ಕುಮಾರಸ್ವಾಮಿ ತಮ್ಮ ವಿರುದ್ಧ ಎರಡೆರಡು ಟೆಸ್ಟ್ ಸರಣಿಗಳಷ್ಟು ಉದ್ದ ಟ್ವೀಟ್ ಮಾಡಿದರೂ ಸಿದ್ದರಾಮಯ್ಯ ಪ್ರತಿಕ್ರಿಯಿಸುವುದಿಲ್ಲ ಎಂದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 22, 2022 | 4:33 PM

ಕುಮಾರಸ್ವಾಮಿ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಅವರು ಬಳಸುವ ಭಾಷೆ ಅವರ ಸಂಸ್ಕೃತಿ ತೋರಿಸುತ್ತೆ ಎಂದರು. ಕುಮಾರ ಸ್ವಾಮಿಗೆ ನನ್ನ ಕಂಡರೆ ಭಯವಿರಬೇಕು ಹಾಗಾಗಿ ನನ್ನ ಟೀಕಿಸುತ್ತಿರುತ್ತಾರೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಅವರು ಮತ್ತು ಹೆಚ್ಡಿ ದೇವೇಗೌಡರು ಸೋತಿಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು.

ಕುಮಾರಸ್ವಾಮಿ ತಮ್ಮ ವಿರುದ್ಧ ಎರಡೆರಡು ಟೆಸ್ಟ್ ಸರಣಿಗಳಷ್ಟು ಉದ್ದ ಟ್ವೀಟ್ ಮಾಡಿದರೂ ಸಿದ್ದರಾಮಯ್ಯ ಪ್ರತಿಕ್ರಿಯಿಸುವುದಿಲ್ಲ ಎಂದರು!
ಸಿದ್ದರಾಮಯ್ಯ ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us on

ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ವಾಕ್ಸಮರ ಜಾರಿಯಲ್ಲಿದೆ. ಸಿದ್ದರಾಮಯ್ಯ ಯಾವುದಾದರೂ ಸಭೆಯಲ್ಲಿ ಇಲ್ಲವೇ ಸುದ್ದಿಗೋಷ್ಟಿಯಲ್ಲಿ ಹೆಚ್ ಡಿ ಕೆ ಅಥವಾ ಜೆಡಿ(ಎಸ್) ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಅದಕ್ಕೆ ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸುತ್ತಾರೆ. ಇತ್ತೀಚಿಗೆ ಸಿದ್ದರಾಮಯ್ಯನವರು ತುಮಕೂರಿನಲ್ಲಿ (Tumakuru) ಜಿಎಡಿಎಸ್‌ ಪಕ್ಷವು ಬಿಜೆಪಿಯ ಬಾಲಂಗೋಚಿ, ತುಮಕೂರಿನಿಂದ ಜೆಡಿ(ಎಸ್‌) ಓಡಿಸಬೇಕು ಅದಕ್ಕೆ ಯಾವುದೇ ಸಿದ್ಧಾಂತವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಅದಕ್ಕೆ ಉತ್ತರವಾಗಿ ಕುಮಾಸ್ವಾಮಿಯವರು ಸರಣಿ ಟ್ವೀಟ್ ಮೂಲಕ ಕಟುವಾಗಿ ಉತ್ತರಿಸಿದ್ದಾರೆ. ಅವರ ಟ್ವೀಟ್ಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಶನಿವಾರ ಮಾಧ್ಯಮದವರು ಸಿದ್ದರಾಮಯ್ಯನವರನ್ನು ಕೇಳಿದಾಗ ಕುಮಾರಸ್ವಾಮಿ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಅವರು ಬಳಸುವ ಭಾಷೆ ಅವರ ಸಂಸ್ಕೃತಿ ತೋರಿಸುತ್ತೆ ಎಂದರು. ಕುಮಾರ ಸ್ವಾಮಿಗೆ ನನ್ನ ಕಂಡರೆ ಭಯವಿರಬೇಕು ಹಾಗಾಗಿ ನನ್ನ ಟೀಕಿಸುತ್ತಿರುತ್ತಾರೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಅವರು ಮತ್ತು ಹೆಚ್ಡಿ ದೇವೇಗೌಡರು ಸೋತಿಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯನವರ ತುಮಕೂರು ಹೇಳಿಕೆಗೆ ಪ್ರತಿಯಾಗಿ ಕುಮಾರಸ್ವಾಮಿಯವರು ತಮ್ಮ ಶನಿವಾರದ ಸರಣಿ ಟ್ವೀಟ್ಗಳಲ್ಲಿ ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ.
ಜೆಡಿಎಸ್‌ ಪಕ್ಷವನ್ನು ತುಮಕೂರಿನಿಂದ ಓಡಿಸುವುದಿರಲಿ, ನಿಮ್ಮನ್ನೇ ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿಸಿದ್ದಾರೆ. ಇನ್ನು ಬಾದಾಮಿ ಕ್ಷೇತ್ರದಿಂದ ಓಡಿಸುವುದು ಬಾಕಿ ಇದೆ ಎಂದು ಸಿದ್ದರಾಮಯ್ಯ ಅವರಿಗೆ ಹೆಚ್ಡಿಕೆ ನೇರವಾಗಿ ಟಾಂಗ್‌ ನೀಡಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್ನಲ್ಲಿ ಹೆಚ್ಡಿಕೆ, ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ದಮ್ಮಿಲ್ಲ. ಗೆದ್ದಲು ಕಟ್ಟಿದ ಹುತ್ತದಲ್ಲಿ ವಿಷಸರ್ಪದಂತೆ ಹೋಗಿ ಸೇರಿಕೊಳ್ಳುವ, ಕಂಡವರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ಸಿದ್ದರಾಮಯ್ಯ.. ನೀವಾ ಜೆಡಿಎಸ್ ಬಗ್ಗೆ ಮಾತನಾಡುವುದು? ಎಂದಿದ್ದಾರೆ

