ಬೆಂಗಳೂರು, ಆಗಸ್ಟ್ 04: ನಮ್ಮ ಮೆಟ್ರೋದ (Namma Metro) ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿನ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ 35 ವರ್ಷದ ನವೀನ್ ಅರೋರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುವುದು ತಿಳಿದುಬಂದಿದೆ. ಮೃತ ನವೀನ್ ಅರೋರ ಮೂಲತಃ ಉತ್ತರ ಪ್ರದೇಶದವರು. ನವೀನ್ ಅರೋರಗೆ 26 ವರ್ಷದ ಪುತ್ರ 22 ವರ್ಷದ ಪುತ್ರಿ ಹಾಗೂ ಪತ್ನಿ ಇದ್ದಾರೆ. ಪುತ್ರ ಸ್ವಂತ ಬಟ್ಟೆ ಅಂಗಡಿ ಹೊಂದಿದ್ದಾನೆ. ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾಳೆ. ಕುಟುಂಬಸ್ಥರು ಬಿಳೆಕಹಳ್ಳಿ ದಿವ್ಯಾ ಪಂಚಮಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಾರೆ.
ಮೃತ ನವೀನ್ ಅರೋರ ಕಳೆದ 10 ವರ್ಷದ ಹಿಂದೆ ಕೆಆರ್ ಮಾರ್ಕೆರ್ಟ್ನಲ್ಲಿ ಹಾರ್ಡ್ವೇರ್ ಅಂಗಡಿ ನಡೆಸುತ್ತಿದ್ದರು. ವ್ಯಾಪಾರ ವಹಿವಾಟು ಕೂಡ ಚನ್ನಾಗಿಯೇ ನಡಿತಿತ್ತು. ಬಳಿಕ ವ್ಯಾಪಾರ ನೆಲಕಚ್ಚಿ ನಷ್ಟ ಅನುಭವಿಸಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ಜಗಳವಾಗಿ ಮೃತ ನವೀನ್ ಅರೋರ ಬೇರಾಯಾಗಿದ್ದರು. ಮೃತ ನವೀನ್ ಅರೋರ ಕಳೆದ ಏಳು ವರ್ಷದಿಂದ ಕುಟುಂಬಸ್ಥರಿಂದ ದೂರವಿದ್ದು, ಜೆಪಿ ನಗರದ ಹೋಟೆಲ್ವೊಂದರಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು. ಜೊತೆಗೆ ಕೆಆರ್ ಮಾರ್ಕೆಟ್ನಲ್ಲಿರುವ ಲಾಡ್ಜ್ವೊಂದರಲ್ಲಿ ರೂಮ್ ಮಾಡಿಕೊಂಡು ತಂಗಿದ್ದರು.
ಇದನ್ನೂ ಓದಿ: ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಒಂದೇ ದಿನ 8 ಲಕ್ಷ ಜನ ಸಂಚಾರ! ದಾಖಲೆ
ಮೃತ ನವೀನ್ ಅರೋರ ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕರೆ ಮಾಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಇದೇ ಹಣದಲ್ಲಿ ರೂಮ್ ಬಾಡಿಗೆ, ಊಟ ತಿಂಡಿ ಅಂತ ಕಾಲ ಕಳೆಯುತ್ತಿದ್ದರು. ಇನ್ನು ಉತ್ತರ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಜನರ ಬಳಿ ಸಾಲ ಮಾಡಿದ್ದರು. ಮೃತ ನವೀನ್ ಅರೋರ ತಮ್ಮ ಅಣ್ಣನಿಗೆ ಆಗಾಗ ಕರೆ ಮಾಡಿ ಹಣ ಕೇಳುತ್ತಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆಯೂ ತನ್ನ ಅಣ್ಣನಿಗೆ ಕರೆ ಮಾಡಿ ಹಣ ಕೇಳಿದ್ದರು. ಮೈತುಂಬ ಸಾಲ ಮಾಡಿಕೊಂಡಿದ್ದ ನವೀನ್ ಅರೋರದಿಂದ ಕುಟುಂಬಸ್ಥರು ಕೂಡ ದೂರವಾಗಿದ್ದರು. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾದ ನವೀನ್ ಅರೋರ ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