ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕೊನೆಗೂ ರಾಜೀನಾಮೆ

| Updated By: ಸಾಧು ಶ್ರೀನಾಥ್​

Updated on: Apr 15, 2022 | 9:08 PM

ಇದೀಗ ಈಶ್ವರಪ್ಪ ರಾಜೀನಾಮೆಯಿಂದ ಸಚಿವ ಸಂಪುಟದಲ್ಲಿ ಕುರುಬ ಸಚಿವರ ಬಲ ಎರಡಕ್ಕಿಳಿದಿದೆ. ಯಡಿಯೂರಪ್ಪ ಸಂಪುಟದಲ್ಲಿ ನಾಲ್ಕು ಜನ ಕುರುಬ ಸಚಿವರು ಇದ್ದರು. ಕೆ.ಎಸ್. ಈಶ್ವರಪ್ಪ, ಭೈರತಿ ಬಸವರಾಜ, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಸೇರಿ ನಾಲ್ವರು ಕುರುಬ ಸಚಿವರು ಬಿಎಸ್​ವೈ ಸಂಪುಟದಲ್ಲಿದ್ದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕೊನೆಗೂ ರಾಜೀನಾಮೆ
ಕೆ.ಎಸ್. ಈಶ್ವರಪ್ಪ
Follow us on

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಂತೋಷ್ ಪಾಟೀಲ್ ಆತ್ಮಹತ್ಯೆ (Suicide) ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಗದಗ ಪ್ರವಾಸದಿಂದ ಮುಖ್ಯಮಂತ್ರಿ ವಾಪಸಾಗುತ್ತಿದ್ದಂತೆ ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಎಂ ಬೊಮ್ಮಾಯಿಗೆ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ ಈಶ್ವರಪ್ಪ ಅವರು ‘ನನ್ನ ಸಚಿವ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ (KS Eshwarappa resignation).

ಈ ಮೊದಲು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದ ಅವರು ಗುರುವಾರ ಸಂಜೆ ಏಕಾಏಕಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತಮ್ಮ ಸ್ವಕ್ಷೇತ್ರ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸುವ ವೇಳೆ ಮಾರ್ಗ ಮಧ್ಯೆ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡರು. ಶಿವಮೊಗ್ಗದಿಂದ ಕಾರ್ ರ್ಯಾಲಿ ಮೂಲಕ ಆಗಮಿಸಿದ ಈಶ್ವರಪ್ಪ, ನೂರಾರು ಕಾರ್ಯಕರ್ತರ ಜೊತೆ ಬೆಂಗಳೂರಿಗೆ ಆಗಮಿಸಿದರು. ಮಾರ್ಗ ಮಧ್ಯೆ, ತಿಪಟೂರಿನಲ್ಲಿರುವ ಸಚಿವ ಬಿಸಿ ನಾಗೇಶ್ ಮನೆಗೆ ಈಶ್ವರಪ್ಪ ಭೇಟಿ ನೀಡಿದ್ದರು.

ಈಶ್ವರಪ್ಪ ಜೊತೆ ಮೇಯರ್‌ ಸುನೀತಾ ಅಣ್ಣಪ್ಪ ಅವರಿಗೆ ಮಾತ್ರ ಸಿಎಂ ಬೊಮ್ಮಾಯಿ ಮನೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ವೇಳೆ ಕುರುಬ ಸಮುದಾಯದ ಸಚಿವರಾದ ಭೈರತಿ ಬಸವರಾಜ ಮತ್ತು ಎಂಟಿಬಿ ನಾಗರಾಜ್ ಉಪಸ್ಥಿತರಿದ್ದರು. ಇದೀಗ ಈಶ್ವರಪ್ಪ ರಾಜೀನಾಮೆಯಿಂದ ಸಚಿವ ಸಂಪುಟದಲ್ಲಿ ಕುರುಬ ಸಚಿವರ ಬಲ ಎರಡಕ್ಕಿಳಿದಿದೆ. ಯಡಿಯೂರಪ್ಪ ಸಂಪುಟದಲ್ಲಿ ನಾಲ್ಕು ಜನ ಕುರುಬ ಸಚಿವರು ಇದ್ದರು. ಕೆ.ಎಸ್. ಈಶ್ವರಪ್ಪ, ಭೈರತಿ ಬಸವರಾಜ, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಸೇರಿ ನಾಲ್ವರು ಕುರುಬ ಸಚಿವರು ಬಿಎಸ್​ವೈ ಸಂಪುಟದಲ್ಲಿದ್ದರು.

ಏ. 20ರಂದು ಶಿವಮೊಗ್ಗದಲ್ಲಿ ಈಶ್ವರಪ್ಪ ಮೊಮ್ಮಗನ ವಿವಾಹ, ಆಮಂತ್ರಣ:
ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಸಂದರ್ಭದಲ್ಲಿ ನಿರ್ಗಮಿತ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಬೊಮ್ಮಾಯಿ ಸೇರಿ ಅಲ್ಲಿದ್ದ ಸಚಿವರಿಗೆಲ್ಲ ತಮ್ಮ ಮೊಮ್ಮಗನ ವಿವಾಹದ ಆಮಂತ್ರಣ ಪತ್ರ ನೀಡಿದರು. ಏಪ್ರಿಲ್ 20ರಂದು ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಮೊಮ್ಮಗ ಪೃಥ್ವಿ ವಿವಾಹ ಸಮಾರಂಭ ನಡೆಯಲಿದೆ.

