ಬಿಬಿಎಂಪಿ ಗುತ್ತಿಗೆದಾರರ ದೂರು ಪ್ರತಿದೂರಿನ ತನಿಖೆ ಆರಂಭ; ದಯಾಮರಣ ಪತ್ರದ ಅಸಲಿ ಸಂಗತಿ ಏನು?
ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ರೆಡ್ಡಿ ನಿನ್ನೆ 10ಕ್ಕೂ ಅಧಿಕ ಕಾಂಟ್ರಾಕ್ಟರ್ ಗಳ ವಿಚಾರಣೆ ಮಾಡಿದ್ದಾರೆ. ಈ ವೇಳೆ ಗುತ್ತಿಗೆ ಪಡೆದ ಮಾಹಿತಿಯಿಂದ ಹಿಡಿದು ಬರಬೇಕಾದ ಬಿಲ್ ಮೊತ್ತದ ಜೊತೆಗೆ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಆ.19: ಬಿಬಿಎಂಪಿ ಗುತ್ತಿಗೆದಾರರ(BBMP Contractors) 28 ತಿಂಗಳಿಂದ ಬರಬೇಕಾದ ಬಿಲ್ ನ ಹಣ ಕೊಡದೇ ಬಿಬಿಎಂಪಿ(BBMP) ಅಧಿಕಾರಿಗಳು ತಡೆ ಹಿಡಿದಿದ್ದು, ಇದಕ್ಕೆ ಕಮಿಷನ್ ಆರೋಪ ಸಹ ಮಾಡಿದ್ದರು. ಕೊನೆಗೆ ರಾಜ್ಯಪಾಲರಿಗೆ(Karnataka Governor) ಪತ್ರ ಕೊಟ್ಟು ದಯಾಮರಣಕ್ಕೆ ಅವಕಾಶ ಕೊಡುವಂತೆ ಕೊರಿದ್ದರು. ಇದರ ನಡುವೆ ಬಿಬಿಎಂಪಿ ಅಧಿಕಾರಿ ಕೊಟ್ಟ ದೂರಿನ ಬೆನ್ನಲ್ಲೆ ತನಿಖೆ ಆರಂಭಗೊಂಡಿದ್ದು, ಆರಂಭದಲ್ಲೇ ಪೊಲೀಸರಿಗೆ ಆರೋಪಗಳ ನಡುವೆ ಅನುಮಾನ ಶುರುವಾಗಿದೆ. ಹೀಗಾಗಿ ಮೊದಲಿಗೆ ಗುತ್ತಿಗೆದಾರರಿಂದ ವಿಚಾರಣೆ ಆರಂಭಿಸಿರುವ ಪೊಲೀಸರು ಹೇಳಿಕೆ ಪ್ರಕ್ರಿಯೆ ಮುಂದುವರೆಸಿದ್ದಾರೆ.
ಮೊನ್ನೆ 20ಕ್ಕೂ ಅಧಿಕ ಗುತ್ತಿಗೆದಾರರ ವಿಚಾರಣೆ ನಡೆಸಿದ್ದ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ರೆಡ್ಡಿ ನಿನ್ನೆ 10ಕ್ಕೂ ಅಧಿಕ ಕಾಂಟ್ರಾಕ್ಟರ್ ಗಳ ವಿಚಾರಣೆ ಮಾಡಿದ್ದಾರೆ. ಈ ವೇಳೆ ಗುತ್ತಿಗೆ ಪಡೆದ ಮಾಹಿತಿಯಿಂದ ಹಿಡಿದು ಬರಬೇಕಾದ ಬಿಲ್ ಮೊತ್ತದ ಜೊತೆಗೆ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಆತ್ಮಹತ್ಯೆ ಬೆದರಿಕೆ ಆರೋಪ: ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲು
ಇನ್ನು ಇದೆಲ್ಲದರ ನಡುವೆ ಬಿಬಿಎಂಪಿಯಿಂದ ಗುತ್ತಿಗೆ ಪಡೆದು ಕೆಲಸ ಮಾಡಿದವರ ಸಂಖ್ಯೆ 38 ಆದ್ರೆ ರಾಜ್ಯಪಾಲರಿಗೆ ನೀಡಿದ ದಯಾಮರಣ ಪತ್ರದಲ್ಲಿ 57 ಜನರ ಸಹಿ ಇದ್ದು, ಉಳಿದ 19 ಮಂದಿ ಯಾರು ಅನ್ನೊ ಪ್ರಶ್ನೆ ಬಿಬಿಎಂಪಿ ಅಧಿಕಾರಿಗಳಿಂದ ಮೂಡಿದೆ. ಈ ಆಯಾಮದಲ್ಲಿ ಸಹ ತನಿಖೆ ನಡೆಸುತ್ತಿರುವ ಪೊಲೀಸರು ದಯಾಮರಣ ಪತ್ರಕ್ಕೆ ಸಹಿ ಹಾಕಿದವರ ಕ್ರಮಾಂಕದ ಆಧಾರದಲ್ಲಿ ಬುಲಾವ್ ಮಾಡಿ ವಿಚಾರಣೆ ಮಾಡುವುದರ ಜೊತೆಗೆ ಗುತ್ತಿಗೆ ಪಡೆದಿದ್ದರೇ, ಪಡಿದಿಲ್ಲವಾದರೇ ಈ ರೀತಿ ಸಹಿ ಮಾಡಿದರ ಅಸಲಿ ಕಾರಣ ಏನು ಎಂಬ ಬಗ್ಗೆ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಸದ್ಯ ಗುತ್ತಿಗೆದಾರರ ವಿಚಾರಣೆ ನಡೆಸುತ್ತಿರುವ ಶೇಷಾದ್ರಿಪುರಂ ಎಸಿಪಿ ನೇತೃತ್ವದ ಹೈಗ್ರೌಂಡ್ ಪೊಲೀಸರು ಕಾಂಟ್ರಾಕ್ಟ್ ಸಂಬಂಧಿತ ಕೆಲ ಮಹತ್ವದ ದಾಖಲೆ ಒದಗಿಸುವಂತೆ ಕೇಳಿದ್ದು, ಅದರಂತೆ ಗುತ್ತಿಗೆದಾರರಿಗೆ ಕೆಲ ದಿನಗಳ ಕಾಲಾವಾಕಾಶ ನೀಡಿದ್ದಾರೆ. ಮತ್ತೊಂದೆಡೆ ಗುತ್ತಿಗೆದಾರರ ವಿಚಾರಣೆ ಬಳಿಕ ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ಆರಂಭವಾಗಲಿದ್ದು, ಕಾಂಟ್ರಾಕ್ಟ್ ಹಿಂದೆ ಕೇಳಿ ಬಂದ ಕಮಿಷನ್ ಕಥೆಯ ಅಸಲಿ ಸತ್ಯ ಬಯಲಾಗಲಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:57 am, Sat, 19 August 23



