ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ, ಹಲವೆಡೆ ನಾನಾ ಸಮಸ್ಯೆ, ವಾಹನ ಸವಾರರ ಪರದಾಟ

| Updated By: ಆಯೇಷಾ ಬಾನು

Updated on: Aug 06, 2024 | 7:11 AM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ವಿದ್ಯಾಪೀಠ ವ್ಯಾಪ್ತಿಯಲ್ಲಿ 96 ಮಿ.ಮೀ. ಮಳೆ ದಾಖಲಾಗಿದೆ. ಈ ಮೂಲಕ ಇಡೀ ಬೆಂಗಳೂರಿನಲ್ಲಿ ವಿದ್ಯಾಪೀಠ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಇನ್ನು ಮಳೆಯ ಅಬ್ಬರಕ್ಕೆ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ.

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ, ಹಲವೆಡೆ ನಾನಾ ಸಮಸ್ಯೆ, ವಾಹನ ಸವಾರರ ಪರದಾಟ
ಬೆಂಗಳೂರು ಮಳೆ
Follow us on

ಬೆಂಗಳೂರು, ಆಗಸ್ಟ್.06: ಆಗಾಗ ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣದಿಂದ ಕೂಲ್ ಆಗಿದ್ದ ಬೆಂಗಳೂರು ನಿನ್ನೆ ಮಳೆರಾಯನ ಆರ್ಭಟಕ್ಕೆ ತತ್ತರಿಸಿದೆ (Bengaluru Rains). ನಿನ್ನೆ ಮಧ್ಯಾಹ್ನದಿಂದ ಶುರುವಾಗಿ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಸಂಜೆಯಾಗುತ್ತಿದ್ದಂತೆ ಜೋರಾಗಿದೆ. ಇದರಿಂದ ಭಾರೀ ಸಮಸ್ಯೆಗಳು ಎದುರಾಗಿದ್ದು ನಿನ್ನೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟು ಮಳೆ?

  • ಬೆಂಗಳೂರಿನ ವಿದ್ಯಾಪೀಠ ವ್ಯಾಪ್ತಿಯಲ್ಲಿ 96 ಮಿ.ಮೀ. ಮಳೆ ದಾಖಲು
  • ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 62,
  • ನಾಯಂಡಹಳ್ಳಿ 61.5 ಮಿ.ಮೀ.
  • ಪುಲಕೇಶಿನಗರ 59.5,
  • ವಿ.ನಾಗೇನಹಳ್ಳಿ ವ್ಯಾಪ್ತಿಯಲ್ಲಿ 58.5 ಮಿ.ಮೀ.
  • ಕೆಂಗೇರಿ ವ್ಯಾಪ್ತಿಯಲ್ಲಿ 54.5 ಮಿ.ಮೀ.,
  • ಕೋರಮಂಗಲ 45.5 ಮಿ.ಮೀ.
  • ಜ್ಞಾನಭಾರತಿ ವಿವಿ 41.5 ಮಿ.ಮೀ.,
  • ವಿವಿಪುರಂ 39.5 ಮಿ.ಮೀ. ಮಳೆ
  • ಕೊಡಗೇಹಳ್ಳಿ 39 ಮಿ.ಮೀ.,
  • ಪೀಣ್ಯ ವ್ಯಾಪ್ತಿಯಲ್ಲಿ 38.5 ಮಿ.ಮೀ. ಮಳೆ
  • ಬೆಳ್ಳಂದೂರು ವ್ಯಾಪ್ತಿಯಲ್ಲಿ 38 ಮಿ.ಮೀ.,
  • ಹಂಪಿ ನಗರ 37.5 ಮಿ.ಮೀ.
  • HSR ಲೇಔಟ್ 37 ಮಿ.ಮೀ.
  • ಮಾರತಹಳ್ಳಿ 37 ಮಿ.ಮೀ.
  • ಯಲಹಂಕ 33 ಮಿ.ಮೀ. ಮಳೆಯಾಗಿದೆ.ಈ ಮೂಲಕ ನಿನ್ನೆ ರಾತ್ರಿ ವಿದ್ಯಾಪೀಠ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಸುರಿದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎರಡನೇ ಸುತ್ತಿನ ಮಳೆಗೆ ರಸ್ತೆಗಳು ಜಲಾವೃತ: ಇನ್ನೂ 4 ದಿನ ಇರಲಿದೆ ವರುಣಾರ್ಭಟ

