‘ಸರ್ಕಾರವೇ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ನಿಂತಂತೆ ಕಾಣ್ತಿದೆ’: ಉರ್ದು ಹಬ್ಬ ಆಚರಣೆ ನಿರ್ಧಾರಕ್ಕೆ ನಾರಾಯಣಗೌಡ ಕಿಡಿ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರವೇ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ನಿಂತಂತೆ ಕಾಣ್ತಿದೆ ಎಂದು ದೂರಿರುವ ಅವರು, ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದಿದ್ದಾರೆ. ಈ ಬಗ್ಗೆ ಬಿಜೆಪಿಗರಿಂದಲೂ ವಿರೋಧ ವ್ಯಕ್ತವಾಗಿದ್ದು, ಮತ್ತೊಂದೆಡೆ ಕೆಲ ಸಚಿವರು ಮಾತ್ರ ಸರ್ಕಾರದ ನಡೆ ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರವೇ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ನಿಂತಂತೆ ಕಾಣ್ತಿದೆ: ಉರ್ದು ಹಬ್ಬ ಆಚರಣೆ ನಿರ್ಧಾರಕ್ಕೆ ನಾರಾಯಣಗೌಡ ಕಿಡಿ
ಕರವೇ ಅಧ್ಯಕ್ಷ ನಾರಾಯಣಗೌಡ
Image Credit source: Narayana Gowdru T.A. Facebook Page
Edited By:

Updated on: Oct 01, 2026 | 2:51 PM

ಬೆಂಗಳೂರು, ಅಕ್ಟೋಬರ್​​ 01: ವಿಧಾನಸೌಧದ ಗ್ರ್ಯಾಂಡ್​ಸ್ಟೆಪ್ಸ್ ಮೇಲೆ ಉರ್ದು ಹಬ್ಬ ಆಚರಣೆಗೆ ಕರವೇಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಕರವೇ ಅಧ್ಯಕ್ಷ ನಾರಾಯಣಗೌಡ ಪೋಸ್ಟ್ ಮಾಡಿದ್ದು, ಇದೊಂದು ಅವಿವೇಕತನ, ಅಪ್ರಬುದ್ಧ, ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತೆ ಎಂಬ ಅಧಿಕ ಪ್ರಸಂಗದ ನಿಲುವು. ಸರ್ಕಾರವೇ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ನಿಂತಂತೆ ಕಾಣ್ತಿದೆ. ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ನಾರಾಯಣಗೌಡ ಖಡಕ್​​ ಎಚ್ಚರಿಕೆ

ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ, ಅದನ್ನು ಮಾಡಲಿ. ಉರ್ದು ಹಬ್ಬದ ತಲೆಹರಟೆ ನಿರ್ಧಾರ ಎಲ್ಲಿಂದ ಬಂತು, ಕೇಳಿದ್ಯಾರು? ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು,ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಉರ್ದು ವಾರ್ತೆ ಬಗ್ಗೆ ನಡೆದ ಕೋಮುಗಲಭೆ ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಇದೇ ಅಲ್ಲವೇ? ಸಿಎಂ ಡಿಕೆಶಿ ಕೂಡಲೇ ಈ ಉರ್ದು ಹಬ್ಬದ ಹುಚ್ಚಾಟ ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವೇ ಈ ಸರ್ಕಾರಕ್ಕೆ ಚಳಿ ಬಿಡಿಸಬೇಕಾಗುತ್ತದೆ. ಕೋಮುಗಲಭೆಗೆ ಸಂಚು ರೂಪಿಸಿರುವವರನ್ನು ದೂರ ಇಡಬೇಕು. ಈ ದುಸ್ಸಾಹಸಕ್ಕೆ ಇಳಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಉರ್ದು ದಿನಾಚರಣೆಗೆ ಬಿಜೆಪಿ ವಿರೋಧ: ಕನ್ನಡ ಭಾಷೆಗೆ ಇಂತಹ ವೈಭವದ ವೇದಿಕೆ ಎಷ್ಟು ಬಾರಿ ಲಭಿಸಿದೆ ಎಂದ ಸುರೇಶ್ ಕುಮಾರ್

