ಇದು ನನ್ನ ಕೊನೆ ಚುನಾವಣೆ: ಬಿಜೆಪಿಯನ್ನ ಸೋಲಿಸಲು ಸ್ಪರ್ಧಿಸುತ್ತಿದ್ದೇನೆ -ಟಿವಿ9 ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸಂದರ್ಶನ

ಕೆಲವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲುವಂತೆ ಹೇಳುತ್ತಿದ್ದಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲವೆಂದು ಹೇಳಿದ್ದೇನೆ. ಬಿಜೆಪಿಯನ್ನು ಸೋಲಿಸಲು ಈ ಬಾರಿ ಚುನಾವಣೆಗೆ ನಿಲ್ಲುತ್ತಿದ್ದೇನೆ. ಹೀಗಾಗಿಯೇ 2023ರ ಚುನಾವಣೆ ಕೊನೆ ಚುನಾವಣೆಯಾಗಲಿದೆ.

ಇದು ನನ್ನ ಕೊನೆ ಚುನಾವಣೆ: ಬಿಜೆಪಿಯನ್ನ ಸೋಲಿಸಲು ಸ್ಪರ್ಧಿಸುತ್ತಿದ್ದೇನೆ -ಟಿವಿ9 ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸಂದರ್ಶನ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ಆಯೇಷಾ ಬಾನು

Updated on: Jul 19, 2022 | 3:15 PM

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟು ಹಬ್ಬದಂದು ಸಿದ್ದರಾಮೋತ್ಸವ ಆಚರಿಸಲು ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಹಾಗೂ ಮತ್ತೊಂದು ಕಡೆ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕೆಲವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲುವಂತೆ ಹೇಳುತ್ತಿದ್ದಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲವೆಂದು ಹೇಳಿದ್ದೇನೆ. ಬಿಜೆಪಿಯನ್ನು ಸೋಲಿಸಲು ಈ ಬಾರಿ ಚುನಾವಣೆಗೆ ನಿಲ್ಲುತ್ತಿದ್ದೇನೆ. ಹೀಗಾಗಿಯೇ 2023ರ ಚುನಾವಣೆ ಕೊನೆ ಚುನಾವಣೆಯಾಗಲಿದೆ. ಸಕ್ರಿಯ ರಾಜಕಾರಣ ನಡೆಸಲು ಫಿಟ್ ಆಗಿರಬೇಕು. 79 ವರ್ಷ ತುಂಬಿದ ಮೇಲೆ ಚುನಾವಣೆಗೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗುವ ಅವಕಾಶ ಕೊಟ್ರೆ ಬೇಡವೆಂದು ಹೇಳಲ್ಲ. ಮುಖ್ಯಮಂತ್ರಿಯಾಗುವ ಆಸೆ ಇದ್ರೆ ಅದು ಯಾವುದೇ ತಪ್ಪಿಲ್ಲ. ಜನ ಬಯಸಿದರೆ, ಶಾಸಕರು ಬಯಸಿದರೆ ಯಾವುದೇ ತಪ್ಪಿಲ್ಲ. ಡಿ.ಕೆ.ಶಿವಕುಮಾರ್ ಸಿಎಂ ಆಗುವ ಆಸೆ ವ್ಯಕ್ತಿಪಡಿಸಿದರೆ ತಪ್ಪಿಲ್ಲ. ಶಾಸಕರು, ಹೈಕಮಾಂಡ್ ಸಮ್ಮತಿಸಿದರೆ ಸಿಎಂ ಆಗಬಹುದು ಎಂದು ಟಿವಿ9 ಸಂದರ್ಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹುಟ್ಟುಹಬ್ಬವನ್ನ ಸಿದ್ದರಾಮೋತ್ಸವ ಎಂದು ಆಚರಣೆ ಮಾಡುತ್ತಿಲ್ಲ

ಹುಟ್ಟುಹಬ್ಬವನ್ನ ಸಿದ್ದರಾಮೋತ್ಸವ ಎಂದು ಆಚರಣೆ ಮಾಡುತ್ತಿಲ್ಲ. ನನ್ನ ಆಪ್ತರು, ಸ್ನೇಹಿತರು, ಹಿತೈಷಿಗಳು ಸೇರಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ನೆನಪಿನಲ್ಲಿರಲು ಆಚರಣೆ ಮಾಡುತ್ತಿದ್ದಾರೆ. ನಾನು ನಡೆದು ಬಂದ ಹಾದಿ ಮೆಲುಕು ಹಾಕುವ ಕೆಲಸ ಇದು. ನಾನು ಯಾವತ್ತೂ ಬರ್ತ್ಡೇ ಆಚರಣೆ ಮಾಡಿಲ್ಲ, ಕೇಕ್ ಕಟ್ ಮಾಡಿಲ್ಲ. ನನ್ನ ಹುಟ್ಟಿದ ದಿನಾಂಕ ಖಚಿತವಾಗಿ ನನಗೆ ಗೊತ್ತಿಲ್ಲ. ನಾನು ಹುಟ್ಟಿದ ದಿನಾಂಕ 12-8-1948 ಅಂದುಕೊಂಡಿದ್ದೆ. ಶಾಲೆಗೆ ಸೇರಿಸಿಕೊಂಡ ಶಿಕ್ಷಕರು 3-8-1947 ಎಂದು ಹೇಳಿದ್ರು. ಶಿಕ್ಷಕರು ಉಲ್ಲೇಖಿಸಿದ ದಿನಾಂಕವೇ ನನ್ನ ಹುಟ್ಟಿದ ದಿನಾಂಕವಾಗಿದೆ. ಕೆಲವರು ಕಾರುಗಳಿಗೆ ಸಿದ್ದರಾಮೋತ್ಸವ ಎಂದು ಹಾಕಿಕೊಂಡಿದ್ದಾರೆ. ಅವರಿಗೆ ನಾನು ಬೇಡ ಎಂದು ಹೇಳಲು ಸಾಧ್ಯವಿಲ್ಲ. ಪೋಸ್ಟರ್‌ಗಳಲ್ಲಿ ಸಿದ್ದರಾಮೋತ್ಸವ ಎಂದು ಇರಲಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸುಮಾರು 16 ವರ್ಷಗಳು ಕಳೆದಿದೆ. ಅನೇಕರು ನಾನು ಬರುವುದಕ್ಕಿಂತ ಮೊದಲೇ ಪಕ್ಷ ಸೇರಿಕೊಂಡಿದ್ದರು. ಪ್ರೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನ ಸ್ವೀಕರಿಸಬೇಕು. ಎಲ್ಲರಿಗೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದರು.

