Bengaluru Rain: ಬೆಂಗಳೂರಿನಲ್ಲಿ ಮಳೆಯೋ ಮಳೆ: ರಸ್ತೆ ಮೇಲೆ ನೀರು, ತೇಲಿದ ಕಾರು, ಉರುಳಿದ ಮರ, ಜನಜೀವನ ಅಸ್ತವ್ಯಸ್ತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 18, 2022 | 8:07 AM

ನಗರದ ಹಲವು ರಸ್ತೆಗಳು (Bengaluru Rain) ಅಕ್ಷರಶಃ ನದಿಗಳಾಗಿದ್ದವು. ರಾಜಕಾಲುವೆ ಕುಸಿತ, ವಾಹನ ಮುಳುಗಡೆ ಪ್ರಕರಣಗಳು ಸಾಮಾನ್ಯ ಎನಿಸಿತ್ತು

Bengaluru Rain: ಬೆಂಗಳೂರಿನಲ್ಲಿ ಮಳೆಯೋ ಮಳೆ: ರಸ್ತೆ ಮೇಲೆ ನೀರು, ತೇಲಿದ ಕಾರು, ಉರುಳಿದ ಮರ, ಜನಜೀವನ ಅಸ್ತವ್ಯಸ್ತ
ಬೆಂಗಳೂರಿನಲ್ಲಿ ಮಳೆಯಿಂದ ರಸ್ತೆಯ ಮೇಲೆ ನೀರು ಹರಿಯಿತು.
Follow us on

ಬೆಂಗಳೂರು: ನಗರದಲ್ಲಿ ಮಂಗಳವಾರ (ಮೇ 17) ಒಂದೇ ದಿನ 10 ಸೆಂಮೀ ಮಳೆಯಾಗಿದ್ದು, ನಗರದ ಹಲವು ರಸ್ತೆಗಳು (Bengaluru Rain) ಅಕ್ಷರಶಃ ನದಿಗಳಾಗಿದ್ದವು. ರಾಜಕಾಲುವೆ ಕುಸಿತ, ವಾಹನ ಮುಳುಗಡೆ ಪ್ರಕರಣಗಳು ಸಾಮಾನ್ಯ ಎನಿಸಿತ್ತು. ಬೊಮ್ಮನಹಳ್ಳಿ, ಎಚ್​ಎಸ್​ಆರ್ ಲೇಔಟ್, ಯಲಹಂಕ, ಹೊಸಕೆರೆಹಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು.

ನಗರದ ವಿವಿಧೆಡೆ ಪರಿಸ್ಥಿತಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ನೀರು ನುಗ್ಗಿ ಅವಾಂತರ ಆಗಿರುವ ಕಡೆ ಊಟದ ವ್ಯವಸ್ಥೆ ಮಾಡುತ್ತೇವೆ. ಕೆಸರು ತುಂಬಿಕೊಂಡಿರುವ ಮನೆಗಳನ್ನು ಸ್ವಚ್ಛಗೊಳಿಸುತ್ತೇವೆ. ಡ್ರೈನೇಜ್​ ಕಾಲುವೆಗಳಲ್ಲಿ ನೀರು ಸಮರ್ಪಕವಾಗಿ ಹರಿಯದ ಕಾರಣ ಇಂಥ ಪರಿಸ್ಥಿತಿ ಉದ್ಭವಿಸಿದೆ. ನೀರು ಹೊರಹಾಕಲು, ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಈ ಹಿಂದೆ ಅಕಾಲಿಕ ಮಳೆ ಸುರಿದಿದ್ದ ಕಾರಣ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾಮಗಾರಿಗೆ ಅಡ್ಡಿಯುಂಟಾಗಿತ್ತು. ವಿವಿಧೆಡೆ ಕಾಲುಗಳನ್ನು ನಿರ್ವಹಣೆ ಮಾಡುವಂತೆ ಬೆಂಗಳೂರು ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೆ ಸೂಚನೆ ನೀಡಿದ್ದೆವು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸ್ವಲ್ಪ ಸಮಯ ಬೇಕಿದೆ. ಸದ್ಯದ ಮಟ್ಟಿಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತೇವೆ. ಅಗತ್ಯವಿರುವ ಕಡೆಗಳಲ್ಲಿ ಪಂಪ್ ಬಳಸಿ ನೀರು ಹೊರಹಾಕಲಾಗುವುದು ಎಂದು ಹೇಳಿದರು.