ಈ ಪ್ರಕರಣದಲ್ಲಿ ಷಡ್ಯಂತ್ರ ಆಗಿದೆ. ಸಂತೋಷ ಆತ್ಮಹತ್ಯೆಯೋ, ಕೊಲೆಯೋ ಅನ್ನೊ ಬಗ್ಗೆ ಅನುಮಾನವಿದೆ. ಆರೋಪಿ ಯಾರು ಅನ್ನೋದು ಪತ್ತೆ ಆಗಬೇಕು. ತನಿಖಾ ದೃಷ್ಟಿಯಿಂದ ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ಕಡೂರಿನಲ್ಲಿ ಈಶ್ವರಪ್ಪ ಟಿವಿ9ಗೆ ಹೇಳಿದ್ದರು. ಒಂದೂವರೆ ತಿಂಗಳಲ್ಲಿ ನಾನು ಕೇಸ್​ನಿಂದ ಖುಲಾಸೆ ಆಗುತ್ತೇನೆ. ಮತ್ತೆ ಮಂತ್ರಿ ಆಗಿ ಬರ್ತಿನಿ, ಗ್ರಾಮೀಣಾಭಿವೃದ್ದಿ ನನಗೆ ಅಚ್ಚಮೆಚ್ಚಿನ ಇಲಾಖೆ ಎಂದರು.

ಹೆಚ್​ ಡಿ ಕುಮಾರಸ್ವಾಮಿ , ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಇದರಲ್ಲಿ ಇವರು ರಾಜಕೀಯ ಮಾಡಿದ್ದಾರೆ. ತನಿಖೆಯಿಂದ ಎಲ್ಲವೂ ಬಯಲಾಗಲಿದೆ. ವರ್ಕ್​ ಆರ್ಡರ್​ ಇಲ್ಲದೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿವೆ. ವರ್ಕ್​ ಆರ್ಡರ್ ಇಲ್ಲದೆ ಎಷ್ಟೋ ಕಾಮಗಾರಿಗಳು ನಡೆದಿವೆ. ಇದಕ್ಕೆ ಅವರು ಮೊದಲು ಉತ್ತರ ನೀಡಲಿ. ಹಿಂದುಳಿದ ನಾಯಕರನ್ನು ತುಳಿಯುತ್ತಿದ್ದಾರಾ ಎಂಬ ಪ್ರಶ್ನೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಆ ಟೈಮಲ್ಲಿ ಸಂಗೋಳ್ಳಿ ರಾಯಣ್ಣ ಎಕಾಂಗಿ ಇದ್ದ. ಈಗ ನನ್ನ ಜೊತೆ ರಾಜ್ಯದ ಜನರಿದ್ದಾರೆ, ನಾಯಕರಿದ್ದಾರೆ. ನಾನು ನನ್ನ ಹೋರಾಟ ಮುಂದುವರೆಸುತ್ತೇನೆ. ಪಕ್ಷ ಯಾವುದೆ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಚೌಡೇಶ್ವರಿ ತಾಯಿ ಮೇಲೆ ಆಣೆ ಮಾಡ್ತಿನಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಈಶ್ವರಪ್ಪ ಹೇಳಿದರು.

ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರೇ ಕಾರಣ ಎಂದು ಗುತ್ತಿಗೆದಾರ ಸಂತೋಷ್​ ಮಾಧ್ಯಮಗಳಿಗೆ ಆತ್ಮಹತ್ಯೆ ಸಂದೇಶವನ್ನು ಕಳುಹಿಸಿ, ಉಡುಪಿಯಲ್ಲಿ ದಿನಾಂಕ 12/4/22ರ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದರು. ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದ ಸಂತೋಷ್, ನನ್ನ ಪತ್ನಿ, ಮಕ್ಕಳಿಗೆ ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದರು.

ನನ್ನ ಸಾವಿಗೆ ನೇರ ಕಾರಣ ಕೆಎಸ್ ಈಶ್ವರಪ್ಪ. ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ, ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿಎಸ್​ ಯಡಿಯೂರಪ್ಪನವರು ಸಹಾಯ ಹಸ್ತ ನೀಡಬೇಕು. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು ಎಂದು ಸಂತೋಷ್ ಮಾಧ್ಯಮಗಳಿಗೆ ಕಳುಹಿಸಿದ್ದ ಸಂದೇಶದಲ್ಲಿ ತಿಳಿಸಿದ್ದರು.

KS Eshwarappa: ಸಿದ್ದಗಂಗಾ ಮಠಕ್ಕೆ ಬಂದ ಈಶ್ವರಪ್ಪಗೆ ವಿಭೂತಿ ಹಚ್ಚಿದ ಶ್ರೀಗಳು

ಇದನ್ನೂ ಓದಿ:

Video: ಅಸ್ಸಾಂನಲ್ಲಿ ರೋಂಗಾಲಿ ಬಿಹು ಸಂಭ್ರಮದಲ್ಲಿ ಆನೆಗಳ ಓಟದ ಸ್ಪರ್ಧೆ; ಕ್ಯೂಟ್ ಆಗಿ ಓಡಿದ ಗಜಗಳು !

ಮೈಸೂರು ಬಳಿಯ ವೀರನಹೊಸಹಳ್ಳಿಗೆ ನುಗ್ಗಿತೊಂದು ಕಾಡಾನೆ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ!

Published On - 8:26 pm, Fri, 15 April 22