿ 47.5 ಮಿಮೀ, ನಾಯಂಡಹಳ್ಳಿ 44.5 ಮಿಮೀ, ಆರ್.ಆರ್.ನಗರ 44 ಮಿಮೀ, ದಯಾನಂದ ನಗರ, ಕಗ್ಗಲೀಪುರ ತಲಾ 43 ಮಿಮೀ, ಕೋರಮಂಗಲ, ಸಾರಕ್ಕಿ ತಲಾ 41 ಮಿಮೀ, ಬೇಗೂರು 38.5, ಮಿಮೀ, ಕೆಂಗೇರಿ 37.5 ಮಿಮೀ, ಮಾರತ್ತಹಳ್ಳಿ 34 ಮಿಮೀ, ಗಾಳಿ‌ ಆಂಜನೇಯ ದೇವಸ್ಥಾನ, ಕಾಟನ್​ಪೇಟೆ, ನಾಗರಬಾವಿ ತಲಾ 33.5 ಮಿಮೀ, ಜ್ಞಾನಭಾರತಿ 33 ಮಿಮೀ, ಹಂಪಿನಗರ 32 ಮಿಮೀ, ರಾಮಮೂರ್ತಿನ ನಗರ 30 ಮಿಮೀ, ನಾಗಪುರ 28.5 ಮಿಮೀ ಮಳೆಯಾಗಿದೆ.

ರಾಮನಗರ: ಉರುಳಿದ ವಿದ್ಯುತ್ ಕಂಬಗಳು

ತಡರಾತ್ರಿ ರಾಮನಗರದಲ್ಲಿ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬದ ಮೇಲೆ ಉರಳಿದ ಬೃಹತ್ ಗ್ರಾತದ ಅರಳಿ ಮರ ಉರುಳಿದೆ. ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದ ಬಳಿ ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿರುವ ಪರಿಣಾಮ ರಾಮನಗರ-ಮಾಗಡಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮರವನ್ನು ಕಡಿದ ನಂತರ ಸಂಚಾರಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ವಿದ್ಯುತ್ ಕಂಬ‌ ಮುರಿದು‌ ಬಿದ್ದ ಪರಿಣಾಮ ತಡರಾತ್ರಿ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರು ಇಡೀ ರಾತ್ರಿಯನ್ನು ಕತ್ತಲಲ್ಲಿ ಕಳೆಯಬೇಕಾಯಿತು. ಬಿರುಗಾಳಿಯಿಂದ ಕೋಡಿಪುರ ಗ್ರಾಮದ ಮಂಜುನಾಥ ಅವರ ರೇಷ್ಮೆ ಸಾಕಾಣಿಕೆ‌ ಮನೆಯ ಶೀಟ್​ಗಳು ಹಾರಿಹೋಗಿವೆ.

ಪಿರಿಯಾಪಟ್ಟಣದಲ್ಲಿ ಆಲಿಕಲ್ಲು ಮಳೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಚಲಿಸುತ್ತಿದ್ದ ಲಾರಿಯ ಮೇಲೆ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆ ಬಂದ್ ಮಾಡಿ ಮರಗಳನ್ನು ತೆರವುಗೊಳಿಸಲಾಯಿತು. ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಗ್ರಾಮದಲ್ಲಿ ಸಿಡಿಲು ಬಡಿದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಂದು ಹಸು ಸಾವನ್ನಪ್ಪಿದ್ದು, ಮತ್ತೊಂದು ಹಸುವಿನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: Karnataka Rain: ರಾಜ್ಯದ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಮಳೆ: ಮಳೆಯಿಂದ ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳ ಪರದಾಟ

ಇದನ್ನೂ ಓದಿ: ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ವಿವಿಧೆಡೆ ಮಳೆ ಆರ್ಭಟ: ಉರುಳಿದ ಮರಗಳು, ವಿದ್ಯುತ್ ಕಡಿತ

Published On - 8:19 am, Mon, 2 May 22