ಬೋಗಸ್ ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ನೆರವು: ಕೆಆರ್ ಪುರದ ಸರ್ಕಾರಿ ಅಧಿಕಾರಿ ವಿರುದ್ಧ ಮತ್ತೊಂದು ಎಫ್ಐಆರ್
ಕೆಆರ್ ಪುರದ ತಹಶೀಲ್ದಾರ್ ಅಜಿತ್ ರೈ ನೀಡಿದ್ದ ದೂರು ಆಧರಿಸಿ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರಿಗೆ ನೆರವಾಗಿದ್ದ ಆರೋಪದ ಮೇಲೆ ಕಂದಾಯ ಇಲಾಖೆಯ ಎಸ್ಡಿಎ ಇರ್ಫಾನ್ ಉಲ್ಲಾಖಾನ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕೆಆರ್ ಪುರದ ತಹಶೀಲ್ದಾರ್ ಅಜಿತ್ ರೈ ನೀಡಿದ್ದ ದೂರು ಆಧರಿಸಿ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಸಿಆರ್ಪಿಸಿ ಸೆಕ್ಷನ್ 420, 465, 468, 471, 409 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಮಳ್ಳೂರು ಗ್ರಾಮದ ಜಮೀನಿಗೆ ಬೋಗಸ್ ದಾಖಲೆ ಸೃಷ್ಟಿಸಿದ ಆರೋಪವನ್ನು ಇರ್ಫಾನ್ ಉಲ್ಲಾಖಾನ್ ಎದುರಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ.ಶೇಖರ್ ಮತ್ತು ಪ್ರತಾಪ್ ಅವರು ನಡೆಸಿದ ಅಕ್ರಮದಲ್ಲಿ ಇರ್ಫಾನ್ ಸಹ ಭಾಗಿಯಾಗಿದ್ದಾರೆ. ನಕಲಿ ದಾಖಲೆಗಳಿಗೆ ಸಹಿ ಹಾಕಿರುವುದಾಗಿ ಇರ್ಫಾನ್ ಉಲ್ಲಾಖಾನ್ ಹೇಳಿಕೆ ನೀಡಿದ್ದಾರೆ. ಇತರ ಆರೋಪಿಗಳಾದ ಪ್ರತಾಪ್ ಮತ್ತು ಎಂ.ಪಿ.ಶೇಖರ್ ಜತೆ ಕೃತ್ಯದಲ್ಲಿ ಶಾಮೀಲಾಗಿರುವುದಾಗಿ ಇರ್ಫಾನ್ ಒಪ್ಪಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಬೆಂಗಳೂರು ಪೂರ್ವ ತಹಶೀಲ್ದಾರ್ ನಡೆಸಿದ್ದ ಆಂತರಿಕ ತನಿಖೆಯಲ್ಲಿ ಲೋಪಗಳು ಪತ್ತೆಯಾಗಿತ್ತು. ಇರ್ಫಾನ್ ಉಲ್ಲಾ ಖಾನ್ ಅವರು ಕೆ.ಆರ್.ಪುರಂ ಕಂದಾಯ ಇಲಾಖೆ ದಾಖಲೆಗಳ ವಿಭಾಗದ ಎಸ್ಡಿಎ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯ ವಿರುದ್ಧ ಈಗಾಗಲೇ ಎರಡು ಎಫ್ಐಆರ್ಗಳು ದಾಖಲಾಗಿದ್ದು, ಪ್ರಸ್ತುತ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಇರ್ಫಾನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಂಟ್ರಿ ಪಿಸ್ತೂಲ್ ಹೊಂದಿದ್ದ ನಾಲ್ವರ ಬಂಧನ
ವಿಜಯಪುರ: ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ಮಾಫಿಯಾ ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕಂಟ್ರಿ ಪಿಸ್ತೂಲ್ ಹೊಂದಿದ್ದ ನಾಲ್ವರು ಆರೋಪಿಗಳನ್ನು ವಿಜಯಪುರ ತಾಲೂಕಿನ ಕುಮಟಗಿ ತಾಂಡಾದಲ್ಲಿ ವಿಜಯಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಒಂದು ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು, ಆರೋಪಿಗಳ ಬಳಿಯಿದ್ದ ಸ್ಕಾರ್ಪಿಯೊ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೈಕ್ ಕಳ್ಳರ ಬಂಧನ
ವಿಜಯಪುರ: ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ್ ರಜಪೂತ ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿ 6 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Published On - 8:19 am, Sun, 9 October 22