ಹಿರಿಯ ಅಧಿಕಾರಿಗಳಿಂದಲೇ ಜಾತಿ ಗಣತಿಗೆ ಅಸಹಕಾರ: ಮುನೀಶ್ ಮೌದ್ಗಿಲ್ ಮನೆಯಲ್ಲಿ ಸಮೀಕ್ಷೆ ಮಾಡದೆ ಸಿಬ್ಬಂದಿ ವಾಪಸ್
ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹಿರಿಯ ಐಎಎಸ್ ಅಧಿಕಾರಿಗಳೇ ಅಸಹಕಾರ ತೋರುತ್ತಿದ್ದಾರೆ. ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರ ಮನೆಗೆ ಒಂದೆರಡಲ್ಲ ಮೂರು ಬಾರಿ ಗಣತಿಗೆಂದು ಹೋದ ಸಿಬ್ಬಂದಿ, ಸ್ಪಂದನೆ ಸಿಗದ ಹಿನ್ನಲೆ ಹಿಂದಿರುಗಿರುವ ಪ್ರಸಂಗ ನಡೆದಿದೆ. ಈ ಬಗ್ಗೆ ಸ್ವತಃ ಸಿಬ್ಬಂದಿಯೇ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 16: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆ (Caste Census) ಅಂತಿಮ ಹಂತ ತಲುಪಿದ್ದು, ಗಣತಿಕಾರ್ಯ ಭರದಿಂದ ಸಾಗಿದೆ. ಆದರೆ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳೇ ಸಮೀಕ್ಷೆಗೆ ಅಸಹಕಾರ ತೋರುತ್ತಿರುವ ಪ್ರಸಂಗಗಳು ಒಂದೊಂದೇ ವರದಿಯಾಗುತ್ತಿವೆ. ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣ ಮೂರ್ತಿ ಹಾಗೂ ಸುಧಾ ನಾರಾಯಣ ಮೂರ್ತಿ ದಂಪತಿ ಗಣತಿಯಲ್ಲಿ ಭಾಗವಹಿಸಲು ನಿರಾಕರಿಸಿರುವ ಬಗ್ಗೆ ನಿನ್ನೆಯಷ್ಟೇ ವರದಿಯಾಗಿತ್ತು. ಈಗ ಆ ಸಾಲಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸೇರ್ಪಡೆಯಾಗಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರ ಮನೆಗೆ ಸಮೀಕ್ಷೆಗೆಂದು ತೆರಳಿದ್ದ ಸಿಬ್ಬಂದಿ ಗಣತಿ ಮಾಡದೆ ಹಿಂದಿರುಗಿದ್ದಾರೆ. ಮನೆಯ ಕಾಲಿಂಗ್ ಬೆಲ್ ಮಾಡಿದಾಗ ಯಾರೂ ಮನೆಯ ಬಾಗಿಲು ತೆರೆಯದ ಕಾರಣ ಸಂದೇಶ ಕಳುಹಿಸಿದ್ದೇವೆ. ಪ್ರತಿಕ್ರಿಯೆ ನೀಡಿಲ್ಲ ಅಂತಾ ಅಪ್ಡೇಟ್ ಮಾಡಿ ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಒಟ್ಟು ಮೂರು ಬಾರಿ ಮನಿಶ್ ಮೌದ್ಗಿಲ್ ಮನೆಗೆ ಸಮೀಕ್ಷೆಗೆಂದು ತೆರಳಿದ್ದರೂ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳಿಗೆ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿದ ನಾರಾಯಣ ಮೂರ್ತಿ, ಸುಧಾಮೂರ್ತಿ ಕೊಟ್ಟ ಕಾರಣವಿದು
ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಜಾತಿ ಗಣತಿ ಆರಂಭವಾಗಿದ್ದು, ಈ ವಿಚಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಈ ಬಗ್ಗೆ ಮಧ್ಯಂತರ ಆದೇಶ ಪ್ರಕಟಿಸಿದ್ದ ನ್ಯಾಯಾಲಯ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತ್ತು. ಸಮೀಕ್ಷಕರಿಗೆ ಮಾಹಿತಿಯನ್ನು ಪಡೆಯಲು ಬಲವಂತ ಮಾಡುವಂತಿಲ್ಲ ಹಾಗೂ ಸಂಗ್ರಹಿಸಲಾದ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಬೇಕು ಎಂದು ಸೂಚಿಸಿತ್ತು. ಹೀಗಾಗಿ ಗಣತಿಗೆ ಬರುವ ಸಿಬ್ಬಂದಿಗೆ ಮಾಹಿತಿ ನೀಡಲು ಅನೇಕರು ನಿರಾಕರಿಸುತ್ತಿರುವ ಪ್ರಸಂಗಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ.
ನಾರಾಯಣ ಮೂರ್ತಿ ಹಾಗೂ ಸುಧಾ ನಾರಾಯಣ ಮೂರ್ತಿ ದಂಪತಿ ಕೂಡ ನಮ್ಮ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುದಿಲ್ಲ ಎಂದು ಹೇಳಿತ್ತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಬಗ್ಗೆ ಬರೆದ ಪತ್ರದಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇವೆ. ನಾವು ಹಿಂದುಳಿದ ಯಾವು ಜಾತಿಗೂ ಸೇರುವರಲ್ಲ. ಆದ್ದರಿಂದ ಈ ಸಮೀಕ್ಷೆ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ ಎಂದು ಉಲ್ಲೇಖಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Thu, 16 October 25




