ಅವರ ಬುಟ್ಟಿಯಲ್ಲಿ ಹಾವಿಲ್ಲ, ಬರೀ ಬುಸ್ಬುಸ್ ಅಂತ ಬರ್ತಿದೆ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಲಂಚದ ಬಗ್ಗೆ ಮಾತನಾಡುವಾಗ ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ತಲುಪಿಸಲೆಂದು ಅಕ್ಕಿ, ಬೇಳೆ, ರಾಗಿಯನ್ನೂ ಕಾಂಗ್ರೆಸ್ ನಾಯಕರು ತಂದಿದ್ದಾರೆ.
ಬೆಂಗಳೂರು: ನಮ್ಮ ಸರ್ಕಾರವು ಅಧಿಕಾರದಲ್ಲಿದ್ದಾಗ ಹಗರಣಗಳು ಆಗಿವೆ ಎಂದು ಈಗ ಹೇಳುತ್ತಿದ್ದಾರೆ. ಆಗ ಇವರೇನು ಮಾಡುತ್ತಿದ್ದರು ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramiah) ಪ್ರಶ್ನಿಸಿದರು. ಯಾವ ಕಾಲದಲ್ಲಿಯೇ ಹಗರಣ ಆಗಿರಲಿ ಮೊದಲು ತನಿಖೆ ಮಾಡಿ ಎಂದು ನಾನು ಈಗಲೂ ಒತ್ತಾಯಿಸುತ್ತಾನೆ. 2006ರಿಂದ ಇಲ್ಲಿಯವರೆಗೂ ಏನೆಲ್ಲಾ ಆಗಿದೆಯೋ ಅದರ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ನಾನು ಇದಕ್ಕಿಂತ ಇನ್ನೇನು ತಾನೆ ಹೇಳಲು ಸಾಧ್ಯ ಎಂದು ಕೇಳಿದ ಸಿದ್ದರಾಮಯ್ಯ, ಅವರ ಬುಟ್ಟಿಯಲ್ಲಿ ಹಾವಿಲ್ಲ ಬರೀ ಬುಸ್ಬುಸ್ ಅಂತ ಬರ್ತಿದೆ ಎಂದು ವ್ಯಂಗ್ಯವಾಡಿದರು.
ಲಂಚ ಕೊಟ್ಟು ಕೆಲಸ ಪಡೆದುಕೊಳ್ಳಲು ಆಗುವುದಿಲ್ಲ ಎನ್ನುತ್ತಿರುವ ಪಿಎಸ್ಐ ಹುದ್ದೆಯ ಅಕಾಂಕ್ಷಿಗಳು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಬಳಿ ಹಣ ಇಲ್ಲ. ಹಣದ ಬದಲಿಗೆ ನಾವು ಬೆಳೆದಿರುವ ಅಕ್ಕಿ, ಕಾಳು ಕೊಡುತ್ತೇವೆ ಎನ್ನುತ್ತಿದ್ದಾರೆ. ಅವರು ಕೊಡುವ ಅಕ್ಕಿ, ಬೇಳೆ ಎಲ್ಲವನ್ನೂ ಸಭಾಧ್ಯಕ್ಷರ ಮೂಲಕ ರಾಜ್ಯ ಸರ್ಕಾರಕ್ಕೆ ಕೊಡುತ್ತೇನೆ. ಸದನದಲ್ಲಿ ಪಿಎಸ್ಐ ಹಗರಣ ಹಾಗೂ ವಯೋಮಿತಿ ಹೆಚ್ಚಳದ ಬಗ್ಗೆ ನಾನು ಪ್ರಸ್ತಾಪ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಸದನದಲ್ಲಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಲಂಚದ ಬಗ್ಗೆ ಮಾತನಾಡುವಾಗ ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ತಲುಪಿಸಲೆಂದು ಅಕ್ಕಿ, ಬೇಳೆ, ರಾಗಿಯನ್ನೂ ಕಾಂಗ್ರೆಸ್ ನಾಯಕರು ತಂದಿದ್ದಾರೆ.
Published On - 12:09 pm, Tue, 20 September 22