ಸದಾಶಿವ ನಗರ ರಸ್ತೆ ಬಂದ್

ರಾತ್ರಿ ಸುರಿದ ಮಳೆಯಿಂದಾಗಿ ಮಲ್ಲೇಶ್ವರಂ 18ನೇ ಕ್ರಾಸ್​ನಲ್ಲಿ ಬೃಹತ್ ಮರವೊಂದು ನೆಲಕ್ಕೆ ಉರುಳಿದೆ. ಮರ ಬಿದ್ದ ಕಾರಣ ಕಾಂಪೌಂಡ್ ಕುಸಿದಿದೆ. ಮಲ್ಲೇಶ್ವರಂ ಕಡೆಯಿಂದ ಸದಾಶಿವನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಬಂದ್ ಆಗಿದೆ. ಮರ ತೆರವುಗೊಳಿಸಲು ಬಿಬಿಎಂಪಿ ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇದನ್ನೂ ಓದಿ: ಮಳೆಗೆ ಮುಳುಗುತ್ತಿದೆ ಬೆಂಗಳೂರು; ಬಿಬಿಎಂಪಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಾಯದ ಅಂಚಿನಲ್ಲಿದೆ ಈ 10 ಪ್ರದೇಶಗಳು

ಮನೆಗಳಿಗೆ ನೀರು

ಭಾರೀ ಮಳೆಯಿಂದಾಗಿ ನೀಲಸಂಧ್ರದ ರೋಸ್ ಗಾರ್ಡನ್​ನಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ಗಲ್ಲಿಗಳಲ್ಲಿ ಮಾತ್ರವಲ್ಲ ಪ್ರಮುಖ ರಸ್ತೆಯಲ್ಲಿರುವ ಮರಗಳೂ ಧರೆಗುರುಳಿವೆ. ಕೊಡಿಗೆಹಳ್ಳಿ ಬಳಿಯ ಟಾಟಾನಗರದ ರಸ್ತೆ ಮಧ್ಯದಲ್ಲಿ ಮರ ಉರುಳಿಬಿದ್ದಿದೆ. ರಿಚ್ಮಂಡ್ ರಸ್ತೆಯಲ್ಲಿ ರಾತ್ರಿಯಿಂದಲೂ ನೀರು ನಿಂತಿದ್ದು, ರಸ್ತೆ ಕೆರೆಯಂತಾಗಿದೆ. ಬೆಳ್ಳಂಬೆಳಿಗ್ಗೆಯೂ ಈ ಪ್ರದೇಶದಲ್ಲಿ ಜೋರು ಮಳೆ ಸುರಿಯಿತು. ರಸ್ತೆಯಲ್ಲಿ ನೀರು ನಿಂತಿರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಶಿವಾಜಿನಗರದಲ್ಲಿಯೂ ಮಳೆ ನೀರು ಅಂಗಡಿಗಳಿಗೆ ನುಗ್ಗಿತು. ರಸ್ತೆಗಳು ಜಲಾವೃತಗೊಂಡವು.

ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿಯಲ್ಲಿ ಮಳೆ ಅನಾಹುತದಿಂದ ಜನರು ಸಂಕಷ್ಟ ಅನುಭವಿಸಿದರು. ಮನೆಗಳು, ಅಪಾರ್ಟ್​​ಮೆಂಟ್ ಬೇಸ್​ಮೆಂಟ್​ಗಳಲ್ಲಿ ಕೆಸರು ನೀರು ತುಂಬಿಕೊಂಡಿದೆ. ಬಹುತೇಕ ಕಾರುಗಳು ಅರ್ಧಕ್ಕರ್ಧ ನೀರಿನಲ್ಲಿ ಮುಳುಗಿದ್ದವು. ಕಾವೇರಿ ಥಿಯೇಟರ್ ಜಂಕ್ಷನ್ ಬಳಿಯ ಅಂಡರ್​ಪಾಸ್​ನಲ್ಲಿ ಲಾರಿಯೊಂದು ಮೇಲಿನ ಬ್ರಿಡ್ಜ್​ಗೆ ತಾಗಿ ಸಿಲುಕಿಕೊಂಡಿದೆ. ಮಹದೇವಪುರದ ಗುರುರಾಜ ಲೇಔಟ್​ನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಕೊಳಕು ನೀರು ನುಗ್ಗಿದೆ. ಶ್ರೀರಾಂಪುರ ಮೆಟ್ರೋ ಸ್ಟೇಷನ್​​ಗೆ ನೀರು ನುಗ್ಗಿ ಅವಾಂತರ ಉಂಟುಮಾಡಿದೆ. ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಭಾರಿ ಮಳೆಯಿಂದ ಯುಬಿ ಸಿಟಿ ಮುಂದೆ ರಸ್ತೆ ಜಲಾವೃತವಾಗಿದ್ದು, 3 ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ಮಳೆಯಿಂದ ಶಿವಾಜಿನಗರದಲ್ಲಿ 8 ತಿಂಗಳ ಹಿಂದಷ್ಟೇ ನಿರ್ಮಿಸಿದ್ದ 20 ಅಡಿ ಎತ್ತರದ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿತದಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ಗಳು ಜಖಂಗೊಂಡಿವೆ.

ವಿಮಾನ ನಿಲ್ದಾಣ ಸಂಪರ್ಕ ಕಡಿತ

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಕೆರೆಯ ನೀರು ನುಗ್ಗಿದ ಕಾರಣ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 5 ಕಿಮೀ ಉದ್ದಕ್ಕೆ ಸಾವಿರಾರು ವಾಹನಗಳು ನಿಂತಿವೆ. ಹುಣಸಮಾರನಹಳ್ಳಿ ಫ್ಲೈ ಓವರ್ ಬಳಿ‌ ಪದೇಪದೆ ಹೀಗೆ ಆಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 am, Wed, 18 May 22