Rain Updates: ಕರ್ನಾಟಕದಲ್ಲಿ ಇನ್ನೂ 4 ದಿನ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು (ಏಪ್ರಿಲ್ 20) ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗುತ್ತಿದೆ. ಬೇಸಿಗೆಯ ಬೇಗೆಗೆ ಮಳೆ ತಂಪೆರೆದಿದೆ. ಬೇಸಿಗೆ ಮಳೆಯಲ್ಲಿ ಸಿಡಿಲು ಬಡಿಯುವ ಅಪಾಯವೂ ಹೆಚ್ಚು. ರಾಜ್ಯದಲ್ಲಿ ಈ ಬಾರಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಅರಸನಘಟ್ಟ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ 3 ಸಾವಿರಕ್ಕೂ ಅಧಿಕ ಬಾಳೆಗಿಡಗಳು ನಾಶವಾಗಿವೆ.
ಸತತ ಮಳೆ ಮತ್ತು ಗಾಳಿಯಿಂದಾಗಿ ಬೆಂಗಳೂರು ನಗರದಲ್ಲಿ ಸಾಕಷ್ಟು ಮರಗಳು ಧರೆಗೆ ಉರುಳಿವೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಕಾರಣದಿಂದಾಗಿ ತಂತಿಗಳು ತುಂಡಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಬೆಸ್ಕಾಂ ಸಿಬ್ಬಂದಿ ತುರ್ತಾಗಿ ಕಾರ್ಯನಿರ್ವಹಿಸಿದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದರು. ಇನ್ನೂ ಒಂದು ವಾರ ಮಳೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕವೂ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಏಪ್ರಿಲ್ 21ರ ವರೆಗೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಆಲಿ ಕಲ್ಲು ಸಹಿತ ಮಳೆಯಾಗಲಿದೆ. ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಮಳೆಯಿಂದ ಬೆಳೆ ನಷ್ಟವಾಗಿದೆ. ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದಾಗಿ ಮಾವು ಬೆಳೆಗೆ ಧಕ್ಕೆಯಾಗಿದೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಲಿಕಲ್ಲು ಮಳೆಗೆ ಟೊಮೆಟೊ, ಎಲೆಕೋಸು, ಹೂ, ಹಿಪ್ಪುನೇರಳೆ ಸೇರಿ ಹಲವು ಬೆಳೆಗಳು ಸಂಪೂರ್ಣ ನಾಶವಾಗಿವೆ. ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ.
ಮಳೆ ಆರ್ಭಟ: ಹಾನಿ
ಬಾಗಲಕೋಟೆ: ಬಾದಾಮಿಯ ಬನಶಂಕರಿ ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆ, ಗಾಳಿಯ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಹಾರಿಹೋಗಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ. ರವಿ ಬಾರಕೇರ ಅವರು ತಗಡಿನ ಶೆಡ್ನಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 30 ಚೀಲ ಶೇಂಗಾ ಬೆಳೆ ನಾಶವಾಗಿದೆ. ಗಾಳಿ ಮಳೆಯಿಂದಾಗಿ ಮನೆಯಲ್ಲಿದ್ದ ಓರ್ವ ಮಹಿಳೆಗೂ ಗಾಯಗಳಾಗಿವೆ. ಮನೆಯಲ್ಲಿದ್ದ ಗಂಗವ್ವ ನಾಗೇಶ ಬಾರಕೇರ ಅವರ ಕಾಲಿಗೆ ಇಟ್ಟಿಗೆ ಬಡಿದು ಗಾಯವಾಗಿದೆ.
ಮುಧೋಳ ತಾಲೂಕಿನ ಉತ್ತೂರ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದೆ. ರೈತ ಈರಣ್ಣ ಬೋರಡ್ಡಿಗೆ ಸೇರಿದ ಒಂದೂವರೆ ಎಕರೆಯಲ್ಲಿದ್ದ ಹೀರೇಕಾಯಿ ಬೆಳೆ ನಾಶವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಗೆ ಬಿಡುವು; ಗ್ರಾಮಾಂತರದಲ್ಲಿ ವರುಣನ ಆರ್ಭಟ, ಹಲವು ಕಡೆ ಭಾರಿ ಅನಾಹುತ
ಇದನ್ನೂ ಓದಿ: ದೆಹಲಿಯಲ್ಲಿ ಬೇಸಿಗೆಬಿಸಿ ಹವಾ ಶುರು! ಮುಂದೆ ಮಾನ್ಸೂನ್ ಬರುವುದು ಜೂನ್ ಕೊನೆಗೆ
Published On - 6:53 am, Wed, 20 April 22