ಆರ್​ಸಿಬಿ ಅಭಿಮಾನಿಗಳೇ ಎಚ್ಚರ: ಕಪ್ ಗೆದ್ರೆ ಬೀದಿಗಿಳಿದು ಸಂಭ್ರಮ ಬೇಡ, ಪೊಲೀಸರು ಎತ್ಕೊಂಡು ಹೋದಾರು!

Bengaluru Police Advisory IPL Finals 2026: ಐಪಿಎಲ್ 2026ರ ಫೈನಲ್‌ಗೆ ಆರ್‌ಸಿಬಿ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ, ಭಾನುವಾರದ ಪಂದ್ಯದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟದ ಸಂಭ್ರಮಾಚರಣೆ, ಬೈಕ್ ಸ್ಟಂಟ್‌ಗಳು ಹಾಗೂ ಗಲಾಟೆ ಮಾಡದಂತೆ ಬೆಂಗಳೂರು ನಗರ ಪೊಲೀಸರು ಅಭಿಮಾನಿಗಳಿಗೆ ಕಟ್ಟುನಿಟ್ಟಿನ ಹೈ-ಅಲರ್ಟ್ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಆರ್​ಸಿಬಿ ಅಭಿಮಾನಿಗಳೇ ಎಚ್ಚರ: ಕಪ್ ಗೆದ್ರೆ ಬೀದಿಗಿಳಿದು ಸಂಭ್ರಮ ಬೇಡ, ಪೊಲೀಸರು ಎತ್ಕೊಂಡು ಹೋದಾರು!
ಆರ್​ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ (ಸಂಗ್ರಹ ಚಿತ್ರ)
Image Credit source: tv9

Updated on: May 30, 2026 | 10:10 AM

ಬೆಂಗಳೂರು, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿಯಾಗಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ಅಂತಿಮ ಹಣಾಹಣಿ ನಡೆಯಲಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಕೆಟ್ ಜ್ವರ ಗಗನಕ್ಕೇರಿದೆ. ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದ ನಂತರ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಅತ್ಯಂತ ಕಠಿಣ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ಸಂಭ್ರಮಾಚರಣೆ ಮಾಡುವುದು, ರಸ್ತೆ ತಡೆದು ಬೈಕ್ ರ‍್ಯಾಲಿ ಅಥವಾ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಮುಖ್ಯಾಂಶಗಳು

  • ಐಪಿಎಲ್ ಫೈನಲ್ ಮುಕ್ತಾಯದ ನಂತರ ಸಾರ್ವಜನಿಕ ರಸ್ತೆಗಳು ಹಾಗೂ ಓಣಿಗಳಲ್ಲಿ ಯಾವುದೇ ರೀತಿಯ ಅತಿರೇಕದ ಆಚರಣೆ ಅಥವಾ ಪಟಾಕಿ ಸಿಡಿಸುವಿಕೆಗೆ ನಿಷೇಧ.
  • ಅನುಮತಿ ಇಲ್ಲದೆ ಪಬ್, ಮಾಲ್ ಅಥವಾ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ದೊಡ್ಡ ಎಲ್‌ಇಡಿ (LED) ಸ್ಕ್ರೀನ್ ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ.
  • ವ್ಹೀಲಿಂಗ್, ರೇಸಿಂಗ್, ಕರ್ಕಶ ಹಾರ್ನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇತರ ತಂಡಗಳ ಅಭಿಮಾನಿಗಳನ್ನು ಪ್ರಚೋದಿಸುವ ಪೋಸ್ಟ್‌ಗಳನ್ನು ಹಾಕಿದರೆ ಕಠಿಣ ಕೇಸ್.

ಸಂಭ್ರಮದ ಹೆಸರಲ್ಲಿ ಹುಚ್ಚಾಟಕ್ಕಿಳಿದರೆ ಬೀಳುತ್ತೆ ಲಾಠಿ ಏಟು!

ನಗರ ಪೊಲೀಸರು ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿ ಜನದಟ್ಟಣೆ ನಿರ್ವಹಿಸಲು ಮತ್ತು ಶಾಂತಿ ಕಾಪಾಡಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ಸಂಚಾರ ಪೊಲೀಸರ (Traffic Police) ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ಸ್ಟಂಟ್‌ಗಳು, ಅತಿ ವೇಗದ ಚಾಲನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಮಾಡಿ ಗಲಾಟೆ ಮಾಡುವುದು ಅಥವಾ ಇತರರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ತಂಡಗಳ ಅಭಿಮಾನಿಗಳನ್ನು ಅವಮಾನಿಸುವ ಅಥವಾ ಜಗಳಕ್ಕೆ ಪ್ರಚೋದನೆ ನೀಡುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಳೆದ ವರ್ಷದ ಕಹಿ ಘಟನೆ ಮರೆಯಬೇಡಿ

ಆರ್‌ಸಿಬಿ ಅಭಿಮಾನಿಗಳಿಗೆ ಪೊಲೀಸರು ಈ ಮಟ್ಟದ ಖಡಕ್ ಎಚ್ಚರಿಕೆ ನೀಡಲು ಕಳೆದ ವರ್ಷ ನಡೆದ ಕಹಿ ಘಟನೆಯೇ ಪ್ರಮುಖ ಕಾರಣವಾಗಿದೆ. ಕಳೆದ ಸೀಸನ್‌ನಲ್ಲಿ ಐಪಿಎಲ್ ಪಂದ್ಯದ ಗೆಲುವಿನ ಬಳಿಕ ತಂಡವು ಬೆಂಗಳೂರಿಗೆ ಆಗಮಿಸಿದಾಗ (2025 ಜೂನ್ 4 ರಂದು) ನಗರದ ಚಿನ್ನಸ್ವಾಮಿ ಸ್ಟೇಡಿಯಂ, ಎಂಜಿ ರಸ್ತೆ, ವಿಧಾನಸೌಧ ಮುಂಭಾಗದ ರಸ್ತೆಗಳಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ನಂತರ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಘಟನೆಯು ಇಡೀ ಐಪಿಎಲ್ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಕರ್ನಾಟಕ ಸರ್ಕಾರಕ್ಕೂ ಸಂಕಷ್ಟದ ಸನ್ನಿವೇಶ ತಂದೊಡ್ಡಿತ್ತು.

ಇದನ್ನೂ ಓದಿ: ಐಪಿಎಲ್ ಫೈನಲ್ ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

ಈ ಬಾರಿ ಅಂತಹ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಈ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Sat, 30 May 26

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us