ಬಿಎಂಟಿಸಿಯ ಬಹುತೇಕ ಸಿಬ್ಬಂದಿಗೆ ಹೃದಯ ಸಮಸ್ಯೆ: ಗಾಬರಿ ಮೂಡಿಸಿದ ಜಯದೇವ ಹೃದ್ರೋಗ ಸಂಸ್ಥೆಯ ವರದಿ
ಬಿಎಂಟಿಸಿ ಸಿಬ್ಬಂದಿಯಲ್ಲಿ ಹೃದಯ ಸಂಬಂಧಿ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿರುವುದು ಪತ್ತೆಯಾಗಿದೆ. ಜಯದೇವ ಹೃದ್ರೋಗ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಬೆಂಗಳೂರು: ಬೆಂಗಳೂರಿನ ಸಂಚಾರಿ ಜೀವನಾಡಿ ಬಿಎಂಟಿಸಿ(BMTC) ಪ್ರತಿ ದಿನ ಲಕ್ಷಾಂತರ ಮಂದಿಗೆ ಸೇವೆ ಸಲ್ಲಿಸುತ್ತಿದೆ. ಆದ್ರೆ ಹಗಲು-ರಾತ್ರಿ, ಹಬ್ಬ-ಹರಿದಿನ ಎನ್ನದೇ ಸದಾ ಸೇವೆಯಲ್ಲಿ ನಿರತರಾಗುವ ಬಿಎಂಟಿಸಿ ಸಿಬ್ಬಂದಿ ಆರೋಗ್ಯದಲ್ಲಿ ಭಾರೀ ವ್ಯತ್ಸಾಸಗಳು ಕಂಡು ಬಂದಿವೆ. ಜಯದೇವ ಹೃದ್ರೋಗ ಸಂಸ್ಥೆ(Sri Jayadeva Institute of Cardiovascular Sciences and Research) ವರದಿಯೊಂದನ್ನು ಬಿಡುಗಡೆ ಮಾಡಿದ್ದು ಬಿಎಂಟಿಸಿ ಆಡಳಿತ ವರ್ಗ ತಲೆ ಕೆಡಿಸಿಕೊಂಡಿದೆ. ಆರೋಗ್ಯ ತಪಾಸಣೆ ಮಾಡಿಸಿದ್ದ ಶೇ.50%ರಷ್ಟು ಬಿಎಂಟಿಸಿ ಸಿಬ್ಬಂದಿಯಲ್ಲಿ ಹೃದಯ ಸಂಬಂಧಿ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿರುವುದು ಪತ್ತೆಯಾಗಿದೆ.
ಒತ್ತಡದ ಬದುಕಿನಲ್ಲಿ ದುಡಿಯುತ್ತಿರುವ ಸಾರಿಗೆ ಸಿಬ್ಬಂದಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆ. ಜಯದೇವ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ ಶೇ.50ರಷ್ಟು ಸಿಬ್ಬಂದಿಗೆ ಹೃದಯ ಸಂಬಂಧಿ ಸೇರಿದಂತೆ ನಾನಾ ತೊಂದರೆಗಳು ಇರುವುದು ಪತ್ತೆಯಾಗಿದೆ. ಅದರಲ್ಲೂ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಸಿಬ್ಬಂದಿ ನರಳುತ್ತಿರುವುದು ವರದಿಯಾಗಿದೆ. ಈ ವರದಿಗೆ ಬಿಎಂಟಿಸಿ ಆಡಳಿತ ವರ್ಗ ಕಂಗಾಲಾಗಿದೆ. ಇದನ್ನೂ ಓದಿ: ಈ 5 ವಿಷಯಗಳು ಹೃದಯಾಘಾತ ಹಾಗೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು
ಬಿಎಂಟಿಸಿ ಸಿಬ್ಬಂದಿಗೆ ಕಾಡುತ್ತಿರುವ ತೊಂದರೆಗಳು ಯಾವುವು?