ಕಾಂಗ್ರೆಸ್ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದಿರಿ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಸೋತಾಗ ಅಳುತ್ತಾ ರಾಜಕೀಯ ರಾಜಕೀಯ ಬಿಟ್ಟು ವಕೀಲ ವೃತ್ತಿ ಮಾಡುತ್ತೇನೆ ಅಂದಿದ್ದು ಮರೆತಿರಾ ಎಂದು ಪ್ರಶ್ನಿಸಿದ್ದಾರೆ.

ಪ್ರತಿಯೊಂದಕ್ಕೂ ಈ ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ‘ಸುಳ್ಳು ನಾಲಗೆʼ, ಅದೇ ಸರಕಾರ ಅಧಿಕಾರಕ್ಕೆ ಬರಲು ಮೂಲ ಕಾರಣರಾದ ‘ಸಿದ್ದಪುರುಷʼ ಯಾರು ಎನ್ನುವುದನ್ನು ಹೇಳಲಿಲ್ಲವೇಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗದೆಯೋ ಇಲ್ಲವೋ ಅನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ ಎಂದು ಕುಮಾರಸ್ವಾಮಿ ತಮ್ಮ ಐದನೇ ಟ್ವೀಟ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ‘ಆಪರೇಷನ್ ಹಸ್ತʼವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು, ಅಲ್ಲಿನ ಮೂಲನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ? ನೀವು ಜೆಡಿಎಸ್ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು ನಿಮಗೆ ಅಂತ ಕುಮಾರಸ್ವಾಮಿ ಸಿದ್ದರಾಮಯ್ಯನವರ ಸಿದ್ಧಾಂತಗಳನ್ನು ಜರಿದಿದ್ದಾರೆ.

ತಮ್ಮ ಕೊನೆಯ ಟ್ವೀಟ್ನಲ್ಲಿ ಜೆಡಿ(ಎಸ್) ನಾಯಕರು ಸಿದ್ದರಾಮಯ್ಯನವರಿಗೆ ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಹೇಳುವುದು ಮಾತ್ರ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ ಅಂತೆಲ್ಲ ಹೇಳಿದ್ದಾರೆ.

ಕುಮಾರಸ್ವಾಮಿಯವರ ಈ ಟ್ವೀಟ್ ಸರಣಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:  ನೈಟ್​ಕರ್ಫ್ಯೂ, ವೀಕೆಂಡ್​ ಕರ್ಫ್ಯೂಗಳಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ: ಎಚ್​ಡಿ ಕುಮಾರಸ್ವಾಮಿ ಆಗ್ರಹ

Published On - 4:31 pm, Sat, 22 January 22