ಬೆಂಗಳೂರು, ಮಾರ್ಚ್ 4: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Bomb Blast) ಪ್ರಕರಣದ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Bengaluru Hotel Assosiation) ಅಲರ್ಟ್ ಆಗಿದೆ. ನಗರದ ಹೋಟೆಲ್ಗಳಲ್ಲಿ ಭದ್ರತೆ ವಿಚಾರವಾಗಿ ಕಟ್ಟೆಚ್ಚರ ವಹಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ನೇತೃತ್ವದಲ್ಲಿ ಅಸೋಸಿಯೇಷನ್ ಸಭೆ ಸೇರಿದ್ದು, ಇದೇ ಮೊದಲ ಬಾರಿಗೆ ಹೋಟೆಲ್ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಹೋಟೆಲ್ ತಜ್ಞರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಸಂಬಂಧ ಹೋಟೆಲ್ ಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಒಂದು ವೇಳೆ ಇದು ಜಾರಿಯಾಗಿದ್ದೇ ಆದರೆ ಇನ್ಮುಂದೆ ಹೋಟೆಲ್ಗಳಲ್ಲಿಯೂ ಕಠಿಣ ಭದ್ರತಾ ನಿಯಮಗಳು ಅನ್ವಯವಾಗಲಿವೆ. ಬೇರೆ ರಾಜ್ಯಗಳಲ್ಲಿರುವ ಭದ್ರತಾ ಕ್ರಮಗಳನ್ನು ಅನುಸರಿಸಲು ಕೂಡ ಚಿಂತನೆ ಮಾಡಲಾಗಿದೆ.
ಇಷ್ಟೇ ಅಲ್ಲದೆ, ಭದ್ರತೆ ಹಾಗೂ ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲು ಹೋಟೆಲ್ ಅಸೋಸಿಯೇಷನ್ ಮುಂದಾಗಿದೆ. ಸಣ್ಣಪುಟ್ಟ ಹೋಟೆಲ್ಗಳಿಗೆ ಹೊರೆಯಾಗದಂತೆ ನಿಯಮವಳಿಗಳನ್ನು ಜಾರಿಗೊಳಿಸಲಾಗುವುದು ಎಂದು ಪಿಸಿ ರಾವ್ ತಿಳಿಸಿದ್ದಾರೆ. ಆದರೆ, ಕಡ್ಡಾಯವಾಗಿ ಪ್ರತಿಯೊಂದು ಹೋಟೆಲ್‌ಗಳು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲೇಬೇಕು ಎಂದು ಅಸೋಸಿಯೇಷನ್ ಹೇಳಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆ ನಂತರ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇದೀಗ ದಾಳಿ ಭೀತಿಯಿಂದ ಇತರ ಹೋಟೆಲ್‌ಗಳು ಸಹ ಭದ್ರತಾ ನಿಯಮಗಳನ್ನು ಬಿಗಿಗೊಳಿಸಲು ಮುಂದಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