ಬೋಗಸ್ ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ನೆರವು: ಕೆಆರ್​ ಪುರದ ಸರ್ಕಾರಿ ಅಧಿಕಾರಿ ವಿರುದ್ಧ ಮತ್ತೊಂದು ಎಫ್​ಐಆರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 09, 2022 | 8:19 AM

ಕೆಆರ್​ ಪುರದ ತಹಶೀಲ್ದಾರ್ ಅಜಿತ್ ರೈ ನೀಡಿದ್ದ ದೂರು ಆಧರಿಸಿ ಕೆಆರ್​ ಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಬೋಗಸ್ ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ನೆರವು: ಕೆಆರ್​ ಪುರದ ಸರ್ಕಾರಿ ಅಧಿಕಾರಿ ವಿರುದ್ಧ ಮತ್ತೊಂದು ಎಫ್​ಐಆರ್
ಕೆಆರ್​ ಪುರಂ ಪೊಲೀಸ್ ಠಾಣೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರಿಗೆ ನೆರವಾಗಿದ್ದ ಆರೋಪದ ಮೇಲೆ ಕಂದಾಯ ಇಲಾಖೆಯ ಎಸ್​ಡಿಎ ಇರ್ಫಾನ್ ಉಲ್ಲಾಖಾನ್ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಕೆಆರ್​ ಪುರದ ತಹಶೀಲ್ದಾರ್ ಅಜಿತ್ ರೈ ನೀಡಿದ್ದ ದೂರು ಆಧರಿಸಿ ಕೆಆರ್​ ಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಸಿಆರ್​ಪಿಸಿ ಸೆಕ್ಷನ್ 420, 465, 468, 471, 409 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಮಳ್ಳೂರು ಗ್ರಾಮದ ಜಮೀನಿಗೆ ಬೋಗಸ್ ದಾಖಲೆ ಸೃಷ್ಟಿಸಿದ ಆರೋಪವನ್ನು ಇರ್ಫಾನ್​ ಉಲ್ಲಾಖಾನ್ ಎದುರಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ.ಶೇಖರ್ ಮತ್ತು ಪ್ರತಾಪ್ ಅವರು ನಡೆಸಿದ ಅಕ್ರಮದಲ್ಲಿ ಇರ್ಫಾನ್ ಸಹ ಭಾಗಿಯಾಗಿದ್ದಾರೆ. ನಕಲಿ ದಾಖಲೆಗಳಿಗೆ ಸಹಿ ಹಾಕಿರುವುದಾಗಿ ಇರ್ಫಾನ್ ಉಲ್ಲಾಖಾನ್ ಹೇಳಿಕೆ ನೀಡಿದ್ದಾರೆ. ಇತರ ಆರೋಪಿಗಳಾದ ಪ್ರತಾಪ್ ಮತ್ತು ಎಂ.ಪಿ.ಶೇಖರ್ ಜತೆ ಕೃತ್ಯದಲ್ಲಿ ಶಾಮೀಲಾಗಿರುವುದಾಗಿ ಇರ್ಫಾನ್ ಒಪ್ಪಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಬೆಂಗಳೂರು ಪೂರ್ವ ತಹಶೀಲ್ದಾರ್ ನಡೆಸಿದ್ದ ಆಂತರಿಕ ತನಿಖೆಯಲ್ಲಿ ಲೋಪಗಳು ಪತ್ತೆಯಾಗಿತ್ತು. ಇರ್ಫಾನ್ ಉಲ್ಲಾ ಖಾನ್ ಅವರು ಕೆ.ಆರ್.ಪುರಂ ಕಂದಾಯ ಇಲಾಖೆ ದಾಖಲೆಗಳ ವಿಭಾಗದ ಎಸ್​ಡಿಎ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯ ವಿರುದ್ಧ ಈಗಾಗಲೇ ಎರಡು ಎಫ್​ಐಆರ್​ಗಳು ದಾಖಲಾಗಿದ್ದು, ಪ್ರಸ್ತುತ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಇರ್ಫಾನ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಂಟ್ರಿ ಪಿಸ್ತೂಲ್ ಹೊಂದಿದ್ದ ನಾಲ್ವರ ಬಂಧನ

ವಿಜಯಪುರ: ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ಮಾಫಿಯಾ ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕಂಟ್ರಿ ಪಿಸ್ತೂಲ್ ಹೊಂದಿದ್ದ ನಾಲ್ವರು ಆರೋಪಿಗಳನ್ನು ವಿಜಯಪುರ ‌ತಾಲೂಕಿನ ಕುಮಟಗಿ ತಾಂಡಾದಲ್ಲಿ ವಿಜಯಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಒಂದು ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು, ಆರೋಪಿಗಳ ಬಳಿಯಿದ್ದ ಸ್ಕಾರ್ಪಿಯೊ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್ ಕಳ್ಳರ ಬಂಧನ

ವಿಜಯಪುರ: ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ್ ರಜಪೂತ ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿ 6 ಬೈಕ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Published On - 8:19 am, Sun, 9 October 22