ಬಿಜೆಪಿಗರಿಂದಲೂ ವಿರೋಧ

ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳಿಗೆ ಬಂದಿದೆ. ಎಂದೂ ಇಲ್ಲದ ಈ ಪದ್ಧತಿಯನ್ನು ಯಾಕೆ ಮಾಡುತ್ತಿದ್ದೀರಿ? ಇದು ಓಲೈಕೆ ರಾಜಕಾರಣ ಅಲ್ಲವೇ? ವೋಟ್ ಬ್ಯಾಂಕ್​ಗಾಗಿ ಕರ್ನಾಟಕದ ಗೌರವ ಕಳೆಯುವ ಕೆಲಸ ಆಗ್ತಿದೆ. ಕಾಂಗ್ರೆಸ್ ಅಂದ್ರೆ ತಾಲಿಬಾನ್ ಸರ್ಕಾರ ಎಂದು ಜನ ಮಾತಾಡ್ತಿದ್ದಾರೆ. ನೀವು ಕೂಡ ಅದಕ್ಕೆ ಒತ್ತು ಕೊಡುವ ಕೆಲಸವನ್ನೇ ಮಾಡುತ್ತಿದ್ದೀರಿ ಎಂದು ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್​​ ಇಂತಹ ನಿರ್ಧಾರಕ್ಕೆ ಮುಂದಾಗಿದೆ. ಕನ್ನಡ ರಾರಾಜಿಸಬೇಕಾದ ಜಾಗದಲ್ಲಿ ಉರ್ದು ಹಬ್ಬ ಆಚರಣೆ ಮೂಲಕ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡ ಕಿಡಿ ಕಾರಿದ್ದಾರೆ.

ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಸಚಿವರು

ವಿಧಾನಸೌಧದ ಗ್ರ್ಯಾಂಡ್​ಸ್ಟೆಪ್ಸ್ ಮೇಲೆ ಉರ್ದು ಹಬ್ಬ ಆಚರಣೆಯನ್ನು ನೈಜ ಕನ್ನಡ ಪರ ಹೋರಾಟಗಾರರು ವಿರೋಧಿಸಲ್ಲ. ನನ್ನ ಮಾತೃ ಭಾಷೆ ಉರ್ದು, ಆದರೆ ನನ್ನ ಹೃದಯದ ಭಾಷೆ ಕನ್ನಡ. ನಾನೇನು ಕನ್ನಡದವನು ಅಲ್ವಾ ಎಂದು ಸಚಿವ ರಿಜ್ವಾನ್ ಅರ್ಷದ್​ ಪ್ರಶ್ನಿಸಿದ್ದಾರೆ. ತುಳುಗೆ ಸ್ಥಾನಮಾನ ನೀಡಿದ್ವಿ, ಅದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಕನ್ನಡಿಗರು ವಿಶಾಲ ಹೃದಯ ಹೊಂದಿರುವವರು. ಸಮಾಜವನ್ನು ಒಡೆಯಬೇಕು ಎನ್ನುವವರು ಇದನ್ನು ಮಾಡುತ್ತಿದ್ದಾರೆ ಎಂದವರು ದೂರಿದ್ದಾರೆ. ಉರ್ದು ಒಂದು ಭಾಷೆ ಅಲ್ವಾ ಮಾಡಲಿ ಬಿಡಿ ಎಂದು ಗೃ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಹೇಳಿದ್ದು, ಖಾದರ್ ಏನು ಪ್ರಸ್ತಾವನೆ ಕೊಟ್ಟಿದ್ದಾರೆ ಎಂದು ಮಾಹಿತಿ ಇಲ್ಲ. ಆದರೆ ಯಾವುದೇ ಹಬ್ಬ, ಯಾವುದೇ ಭಾಷೆ ಆಚರಣೆಯನ್ನು ಮಾಡಬಹುದು. ಈಗ ಆಂಧ್ರಪ್ರದೇಶದಲ್ಲಿ ಉರ್ದು ಅಧಿಕೃತವಾದ ದ್ವಿತೀಯ ಭಾಷೆ. ಆಂಧ್ರದಲ್ಲಿ ಮೋದಿಯವರ ಬಲಗೈ ಬಂಟರದ್ದೇ ಸರ್ಕಾರ ಇಲ್ವಾ? ಎಂದವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:46 pm, Thu, 1 October 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us