ಬಿಜೆಪಿ ಸರ್ಕಾರದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ

2023ರ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಲಿದೆ. 5 ವರ್ಷ ಸಂಪೂರ್ಣವಾಗಿ ರಾಜ್ಯ ಸರ್ಕಾರವನ್ನು ನಡೆಸಿದ್ದೇನೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಬಿಜೆಪಿ ಸರ್ಕಾರ ನಡೆಸ್ತಿದೆ. ಬಿಜೆಪಿ ಸರ್ಕಾರದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ಜನಸಾಮಾನ್ಯರ ಜೀವನ ಬಹಳ ಕಷ್ಟಕರವಾಗಿದೆ. ಕೋಮುವಾದಿ ಪಕ್ಷ ಬಿಜೆಪಿ ಸೋಲಿಸಲು ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕೋಮುವಾದ, ಧರ್ಮ ಆಧಾರಿತವಾಗಿ ಅಧಿಕಾರ ನಡೆಸ್ತಿದ್ದಾರೆ. ಬಿಜೆಪಿ ಸರ್ಕಾರ ಜನರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಎಂದು ನಿರ್ಧರಿಸಿಲ್ಲ. ಬಾದಾಮಿ, ಕೋಲಾರ, ಹುಣಸೂರು, ವರುಣಾದಿಂದ ಕರೀತಿದ್ದಾರೆ. ಸುಮಾರು 15 ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಕರೆದಿದ್ದರು ಹಾಗಾಗಿ ಹೋಗಿದ್ದೆ. ನನ್ನ ಹುಟ್ಟುಹಬ್ಬಕ್ಕೆ ಬೇರೆ ಬೇರೆ ಪಕ್ಷಗಳ ನಾಯಕರನ್ನ ಕರೆದಿಲ್ಲ. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್‌ರನ್ನು ಆಹ್ವಾನಿಸಿದ್ದೇವೆ. ಸಾರ್ವಜನಿಕ ಕೆಲಸಗಳಿಗೆ ಮಾತ್ರ ಸಿಎಂಗೆ ಫೋನ್ ಮಾಡಿದ್ದೇನೆ. ನನ್ನ ಜೀವನದಲ್ಲಿ ಯಾವುದೇ ಮುಖ್ಯಮಂತ್ರಿ ಮನೆಗೆ ಹೋಗಿಲ್ಲ ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪವಿದೆ. ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಯಾವುದೇ ಕ್ರಮಕೈಗೊಂಡಿಲ್ಲ. ಪಠ್ಯ ಪರಿಷ್ಕರಣೆ ವೇಳೆ ಇತಿಹಾಸ ತಿರುಚುವ ಯತ್ನ ಮಾಡಿದ್ದರು. ಸಂವಿಧಾನ ಶಿಲ್ಪಿ ಪದ ಏಕೆ ತೆಗೆದರು, ಅದರಿಂದ ಏನು ಸಮಸ್ಯೆ. ಚರಿತ್ರೆ ಹೇಗಿದೆಯೋ ಅದನ್ನು ಹಾಗೆಯೇ ಮಕ್ಕಳಿಗೆ ತಿಳಿಸಬೇಕು. ಕೊಡಕು ಮನಸು, ದುರುದ್ದೇಶದಿಂದ ತಿರುಚುವ ಕೆಲಸ ಆಗಬಾರದು. ಜೆಡಿಎಸ್ ಬಗ್ಗೆ ನನಗೆ ಏನನ್ನೂ ಕೇಳಬೇಡಿ, ಉತ್ತರ ಕೊಡುವುದಿಲ್ಲ ಎಂದು ಬಿಜೆಪಿಯ ವಿರುದ್ಧ ಆಕ್ರೋಶ ಹೊರ ಹಾಕಿ ಜೆಡಿಎಸ್ ಸಂಬಂಧ ಮಾತನಾಡಲು ತಿರಸ್ಕರಿಸಿದ್ದಾರೆ.