ರಾತ್ರಿ ಮಳೆ ಆರ್ಭಟಕ್ಕೆ ಬೆಂಗಳೂರು ತತ್ತರ

ಭಾರಿ ವರ್ಷಧಾರೆಯಿಂದಾಗಿ ಕೋರಮಂಗಲ ಪಾಸ್‌ಪೋರ್ಟ್ ಆಫೀಸ್ ಹಿಂಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದ ಕಾರಣ ರಸ್ತೆ ಕೆರೆಯಾಗಿ ಬದಲಾಗಿತ್ತು. ವಾಹನ ಸವಾರರು ನಿಂತ ನೀರಿನಲ್ಲಿ ಚಲಿಸಲಾಗದೆ ಪರದಾಡುವಂತಾಯ್ತು. ಕೆಲ ವಾಹನಗಳು ನೀರಿನಲ್ಲೇ ಕೆಟ್ಟು ನಿಂತಿದ್ದವು.

ರಸ್ತೆ ಯಾವುದೋ, ಗುಂಡಿ ಯಾವುದೋ? ಕಾಣದ ಸ್ಥಿತಿ

ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲೂ ವರುಣಾರ್ಭಟ ಸಾಲು ಸಾಲು ಅವಾಂತರಗಳಿಗೆ ಕಾರಣವಾಯ್ತು. ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಪರಿಣಾಮ ಮೊಣಕಾಲುದ್ದ ನೀರು ತುಂಬಿಕೊಂಡಿತ್ತು. ಗುಂಡಿ ಯಾವುದೋ, ರಸ್ತೆ ಯಾವುದೋ ಒಂದು ತಿಳಿಯದಾಗಿತ್ತು.

ಕೆರೆಯಂತೆ ಬದಲಾಗಿದ್ದ ಏರ್‌ಪೋರ್ಟ್ ರಸ್ತೆ

ಬೆಂಗಳೂರು ಉತ್ತರ ಭಾಗದ ಏರ್‌ಪೋರ್ಟ್‌ ರಸ್ತೆ ಭಾರಿ ಮಳೆಯಿಂದಾಗಿ ನದಿಯಂತೆ ಪರಿವರ್ತನೆಯಾಗಿತ್ತು. ಮೊಣಕಾಲುದ್ದ ನೀರಿನಿಂದಾಗಿ ವಾಹನ ಸವಾರರು ಹೈರಾಣಾದ್ರು. ಟ್ರಾಫಿಕ್ ಜಾಮ್‌ನಿಂದಾಗಿ ಪರದಾಡುವಂತಾಯ್ತು. ಇದೇನಾ ಬ್ರ್ಯಾಂಡ್ ಬೆಂಗಳೂರು ಅಂತಾ ಜನ ಹಿಡಿ ಶಾಪ ಹಾಕಿದ್ರು.

ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಕೊಂಬೆ

ನಿನ್ನೆ ರಾತ್ರಿ ಬನಶಂಕರಿ 1ನೇ ಹಂತದಲ್ಲಿ ಮರದ ಬೃಹತ್ ಕೊಂಬೆಯನ್ನು ರಸ್ತೆ ಅಡ್ಡಲಾಗಿ ಬಿದ್ದಿತ್ತು. ಕೊಂಬೆ ಬಿದ್ದ ವೇಳೆ ರಸ್ತೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಅಪಾಯ ತಪ್ಪಿದೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಬಿಬಿಎಂಪಿ ಸಿಬ್ಬಂದಿ ಕೊಂಬೆಯನ್ನು ಕತ್ತರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