Bengaluru Tunnel Road: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ ಮಾಡಿರುವ ಟನಲ್ ರಸ್ತೆ ಪ್ಲಾನ್ ಇದೀಗ ಸಿಟಿಜನರ ಜೇಬಿಗೆ ಕತ್ತರಿ ಹಾಕೋ ಮುನ್ಸೂಚನೆ ಸಿಕ್ಕಿದೆ. ಕೋಟಿ ಕೋಟಿ ರೂಪಾಯಿ ವೆಚ್ಚದ ಟನಲ್ ರಸ್ತೆ ನಿರ್ಮಾಣದ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡುತ್ತೇವೆ ಎಂದು ಹೊರಟಿರೋ ಸರ್ಕಾರ, ಇತ್ತ ಟನಲ್ ರಸ್ತೆಯಲ್ಲಿ ಸಂಚರಿಸಿವ ವಾಹನ ಸವಾರರಿಗೆ ಟೋಲ್ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ.

Bengaluru Tunnel Road: ಬೆಂಗಳೂರಿನಲ್ಲಿ ಟನಲ್ ರಸ್ತೆ, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!
ಸಾಂದರ್ಭಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Jul 02, 2025 | 9:48 PM

ಬೆಂಗಳೂರು, (ಜುಲೈ 02): ಬೆಂಗಳೂರಿನ ಹೈಡೆನ್ಸಿಟಿ ರಸ್ತೆಗಳಲ್ಲಿ ಒಂದಾದ ಹೆಬ್ಬಾಳ ಟು ಸಿಲ್ಕ್ ಬೋರ್ಡ್ (Hebbal to Silk Board tunnel road) ರಸ್ತೆಯ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಸರ್ಕಾರ, ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದೀಗ ಟನಲ್ ರಸ್ತೆ (Bengaluru tunnel road ) ಕಾಮಗಾರಿ ಆರಂಭವಾಗುವುದಕ್ಕೂ ಮೊದಲೇ ಟೋಲ್ ಲೆಕ್ಕಾಚಾರದಲ್ಲಿ ಶುರುವಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಕಡೆಗೆ ಟನಲ್ ನಿರ್ಮಿಸಲು 3 ವರ್ಷ ಡೆಡ್ ಲೈನ್ ಲೆಕ್ಕಾಚಾರ ಹಾಕಿರೋ ಸರ್ಕಾರ, ಟನಲ್ ರಸ್ತೆಯಲ್ಲಿ ಸಂಚರಿಸಲು ಪ್ರತಿ ಕಿಲೋ ಮೀಟರ್ ಗೆ 19 ರೂಪಾಯಿ ಟೋಲ್ ವಸೂಲಿಗೆ ತಯಾರಿ ನಡೆಸಿದೆ. ಸದ್ಯ ಸರ್ಕಾರದ ಲೆಕ್ಕಾಚಾರದ ನೋಡಿದರೆ ಟನಲ್ ರಸ್ತೆಯಲ್ಲಿ ಒಂದು ಸಲ ಸಂಚರಿಸಲು ಬರೋಬ್ಬರಿ 317 ರೂಪಾಯಿ ಟೋಲ್ ಪಾವತಿಸುವ ಸ್ಥಿತಿ ನಿರ್ಮಾಣವಾಗಲಿದೆ.

ಅಂದಾಜು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಈ ಟನಲ್ ರಸ್ತೆಯಲ್ಲಿ 8 TBM ಮಷಿನ್ ಬಳಸಿ ಎರಡು ಪ್ಯಾಕೇಜ್ ಗಳಲ್ಲಿ ಕಾಮಗಾರಿ ನಡೆಸಲು ಬೆಂಗಳೂರು ಸ್ಮಾರ್ಟ್ ಇನ್ಫ್ರಾಕ್ಟ್ಚರ್ ಲಿಮಿಟೆಡ್ ಸಂಸ್ಥೆ ಮುಂದಾಗಿದ್ದು, ಈ ಟನಲ್ ರಸ್ತೆ ನಿರ್ಮಾಣದ ಬಳಿಕ ದುಪ್ಪಟ್ಟು ಟೋಲ್ ವಸೂಲಿಗೆ ಸಜ್ಜಾಗಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸದ್ಯ ಇರುವ ರಸ್ತೆಗಳನ್ನೇ ಸರಿಯಾಗಿ ನಿರ್ವಹಣೆ ಮಾಡಿ. ದುಬಾರಿ ವೆಚ್ಚದಲ್ಲಿ ಟನಲ್ ಮಾಡಿ ಅದರ ಹಣವನ್ನೂ ವಸೂಲಿ ಮಾಡಿದ್ರೆ ಹೇಗೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್ ರಸ್ತೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚೆಂದ ತಜ್ಞರು

6 ಪಥದ ಸುರಂಗಮಾರ್ಗವನ್ನ ಮೂರು ವರ್ಷದ ಡೆಡ್ ಲೈನ್ ಒಳಗೆ ಮುಗಿಸಲು ಪ್ಲಾನ್ ನಡೆದಿದ್ದು, ಎಲ್ಲ ಅಂದುಕೊಂಡಂತೆ ಆದ್ರೆ 2030ಕ್ಕೆ ಟನಲ್ ರಸ್ತೆ ನಿರ್ಮಾಣ ಮುಗಿಯಲಿದೆ. ಸದ್ಯ ಹೆಬ್ಬಾಳ ಕೆರೆಯ ಮುಂಭಾಗ ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ಲಾನ್ ಮಾಡಿದ್ದು, ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆ, ಮೇಖ್ರಿ ಸರ್ಕಲ್ ಬಳಿಯ ಅರಮನೆ ಮೈದಾನ, ಮಹಾರಾಣಿ ಕಾಲೇಜ್ ಹಾಗೂ ಲಾಲ್ ಭಾಗ್ ಬಳಿ ಕೂಡ ಆಗಮನ, ನಿರ್ಗಮನ ಮಾಡಲು ಪ್ಲಾನ್ ನಡೆದಿದೆ.

ಸದ್ಯ ಟನಲ್ ರಸ್ತೆ ಯೋಜನೆಯಿಂದ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗುತ್ತೆ ಎಂದು ಕಾದುಕುಳಿತಿದ್ದ ಸಿಟಿಜನರಿಗೆ ಇದೀಗ ದುಬಾರಿ ಟೋಲ್ ಹೊರೆಯ ಆತಂಕ ಶುರುವಾಗಿದ್ದು, ಟನಲ್ ರಸ್ತೆಯಿಂದ ಯಾವ ಬದಲಾವಣೆಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಶಾಂತಮೂರ್ತಿ,ಟಿವಿ9,ಬೆಂಗಳೂರು