ಆರ್ಎಸ್ಎಸ್ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಒಟ್ಟಾಗಿ ಇರಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದೇ ತಪ್ಪಾಯ್ತಾ? ಹಿಂದೂ ಮಹಾಸಭಾದವರು ಅದಕ್ಕೆ ಮಹಾತ್ಮ ಗಾಂಧೀಜಿಯವರನ್ನು ಕೊಂದರು. ಸಾವರ್ಕರ್ ವಿರುದ್ಧ ಮಹಾತ್ಮ ಗಾಂಧೀಜಿಯನ್ನು ಕೊಂದ ಆರೋಪವಿದೆ.
ಬೆಂಗಳೂರು: ಆರ್ಎಸ್ಎಸ್ (RSS) ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮಾಧವ ಸದಾಶಿವ ಗೋಲ್ವಾಲ್ಕರ್ ಬರೆದ ಚಿಂತನಾ ಗಂಗಾ ಪುಸ್ತಕ ಓದಿದರೆ ಗೊತ್ತಾಗುತ್ತೆ. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಸಂವಿಧಾನವನ್ನು ಗೌರವಿಸಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಬೆಂಗಳೂರಲ್ಲಿ ನಡೆದ ನಟರಾಜ್ ಹುಳಿಯಾರ್ ಬರೆದ ಪುಸ್ತಕ ಬಿಡುಗಡೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದೂ-ಮುಸ್ಲಿಂ ಒಟ್ಟಾಗಿ ಇರಬೇಕೆಂದು ಮಹಾತ್ಮ ಗಾಂಧೀಜಿ (Mahatma Gandhi) ಹೇಳಿದ್ದೇ ತಪ್ಪಾಯ್ತಾ? ಹಿಂದೂ ಮಹಾಸಭಾದವರು ಅದಕ್ಕೆ ಮಹಾತ್ಮ ಗಾಂಧೀಜಿಯವನ್ನು ಕೊಂದರು. ವೀರ್ ಸಾವರ್ಕರ್ (Veer Savarkar) ವಿರುದ್ಧ ಮಹಾತ್ಮ ಗಾಂಧೀಜಿಯನ್ನು ಕೊಂದ ಆರೋಪವಿದೆ. ಗಾಂಧಿಯನ್ನು ಕೊಂದ ಆರೋಪವಿರುವ ಸಾವರ್ಕರ್ ಫೋಟೋ ವಿಧಾನಸಭೆಯಲ್ಲಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ. ವಿವೇಕ ಇಲ್ಲದಿರುವ ಸರ್ಕಾರವಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿಯನ್ನೇ ವಿವಾದಾತ್ಮಕ ವ್ಯಕ್ತಿಯಾಗಿ ಮಾಡಿದ್ದಾರೆ. ಗಾಂಧೀಜಿ ಮನುಷ್ಯತ್ವಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಮನುಷ್ಯತ್ವದ ವಿರೋಧಿಗಳು ಒಳ್ಳೆಯ ಸಮಾಜ ನಿರ್ಮಾಣ ಮಾಡೋಕೆ ಸಾಧ್ಯವಿಲ್ಲ. ಎಲ್ಲರು ಗಾಂಧೀಜಿ ಪುಸ್ತಕ ಓದಬೇಕು ಎಂದು ಕೇಳಿಕೊಳ್ಳುತ್ತೇನೆ.
ಈ ಸರ್ಕಾರದ ಆಯಸ್ಸು ಇನ್ನು ಮೂರು ತಿಂಗಳು ಮಾತ್ರ
ಈ ಸರ್ಕಾರದ ಆಯಸ್ಸು ಇನ್ನು ಮೂರು ತಿಂಗಳು ಮಾತ್ರ. ನಂತರ ವಿವೇಕ ಇರುವಂತಹ ಸರ್ಕಾರ ಬರಲಿದೆ. ಮುಂದೆ ರಾಜ್ಯದಲ್ಲಿ ಬಳ್ಳೆಯ ಸರ್ಕಾರ ಬರಲಿದೆ. ಆಗ ಮಹಾತ್ಮ ಗಾಂಧೀಜಿಯವರ ಕೃತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮರುಳಸಿದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಕೆ ಮರುಳಸಿದ್ದಪ್ಪ, ಹಿರಿಯ ವಕೀಲ ರವಿವರ್ಮ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sun, 15 January 23