ಬಿಎಂಟಿಸಿ ಚಾಲಕರು, ನಿರ್ವಾಹಕರು ನಾನಾ ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿದ್ದಾರೆ. ಹೈ ಬಿಪಿ, ಹೈ ಕೊಲೆಸ್ಟ್ರಾಲ್, ಹೈಪರ್‌ಟೆನ್ಶನ್ ಪ್ರಕರಣಗಳು ಹೆಚ್ಚಾಗಿ ಬಿಎಂಟಿಸಿ ಸಿಬ್ಬಂದಿಯನ್ನು ಕಾಡುತ್ತಿವೆ. ಕೆಲವರಿಗಂತೂ ತಮಗೆ ಹೃದಯದಲ್ಲಿ ಸಮಸ್ಯೆ ಇರುವ ಬಗ್ಗೆ ತಿಳಿದೇ ಇಲ್ಲ. ಜಯದೇವ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ ಬಳಿಕವೇ ಸಮಸ್ಯೆ ಗೊತ್ತಾಗಿದೆ. ಸದ್ಯ ಜಯದೇವ ಆಸ್ಪತ್ರೆ ಅಪಘಾತಕಾರಿ ಮಾಹಿತಿ ಬಯಲು ಮಾಡಿದೆ.
ಸುಮಾರು 800ರಿಂದ 1000 ಸಿಬ್ಬಂದಿ ಜಯದೇವ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ್ದಾರೆ. ಇವರ ಪೈಕಿ ಶೇ.50%ರಷ್ಟು ಜನರಿಗೆ ಹೃದಯ ಸಂಬಂಧಿ ಖಾಯಿಲೆ ಕಾಡ್ತಿರುವುದು ಪತ್ತೆಯಾಗಿದೆ. ಕೆಲಸದ ಒತ್ತಡ, ಕೂತಲ್ಲೇ ಕುಳಿತಿರುವುದರಿಂದ ಹೃದಯ ಸಂಬಂಧಿ ಖಾಯಿಲೆ ಬಂದಿರಬಹುದು ಎನ್ನಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ರಿಪೋರ್ಟ್ ಈಗ ಬಿಎಂಟಿಸಿ ಆಡಳಿತ ವರ್ಗದ ಟೆನ್ಷನ್ ಹೆಚ್ಚಿಸಿದೆ. ಇದನ್ನೂ ಓದಿ: Heart Attack: ಹೃದಯಾಘಾತವಾದಾಗ ಮೊದಲು ಮಾಡಬೇಕಾದ ಕೆಲಸವೇನು? ಇಲ್ಲಿವೆ ಲೈಫ್ ಸೇವಿಂಗ್ ಟಿಪ್ಸ್!
ಇನ್ನು ಈ ವರದಿ ಬಗ್ಗೆ ಮಾತನಾಡಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಡಾ ಸಿ.ಎನ್. ಮಂಜುನಾಥ್, ನಮ್ಮ ಬಿಎಂಟಿಸಿ ಸಿಬ್ಬಂದಿ ಯಾವುದೇ ರೀತಿ ವ್ಯಾಯಾಮ ಮಾಡುವುದಿಲ್ಲ. ಹೀಗಾಗಿ ಅವರಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ. 40 ವರ್ಷ ದಾಟಿದ ಪುರುಷರಿಗೆ ಮತ್ತು 45 ವರ್ಷ ದಾಟಿದ ಮಹಿಳೆಯರಿಗೆ ಪ್ರಾಥಮಿಕ ತಪಾಸಣೆ ಆಗಬೇಕು ಎಂದು ಸರ್ಕಾರಿ, ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ನಿಯಮ ಜಾರಿ ಮಾಡಬೇಕು. ಆಗ ಪ್ರತಿಯೊಬ್ಬ ಸಿಬ್ಬಂದಿಗೂ ತನ್ನ ಆರೋಗ್ಯದ ಬಗ್ಗೆ ತಿಳಿಯುತ್ತೆ. ಆಗ ಮಾತ್ರ ಅವರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುತ್ತಾರೆ. ಆಗಾಗ ಆರೋಗ್ಯ ತಪಾಸಣೆ ಮಾಡಿಸಿ ಎಚ್ಚರಿಕೆ ವಹಿಸಬೇಕು. ಸದ್ಯ ಈಗ ಬಿಎಂಟಿಸಿ ಆಡಳಿತ ಮಂಡಳಿ ತನ್ನೆಲ್ಲಾ ಸಿಬ್ಬಂದಿಗೂ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದೆ ಎಂದರು.
Published On - 1:00 pm, Sun, 9 October 22